ಚೆನ್ನೈ: ಎರಡು ವರ್ಷಗಳ ಹಿಂದಷ್ಟೇ ಕಾಲಿವುಡ್ ನಟ ಆರ್ಯ ಅವರನ್ನು ಮದುವೆಯಾಗಿದ್ದ 'ಯುವರತ್ನ' ಖ್ಯಾತಿಯ ಸಯೇಷಾ, ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆರ್ಯ ಅಭಿನಯದ 'ಸರ್ಪಟ್ಟ ಪರಂಬೈ' ಚಿತ್ರವು ಇತ್ತೀಚೆಗಷ್ಟೇ ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿತ್ತು, ಇದೀಗ ತಂದೆಯಾದ ಖುಷಿಯಲ್ಲಿ ಆರ್ಯ ಇದ್ದಾರೆ.
ಅಂದಹಾಗೆ, ಸಯೇಷಾ ತಾಯಿಯಾದ ಸುದ್ದಿಯನ್ನು ಬಹಿರಂಗಪಡಿಸಿದ್ದು, ಸಯೇಷಾ ಅಥವಾ ಆರ್ಯ ಅಲ್ಲ, ಬದಲಿಗೆ ಆರ್ಯ ಅವರ ಆಪ್ತಮಿತ್ರನಾಗಿರುವ ತಮಿಳು ನಟ ವಿಶಾಲ್. ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಶಾಲ್, 'ನಾನು ಅಂಕಲ್ ಆಗಿದ್ದೀನಿ. ನನ್ನ ಸಹೋದರ ಜಮ್ಮಿ ಮತ್ತು ಸಯೇಶಾ ಹೆಣ್ಣು ಮಗುವಿನ ತಂದೆ-ತಾಯಿಯಾಗಿದ್ದಾರೆ. ಚಿತ್ರೀಕರಣದ ಒತ್ತಡದ ನಡುವೆಯೂ ಈ ವಿಷಯ ಕೇಳಿ ಸಂತೋಷವಾಯಿತು. ಆರ್ಯ ಅಪ್ಪನಾಗಿ ಹೊಸ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾನೆ. ಅವನಿಗೆ ಯಾವತ್ತೂ ಒಳ್ಳೆಯದಾಗಲಿ' ಎಂದು ಶುಭ ಹಾರೈಸಿದ್ದಾರೆ.
ಆರ್ಯ ಮತ್ತು ಸಯೇಷಾ ತಂದೆ-ತಾಯಿಯಾದ ವಿಷಯ ಹೊರಬೀಳುತ್ತಿದ್ದಂತೆ, ಈ ದಂಪತಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸೋಷಿಯಲ್ ಮೀಡಿಯಾ ಮೂಲಕ ಶುಭಹಾರೈಸಿದ್ದಾರೆ.
ಕಾರಣಾಂತರಗಳಿಂದ, ಸಯೇಷಾ ತಾನು ಗರ್ಭಿಣಿ ಆಗಿರುವ ವಿಚಾರವನ್ನು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಆರ್ಯ ಸಹ ತಾನು ತಂದೆಯಾಗುತ್ತಿರುವ ವಿಷಯವನ್ನು ಎಲ್ಲೂ ಪ್ರಚಾರ ಮಾಡಿರಲಿಲ್ಲ. ಈಗ ಈ ದಂಪತಿಗೆ ಹೆಣ್ಣು ಮಗುವಾಗಿರುವ ವಿಷಯ ಎಲ್ಲರಿಗೂ ಅಚ್ಚರಿ ಮೂಡಿಸುವುದರ ಜತೆಗೆ, ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಈ ವರ್ಷದ ಏಪ್ರಿಲ್ ಒಂದರಂದು ಬಿಡುಗಡೆಯಾದ 'ಯುವರತ್ನ' ಚಿತ್ರದ ನಂತರ ಸಯೇಷಾ ಯಾವೊಂದು ಹೊಸ ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಈಗ ತಾಯ್ತನದ ಜವಾಬ್ದಾರಿ ಇರುವುದರಿಂದ, ಇನ್ನೂ ಸ್ವಲ್ಪ ಸಮಯ ಅವರು ಯಾವೊಂದು ಚಿತ್ರವನ್ನು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆಯೇ.