ಸಿನಿವಾಣಿ

ಡ್ರಗ್ಸ್​ನಿಂದ ಟೈಗರ್​ ಜತೆಗೆ ನಟಿಸೋ ಅವಕಾಶ ಕಳೆದುಕೊಂಡ ಸಾರಾ

ಮುಂಬೈ: ಕಳೆದ ಕೆಲವು ತಿಂಗಳುಗಳಿಂದ ಸಾರಾ ಅಲಿ ಖಾನ್​ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಮೊದಲಿಗೆ, ಅವರನ್ನು ನೆಪೋಟಿಸಂನ (ಸ್ವಜನಪಕ್ಷಪಾತದ) ಕೊಡುಗೆ ಎಂದು ಬಿಂಬಿಸಲಾಯಿತು. ಆ ನಂತರ ಡ್ರಗ್ಸ್​ ವಿಚಾರದಲ್ಲಿ ಆಕೆಯ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಆಕೆಯನ್ನು ಸಾಕಷ್ಟು ಟ್ರೋಲ್​ ಮಾಡಲಾಯಿತು. ಇದೀಗ ಸಾರಾ ಅಲಿ ಖಾನ್​ ಇನ್ನೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಡ್ರಗ್ಸ್​ಜಾಲದಲ್ಲಿ ಸಾರಾ ಅಲಿ ಖಾನ್ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ, ಇದೀಗ ಅವರು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹೊಸ ಅವಕಾಶಗಳಿರಲಿ, ಈಗಾಗಲೇ ಒಪ್ಪಿದ್ದ ಕೆಲವು ಚಿತ್ರಗಳು ಸಹ ಅವರ ಕೈತಪ್ಪುತ್ತಿವೆ ಎಂದು ಹೇಳಲಾಗುತ್ತಿದೆ.

ಇದಕ್ಕೆ ಹೊಸ ಉದಾಹರಣೆ, 'ಹೀರೋಪಂತಿ 2'. ಟೈಗರ್​ ಶ್ರಾಫ್​ ಅಭಿನಯದ ಈ ಚಿತ್ರಕ್ಕೆ ಸಾರಾ ಅಲಿ ಖಾನ್​ ಸೂಕ್ತ ಎಂದು ಈ ಮುನ್ನ ಚಿತ್ರತಂಡದವರು ನಿರ್ಧರಿಸಿ, ಅವರ ಜೊತೆಗೆ ಮಾತುಕಥೆ ಸಹ ನಡೆಸಿದ್ದರಂತೆ. ಎಲ್ಲಾ ಓಕೆ ಆಗಬೇಕು ಎನ್ನುವಷ್ಟರಲ್ಲಿ, ಲಾಕ್​ಡೌನ್​ ಘೋಷಣೆಯಾಗಿದೆ. ಅದು ಮುಗಿಯುವಷ್ಟರಲ್ಲಿ ಡ್ರಗ್ಸ್​ ಜಾಲದಲ್ಲಿ ಸಾರಾ ಅಲಿ ಖಾನ್ ಹೆಸರು ಕೇಳಿಬಂದಿದೆ. ಇದರಿಂದ ತಮ್ಮ ಚಿತ್ರಕ್ಕೆ ನೆಗೆಟಿವ್​ ಪ್ರಚಾರ ಸಿಗಬಹುದು ಎಂಬ ಕಾರಣಕ್ಕೆ, ನಿರ್ಮಾಪಕರು ಆಕೆಯನ್ನು ಬದಲಾಯಿಸುವುದಕ್ಕೆ ತೀರ್ಮಾನಿಸಿದ್ದಾರೆ.

ಯಾವಾಗ ಇಂಥದ್ದೊಂದು ತೀರ್ಮಾನವಾಯಿತೋ, ತಕ್ಷಣವೇ ಸಾರಾ ಅವರನ್ನು ಕೈಬಿಟ್ಟು, ಅವರ ಬದಲು ತಾರಾ ಸುತಾರಿಯಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ. ಈ ತಾರಾ, ಟೈಗರ್​ ಜತೆಗೆ 'ಸ್ಟೂಡೆಂಟ್​ ಆಫ್​ ದಿ ಇಯರ್​' ಚಿತ್ರದಲ್ಲಿ ನಟಿಸಿದ್ದರು. ಅವರಿಬ್ಬರ ನಡುವೆ ಕೆಮಿಸ್ಟ್ರಿ ಸಹ ಚೆನ್ನಾಗಿತ್ತು. ಯಾಕೆ ಅವರಿಗೇ ನಾಯಕಿಯಾಗುವ ಅವಕಾಶ ಕೊಡಬಾರದು ಎಂದು ಯೋಚಿಸಿದ ಚಿತ್ರತಂಡ, ಸಾರಾ ಬದಲಿಗೆ ತಾರಾ ಅವರನ್ನು ಕರೆದು ಅವಕಾಶ ಕೊಟ್ಟಿದ್ದಾರೆ.

ಒಂದೊಳ್ಳೆಯ ಅವಕಾಶವನ್ನು ಕಳೆದುಕೊಂಡ ಸಾರಾ ಬೇಸರಗೊಂಡಿದ್ದರೂ, 'ಕೂಲಿ ನಂಬರ್​ ಒನ್​' ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಆ ಚಿತ್ರವಾದರೂ, ಕುಸಿಯುತ್ತಿರುವ ತಮ್ಮ ಜನಪ್ರಿಯತೆಯನ್ನು ಮೇಲಕ್ಕೆ ಎತ್ತುತ್ತದಾ ಎಂದು ಎದುರುನೋಡುತ್ತಿದ್ದಾರೆ.