ಸಿನಿವಾಣಿ

ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದ್ದ ಸಾರಾ ಅಲಿ ಖಾನ್​ಗೆ ಧರ್ಮ ಸಂಕಷ್ಟ; ಫತ್ವಾ ಹೊರಡಿಸಿದ ಇಸ್ಲಾಮಿಕ್ ಧರ್ಮಗುರು

  • ಪ್ರಸಿದ್ಧ ಕೇದಾರನಾಥ ದೇವಾಲಯಕ್ಕೆ ಭೇಟಿ ಕೊಟ್ಟಿದ್ದ ಸಾರಾ ಅಲಿ ಖಾನ್​ಗೆ ಸಂಕಷ್ಟ

  • ಫತ್ವಾ ಹೊರಡಿಸಿದ ಇಸ್ಲಾಮಿಕ್ ಧರ್ಮಗುರು ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಬರೆಲ್ವಿ

  • ಅಕ್ಟೋಬರ್ 25ರಂದು ಸಾಲಿನಲ್ಲಿ ನಿಂತು ಕೇದಾರನಾಥ ದರ್ಶನ ಪಡೆದಿದ್ದ ನಟಿ

sara ali khan kedarnath visit: ಇತ್ತೀಚೆಗೆ ಸಾರಾ ಅಲಿ ಖಾನ್​ ಅವರು ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ, ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಸದ್ಯ ನಟಿ ವಿರುದ್ಧ ಇಸ್ಲಾಮಿಕ್ ಧರ್ಮಗುರುಗಳು ಫತ್ವಾ ಹೊರಡಿಸಿದ್ದಾರೆ.

ಅಕ್ಟೋಬರ್ 25ರ ಭಾನುವಾರದಂದು ಕೇದಾರನಾಥಕ್ಕೆ ತೆರಳಿದ್ದ ಸಾರಾ ಅಲಿ ಖಾನ್, ಸಾಮಾನ್ಯ ಜನರಂತೆ ಕ್ಯೂನಲ್ಲಿ ನಿಂತು ದರ್ಶನ ಪಡೆದಿದ್ದರು. ಪೂಜೆ ಮುಗಿಸಿ ಕೈಮುಗಿದು ಹೊರಬರುತ್ತಿರುವುದು ಹಾಗೂ ಭಕ್ತರೊಂದಿಗೆ ದೇವರ ಮುಂದೆ ಕುಳಿತಿರುವ ಫೋಟೋ ಹಾಗೂ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಸಾರಾ ಅಲಿ ಖಾನ್ ಕ್ಷಮೆ ಕೇಳಬೇಕು

ಸಾರಾ ಅಲಿ ಖಾನ್​ರ ಈ ನಡೆಯನ್ನು ಉತ್ತರ ಪ್ರದೇಶದ ಬರೇಲಿ ಮೂಲದ 'ಆಲ್ ಇಂಡಿಯಾ ಮುಸ್ಲಿಂ ಜಮಾತ್'ನ ರಾಷ್ಟ್ರೀಯ ಅಧ್ಯಕ್ಷರಾದ ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಖಂಡಿಸಿದ್ದಾರೆ. ಅಲ್ಲದೇ ಫತ್ವಾ ಜಾರಿಗೊಳಿಸಿದ್ದಾರೆ.

ಈ ಬಗ್ಗೆ ಮೌಲ್ವಿ ಹಂಚಿಕೊಂಡ ವಿಡಿಯೋದಲ್ಲಿ ಹೀಗಿದೆ, ಅನ್ಯ ಧರ್ಮದ ಪವಿತ್ರ ಸ್ಥಳದಲ್ಲಿ ಪೂಜೆ ಸಲ್ಲಿಸುವುದು ಅಥವಾ ನಮಸ್ಕರಿಸುವುದು ಶರಿಯಾ ಕಾನೂನಿನ ಪ್ರಕಾರ ಅದು ನಿಷಿದ್ಧ (ಹರಾಮ್) ಮತ್ತು ಅನುಮತಿಸಲಾಗದು. ಈ ಕೃತ್ಯಕ್ಕಾಗಿ ಅಲ್ಲಾಹನ ಬಳಿ ಪಶ್ಚಾತಾಪಪಟ್ಟು ಕ್ಷಮೆ ಕೋರಬೇಕು ಎಂದು ಸಾರಾ ಅಲಿಖಾನ್​ ಅವರಿಗೆ ಒತ್ತಾಯಿಸಿದ್ದಾರೆ.

ಕೇದರನಾಥ್ ದೇಗುಲದೊಂದಿಗೆ ನಂಟು

ನಟಿ ಸಾರಾ ಅಲಿ ಖಾನ್ ಅವರು ಮುಸ್ಲಿಂ ನಟ ಸೈಫ್ ಅಲಿ ಖಾನ್ ಮತ್ತು ಹಿಂದೂ ನಟಿ ಅಮೃತಾ ಸಿಂಗ್ ಅವರ ಪುತ್ರಿಯಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ನಿಯಮಿತವಾಗಿ ಕೇದಾರನಾಥಕ್ಕೆ ಭೇಟಿ ನೀಡುವುದನ್ನು ರೂಢಿಸಿಕೊಂಡಿದ್ದಾರೆ. 2017ರಲ್ಲಿ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಕಾರಣವಾದ 'ಕೇದಾರನಾಥ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಈ ದೇವಸ್ಥಾನದ ಒಡನಾಟವು ಆರಂಭವಾಯಿತು.ಅಂದಿನಿಂದ, ಏಪ್ರಿಲ್ ಮತ್ತು ನವೆಂಬರ್ ನಡುವೆ ದೇವಸ್ಥಾನವು ತೆರೆದಿರುವ ಸಮಯದಲ್ಲಿ ನಟಿ ಬಹುತೇಕ ಪ್ರತಿವರ್ಷ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಕೇದಾರನಾಥ ಸಮಿತಿಯಿಂದ ಸ್ಪಷ್ಟನೆ

ಮತ್ತೊಂದೆಡೆ, ಬದ್ರಿನಾಥ-ಕೇದಾರನಾಥ ದೇವಾಲಯ ಸಮಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೋಹನ್ ಸಿಂಗ್ ರಂಗರ್ ಮಾತನಾಡಿ, ದೇವಾಲಯಕ್ಕೆ ಭೇಟಿ ನೀಡುವ ಅಹಿಂದುಗಳು ಕಡ್ಡಾಯವಾಗಿ ಅಫಿಡವಿಟ್ ಸಲ್ಲಿಸಬೇಕು ಎಂಬ ನಿಯಮವಿದ್ದು, ಸಾರಾ ಅಲಿ ಖಾನ್ ಅವರ ತಂಡವು ದೇವಾಲಯಕ್ಕೆ ತೆರಳುವ ಮುನ್ನವೇ ಈ ಅಗತ್ಯ ಅಫಿಡವಿಟ್ ಅನ್ನು ಸಲ್ಲಿಸಿತ್ತು ಎಂದು ಸ್ಪಷ್ಟಪಡಿಸಿದ್ದಾರೆ, (ಏಜೆನ್ಸೀಸ್).