ಸಿನಿವಾಣಿ

ಸಪ್ತಮಿ ಗೌಡ ಹುಟ್ಟುಹಬ್ಬಕ್ಕೆ ಬಂತು ಭರ್ಜರಿ ಗಿಫ್ಟ್​: ಸಂತಸದಲ್ಲಿ ಕಾಂತಾರ ನಟಿ

ಬೆಂಗಳೂರು: ಈವರೆಗೂ ಕನ್ನಡದ ಮೂರೇ ಮೂರು ಸಿನಿಮಾಗಳಲ್ಲಿ ಅಭಿನಯಿಸಿದ್ದರು ತಮ್ಮದೇ ಆದ ಛಾಪು ಮೂಡಿಸಿದವರು ನಟಿ ಸಪ್ತಮಿಗೌಡ. ಧನಂಜಯ್ ಅಭಿನಯದ ‘ಪಾಪ್‌ಕಾರ್ನ್ ಮಂಕಿ ಟೈಗರ್’ ಮೂಲಕ ಬಣ್ಣದ ಲೋಕಕ್ಕೆ ಬಂದ ಅವರು, ಮೊದಲ ಚಿತ್ರದಲ್ಲಿಯೇ ಗಮನಸೆಳೆಯುವ ಪಾತ್ರದಲ್ಲಿ ಕಾಣಿಸಿಕೊಂಡರು. ಬಳಿಕ ‘ಕಾಂತಾರ’ದಿಂದ ದೇಶಾದ್ಯಂತ ಪರಿಚಿತರಾದರು. ಇದರ ನಡುವೆ, ‘ದ ವ್ಯಾಕ್ಸಿನ್ ವಾರ್’ ಮೂಲಕ ಬಾಲಿವುಡ್‌ಗೂ ಡೆಬ್ಯೂ ಮಾಡಿದ್ದರು. ಕನ್ನಡದ ‘ಯುವ’ ಕೂಡ ನಟಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಸದ್ಯ ಅವರು ಕನ್ನಡ, ತೆಲುಗಿನಲ್ಲಿ ಬಿಜಿಯಾಗಿದ್ದು, ಇದೇ ಖುಷಿಯಲ್ಲಿರುವ ಸಪ್ತಮಿ ಗೌಡ ಭಾನುವಾರಕ್ಕೆ 28ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮುಂದಿನ ಚಿತ್ರತಂಡಗಳು ಬರ್ತ್‌ಡೇ ಗ್‌ಟಿ ನೀಡಿವೆ. ನಟಿ ಸಪ್ತಮಿ ಗೌಡ ‘ತಮ್ಮುಡು’ ಚಿತ್ರದ ಮೂಲಕ ಟಾಲಿವುಡ್‌ಗೆ ಪರಿಚಯವಾಗುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಕೂಡ ಪೂರ್ಣಗೊಳಿಸಿದ್ದಾರೆ. ಚಿತ್ರತಂಡವು ನಟಿಯ ಹುಟ್ಟುಹಬ್ಬಕ್ಕೆ ಪಾತ್ರದ ಪೋಸ್ಟರ್ ರಿಲೀಸ್ ಮಾಡಿ, ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದೆ. ‘ವಕೀಲ ಸಾಬ್’ ಖ್ಯಾತಿಯ ವೇಣು ಶ್ರಿರಾಮ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಸಪ್ತಮಿ, ರತ್ನ ಎಂಬ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಹೊಸ ಪೋಸ್ಟರ್‌ನಲ್ಲಿ ಸಪ್ತಮಿ, ಹಳ್ಳಿ ಹುಡುಗಿಯ ಪಾತ್ರದಲ್ಲಿದ್ದು, ಸಣ್ಣ ನಗು ಬೀರಿದ್ದಾರೆ. ಇದೊಂದು ಡಿ-ಗ್ಲಾಮರ್ ಪಾತ್ರವಾಗಿದ್ದು, ಸಾಕಷ್ಟು ಭಾವನೆಗಳನ್ನು ವ್ಯಕ್ತಪಡಿಸುವಂತಹ ಚಾಲೆಂಜಿಂಗ್ ಪಾತ್ರ ಎನ್ನಲಾಗಿದೆ. ತೆಲುಗು ಸ್ಟಾರ್ ನಿಖಿಲ್​ ಇಲ್ಲಿ ಸಪ್ತಮಿ ಜೋಡಿಯಾಗಿದ್ದಾರೆ. ಇದೀಗ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದ್ದು, ಇದೇ ಜುಲೈ 4ರಂದು ಸಿನಿಮಾ ಬಿಡುಗಡೆಯಾಗಲಿದೆ.

ಅಂಬಿಕಾಳ ಹೊಸ ನೋಟ: ಸಪ್ತಮಿಗೌಡ ಕನ್ನಡದಲ್ಲಿ ದ ರೈಸ್ ಆಫ್ ಅಶೋಕ್​ ಎಂಬ ಚಿತ್ರದಲ್ಲಿ ಹೂ ಮಾರುವ ಅಂಬಿಕಾ ಎಂಬ ಪಾತ್ರದಲ್ಲಿದ್ದಾರೆ. ನಟಿಯ ಹುಟ್ಟುಹಬಕ್ಕೆ ಚಿತ್ರತಂಡವು ಹೊಸ ಪೋಸ್ಟರ್​ ಬಿಡುಗಡ ಮಾಡಿದೆ. ಈ ಚಿತ್ರದಲ್ಲಿ ನಟ ಸತೀಶ್ ನೀನಾಸಂಗೆ ಸಪ್ತಮಿ ಗೌಡ ಜೋಡಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದ್ದು, ದ ರೈಸ್ ಆಫ್ ಅಶೋಕ್ ಇದೇ ವರ್ಷ ತೆರೆಗೆ ಬರುವ ಸಾಧ್ಯತೆಯಿದೆ.