Rajinikanth : ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಹಾಗೂ ಅಭಿಮಾನಿಗಳ ನೆಚ್ಚಿನ ತಲೈವಾ ನಟ ರಜಿನಿಕಾಂತ್ ಅಭಿನಯದ ಹಾಗೂ ಖ್ಯಾತ ಯುವ ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನದ ಬಹುನಿರೀಕ್ಷಿತ ‘ಕೂಲಿ’ ಸಿನಿಮಾ ಇದೇ ಆಗಸ್ಟ್ 14ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ‘ಕೂಲಿ’ ಕ್ರೇಜ್ ಶುರುವಾಗಿದ್ದು, ಮುಂಗಡ ಬುಕ್ಕಿಂಗ್ಗಳ ಸಂಖ್ಯೆ ಭರ್ಜರಿಯಾಗಿವೆ. ಬಿಡುಗಡೆಗೂ ಮುನ್ನವೇ ಕೂಲಿ ಸಿನಿಮಾ ಸಖತ್ ಸದ್ದು ಮಾಡುತ್ತಿದೆ.
ಕೂಲಿ ಸಿನಿಮಾದ ಪ್ರಮುಖ ಹೈಲೈಟ್ಸ್ ಏನೆಂದರೆ, ಅದರ ತಾರಾ ಬಳಗ. ರಜಿನಿಕಾಂತ್ ಮಾತ್ರವಲ್ಲದೇ ವಿವಿಧ ಚಿತ್ರರಂಗದ ಸೂಪರ್ ಸ್ಟಾರ್ಗಳ ದಂಡೇ ಈ ಸಿನಿಮಾದಲ್ಲಿದೆ. ಬಾಲಿವುಡ್ನಿಂದ ಆಮೀರ್ ಖಾನ್, ಟಾಲಿವುಡ್ನಿಂದ ನಾಗಾರ್ಜುನ್, ಸ್ಯಾಂಡಲ್ವುಡ್ನಿಂದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಮಾಲಿವುಡ್ನಿಂದ ಶೌಬಿನ್ ಶಾಹೀರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ, ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಕೂಡ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶ್ರುತಿ ಹಾಸನ್ ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವಿಶೇಷ ಹಾಡೊಂದಕ್ಕೆ ನಟಿ ಪೂಜಾ ಹೆಗ್ಡೆ ಸೊಂಟ ಬಳುಕಿಸಿದ್ದಾರೆ.
ಇತ್ತೀಚೆಗಷ್ಟೇ ಈ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಈ ವೇಳೆ ಕೂಲಿ ಚಿತ್ರದ ಎಲ್ಲ ಕಲಾವಿದರು ಭಾಗವಹಿಸಿದ್ದರು. ಈ ಸಮಾರಂಭದಲ್ಲಿ ರಜನಿಕಾಂತ್ ಆಡಿದ ಕೆಲವು ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಅದರಲ್ಲೂ ಮಲಯಾಳಂ ನಟ ಸೌಬಿನ್ ಶಾಹಿರ್ ಮತ್ತು ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಬಗ್ಗೆ ರಜನಿಕಾಂತ್ ಅವರ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿದದೆ.
ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಜನಿಕಾಂತ್, ಸೌಬಿನ್ ಅವರು ಈ ಚಿತ್ರದಲ್ಲಿ ಹೇಗೆ ಕಾಣಿಸಿಕೊಂಡರು ಎಂಬುದನ್ನು ಬಣ್ಣಿಸಿದರು. ಆರಂಭದಲ್ಲಿ, ಈ ಪಾತ್ರಕ್ಕೆ ಫಹಾದ್ ಫಾಸಿಲ್ ಅವರನ್ನು ಆಯ್ಕೆ ಮಾಡಲಾಯಿತು. ಆದರೆ, ಅವರಿಗೆ ಬೇರೆ ಕಮಿಟ್‌ಮೆಂಟ್‌ಗಳು ಇದ್ದ ಕಾರಣ ಕಾರ್ಯರೂಪಕ್ಕೆ ಬರಲಿಲ್ಲ. ಬದಲಾಗಿ, ಲೋಕೇಶ್ ಕನಗರಾಜ್ ಅವರು ಸೌಬಿನ್ ಅವರನ್ನು ಆಯ್ಕೆ ಮಾಡಿದರು. ಮಂಜುಮ್ಮೇಲ್ ಬಾಯ್ಸ್ ಚಿತ್ರದಲ್ಲಿ ಸೌಬಿನ್ ಇದ್ದಾರೆ ಎಂದು ಲೋಕೇಶ್ ಹೇಳಿದರು. ಆದರೆ, ಕೂಲಿ ಚಿತ್ರದ ಈ ಪಾತ್ರಕ್ಕೆ ಅವರು ಸೂಕ್ತರೇ ಎಂಬ ಬಗ್ಗೆ ನನಗೆ ಅನುಮಾನವಿತ್ತು. ಸೌಬಿನ್ ಬೋಳು ತಲೆಯ ವ್ಯಕ್ತಿಯಾಗಿರಬೇಕು ಎಂದು ನಾನು ಅನುಮಾನ ವ್ಯಕ್ತಪಡಿಸಿದೆ. ಆದರೆ, ಲೋಕೇಶ್ ಅವರಿಗೆ ತಮ್ಮ ವಿಷಯಗಳ ಬಗ್ಗೆ ಸ್ಪಷ್ಟನೆ ಇತ್ತು. ಸೌಬಿನ್ ಅವರ ಅಭಿನಯವನ್ನು ನೋಡಿದಾಗ, ನಾನು ನಿಜವಾಗಿಯೂ ಶಾಕ್ ಆದೆ. ಅವರೊಬ್ಬ ಅದ್ಭುತ ನಟ ಎಂದು ರಜನಿಕಾಂತ್ ಹೇಳಿದರು.
ಇನ್ನು ಈ ಚಿತ್ರದಲ್ಲಿ ಅಮೀರ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಅಮೀರ್ ಖಾನ್ ಎಂದು ಕೇಳಿದಾಗ, ನಾನು ಮೊದಲು ನಂಬಲಿಲ್ಲ. ಸ್ಕ್ರಿಪ್ಟ್ ಓದಿ ಓಕೆ ಎಂದು ಹೇಳಲು ಅವರಿಗೆ ಎರಡು ವರ್ಷಗಳು ಬೇಕಾಗುತ್ತದೆ. ಹಾಗಾದರೆ, ಈ ಚಿತ್ರಕ್ಕೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಯೋಚಿಸಿದೆ. ಅಮೀರ್ ಒಬ್ಬ ಪರ್ಫೆಕ್ಷನಿಸ್ಟ್. ನಮ್ಮಲ್ಲಿ (ತಮಿಳುನಾಡು) ಕಮಲ್ ಹಾಸನ್ ಹೇಗೋ, ಉತ್ತರ ಭಾರತದಲ್ಲಿ ಅವರು ಹಾಗೆ” ಎಂದರು. ಒಂದು ಕಡೆ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ನಿಂತಿದ್ದಾರೆ ಮತ್ತು ಅವರ ನಡುವೆ ಕುಬ್ಜ ಅಮೀರ್ ಖಾನ್ ಇದ್ದಾರೆ. ಮೂವರು ಖಾನ್‌ಗಳಲ್ಲಿ ಅಮಿರ್ ಅವರೇ ಅತ್ಯುತ್ತಮ ಎಂದು ರಜನಿಕಾಂತ್ ಹೇಳಿದರು.
ಇನ್ನು ಸಂಭಾಷಣೆಯ ಸಮಯದಲ್ಲಿ ಬಂದ ಬೋಳು ಮತ್ತು ಕುಬ್ಜ ಪದಗಳು ಈಗ ತಾರೆಯನ್ನು ಮುಜುಗರಕ್ಕೀಡು ಮಾಡಿವೆ. ರಜನಿಕಾಂತ್ ಈ ಪದಗಳನ್ನು ತಪ್ಪಿಸಬಹುದಿತ್ತು ಎಂದು ಚಲನಚಿತ್ರ ಪ್ರೇಮಿಗಳು ಹೇಳುತ್ತಿದ್ದಾರೆ. ರಜನಿಕಾಂತ್ ಅವರಂತಹ ವ್ಯಕ್ತಿ ಈ ರೀತಿ ಮಾತನಾಡಬಾರದು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದು ಕೂಡ ಬಾಡಿ ಶೇಮಿಂಗ್ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಹಾಗಾದರೆ, ರಜಿನಿಕಾಂತ್ ಹೇಳಿದ್ದು ಸರಿಯೇ? ತಪ್ಪೇ? ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)