ನವದೆಹಲಿ: ಕಬೀರ್ ಖಾನ್ ನಿರ್ದೇಶನದ 83 ಸಿನಿಮಾದಲ್ಲಿ ನಟ ರಣವೀರ್ ಸಿಂಗ್ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಪಾತ್ರದಲ್ಲಿ ಮಿಂಚಲಿದ್ದಾರೆ. ಸಿನಿಮಾದ ಫೊಟೋವನ್ನು ರಣವೀರ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕಬೀರ್ ಖಾನ್ಸ್ 83 ಚಲನಚಿತ್ರವು 1983ರಲ್ಲಿ ನಡೆದ ವಿಶ್ವಕಪ್ ಗೆಲುವಿನ ಕಥಾ ಹಂದರವುಳ್ಳದ್ದಾಗಿದೆ. ಸಿಂಹದ ಧೈರ್ಯ, ಉಕ್ಕಿನ ನರಗಳನ್ನು ಹೊಂದಿರುವ ಮಹಿಂದರ್ ಅಮರ್ನಾಥ್ ಆಗಿ ಸಕಿಬ್ ಸಲೀಮ್ ನಟಿಸಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಧರ್ಮಶಾಲಾದಲ್ಲಿ ಹಾಕಲಾಗಿರುವ ಸೆಟ್ನಲ್ಲಿ ನಟ ರಣವೀರ್ ಸಿಂಗ್ಗೆ ಕಪಿಲ್ ದೇವ್ ತರಬೇತಿ ನೀಡಿದ್ದಾರೆ. ಅಲ್ಲದೆ ಕೆಲ ಕಾಲ ಕಪಿಲ್ ಅವರ ಮನೆಯಲ್ಲಿಯೇ ಕಳೆದಿದ್ದಾರೆ. ಇದರಿಂದ ರಣವೀರ್ ಮಾಡುತ್ತಿರುವ ಪಾತ್ರಕ್ಕೆ ಪರಿಪೂರ್ಣತೆ ಲಭಿಸಲಿದೆ.
"ಕಪಿಲ್ ಸರ್ ಅವರಿಂದ ಕಲಿತದ್ದಕ್ಕೆ ಬೆಲೆ ಕಟ್ಟಲಾಗದು. ಇದು ನನ್ನ ಪಾಲಿನ ಅದೃಷ್ಟ ಮತ್ತು ಗೌರವ ಎಂದು ಭಾವಿಸುತ್ತೇನೆ. ಕಪಿಲ್ ಅವರ ಮನೆಯಲ್ಲಿಯೇ ನನಗೆ ಇದನ್ನೆಲ್ಲ ಕಲಿಸಿದರು. ಈ ಸಿನಿಮಾದಲ್ಲಿ ನಾವು ಕಟ್ಟಿಕೊಡಲಿರುವ ಪಾತ್ರಕ್ಕೆ ಅವರ ಕೊಡುಗೆ ಅಪಾರ" ಎಂದು ನಟ ರಣವೀರ್ ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಏಪ್ರಿಲ್ 10ಕ್ಕೆ ಕಬೀರ್ ಖಾನ್ಸ್ 83 ಸಿನಿಮಾ ಬಿಡುಗಡೆಯಾಗಲಿದೆ. (ಏಜೆನ್ಸೀಸ್)