ಸಿನಿವಾಣಿ

ಮಂತ್ರ ಮಾಂಗಲ್ಯ ಮೂಲಕ ಗೆಳೆಯ ನಿತಿನ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸರಿಗಮಪ ಖ್ಯಾತಿಯ ಸುಹಾನ ಸೈಯದ್! Suhaana syed

ಬೆಂಗಳೂರು: ಸರಿಗಮಪ ಖ್ಯಾತಿಯ ಸುಹಾನ ಸೈಯದ್ ( Suhaana syed )​ ಅವರು ಮಂತ್ರ ಮಾಂಗಲ್ಯ ಮೂಲಕ ತುಂಬಾ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ರಂಗಭೂಮಿ ಕಲಾವಿದ ನಿತಿನ್ ಎಂಬುವರನ್ನು ಸುಹಾನ ಅವರು ವರಿಸಿದ್ದಾರೆ. ನಿತಿನ್​ ಮತ್ತು ಸುಹಾನ ಸುಮಾರು 16 ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಂತಿಮವಾಗಿ ಅವರಿಬ್ಬರ ಪ್ರೀತಿ, ಇಂದು ವೈವಾಹಿಕ ಜೀವನದೊಂದಿಗೆ ಮತ್ತಷ್ಟು ಗಟ್ಟಿಯಾಗಿದೆ. ಇದು ಅಂತರ್​ಧರ್ಮೀಯ ವಿವಾಹವಾಗಿದ್ದು, ಎರಡು ಮನೆಯವರನ್ನು ಒಪ್ಪಿಸಿ, ನಿತಿನ್​ ಮತ್ತು ಸುಹಾನ ದಾಂಪತ್ಯ ಶುರು ಮಾಡಿದ್ದಾರೆ. ನಿತಿನ್ ಅವರು ಬೆಂಗಳೂರಿನವರಾಗಿದ್ದು, ಪ್ರಸಿದ್ಧ ನಾಟಕ ಇನ್‌ಸ್ಟಿಟ್ಯೂಟ್ 'ನಿನಾಸಂ'ನಲ್ಲಿ ತರಬೇತಿ ಪಡೆದಿದ್ದಾರೆ.

ಅಂದಹಾಗೆ, ಸುಹಾನ ಸೈಯದ್ ಅವರು ಜೀ ಕನ್ನಡದಲ್ಲಿ ಮೂಡಿಬರುವ ಸರಿಗಮಪ ಶೋ ಮೂಲಕ ಖ್ಯಾತಿ ಪಡೆದರು. ಆಕೆ ಯುವ ಸಂಗೀತಗಾರ್ತಿಯಾಗಿದ್ದು, ಮೂಲತಃ ಶಿವಮೊಗ್ಗ ಜಿಲ್ಲೆಯವರು. 2017ರಲ್ಲಿ ಸರಿಗಮಪ ಸೀಸನ್ 13ರಲ್ಲಿ ಭಾಗವಹಿಸಿದ್ದರು. ಈ ಶೋನಲ್ಲಿ ಉಪೇಂದ್ರ ಹಾಗೂ ಸುದೀಪ್​ ನಟನೆಯ 'ಮುಕುಂದ ಮುರಾರಿ' ಸಿನಿಮಾ ಜನಪ್ರಿಯ 'ನೀನೇ ರಾಮ ನೀನೇ ಶಾಮ' ಗೀತೆಯನ್ನು ಹಾಡುವ ಮೂಲಕ ಜನಪ್ರಿಯತೆ ಗಳಿಸಿದರು.

ಮುಸ್ಲಿಂ ಹುಡುಗಿಯಾದ ಸುಹಾನ, ಹಿಂದು ಭಜನೆಗಳನ್ನು ಹಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಆಗಿದ್ದರು. ಅಲ್ಲದೆ, ಸಾಕಷ್ಟು ವಿವಾದವೂ ಸೃಷ್ಟಿಯಾಗಿತ್ತು. ಆದರೆ, ಯಾವುದೇ ಟ್ರೋಲ್​ಗಳಿಗೆ ಸುಹಾನ ಹೆದರಲಿಲ್ಲ. ತಮ್ಮ ಸಂಗೀತ ಪ್ರತಿಭೆಯ ಮೂಲಕ ಮನೆಮಾತಾದರು. ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿ, 2021ರಲ್ಲಿ ಸರಿಗಮಪ ಚಾಂಪಿಯನ್‌ಶಿಪ್ ಶೋನಲ್ಲಿ ಮತ್ತೆ ಭಾಗವಹಿಸಿದರು.

ಇನ್ನು ಸುಹಾನ ಅವರು ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್​ನಲ್ಲಿ ತಮ್ಮ ಹಾಡುಗಳು, ಪದರ್ಶನಗಳು ಮತ್ತು ವೈಯಕ್ತಿಕ ಜೀವನದ ಬಗ್ಗೆ ನಿರಂತರವಾಗಿ ಹಂಚಿಕೊಳ್ಳುತ್ತಿರುತ್ತಾರೆ.