ಸಿನಿವಾಣಿ

ತೆಲುಗಿನಲ್ಲಿ ಒಂದು, ಕನ್ನಡದಲ್ಲಿ ಎರಡು ಈ ವರ್ಷ ಸಪ್ತಮಿ ಗೌಡ ಹ್ಯಾಟ್ರಿಕ್​ ಫಿಕ್ಸ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ದುನಿಯಾ ಸೂರಿ ನಿರ್ದೇಶನದ "ಪಾಪ್​ಕಾರ್ನ್​ ಮಂಕಿ ಟೈಗರ್​' ಮೂಲಕ ನಾಯಕಿಯಾಗಿ ಡೆಬ್ಯೂ ಮಾಡಿದ ನಟಿ ಸಪ್ತಮಿ ಗೌಡ, ನಂತರ "ಕಾಂತಾರ' ಚಿತ್ರದಲ್ಲಿ ಪ್ಯಾನ್​ ಇಂಡಿಯಾ ಹೊರಟರು. ಅದರ ಬೆನ್ನಲ್ಲೇ "ದ ವ್ಯಾಕ್ಸಿನ್​ ವಾರ್​' ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟ ಅವರು, ಕಳೆದ ವರ್ಷ ಕನ್ನಡದ "ಯುವ' ಚಿತ್ರದಲ್ಲಿ ಮಿಂಚಿದ್ದರು.

ಅದರ ಜತೆಗೆ 2024ರಲ್ಲಿ "ತಮ್ಮುಡು' ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ ಅವರು, ಸದ್ಯ ಆ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. "ಮಿಡಲ್​ ಕ್ಲಾಸ್​ ಅಬ್ಬಾಯಿ' ಮತ್ತು "ವಕೀಲ್​ ಸಾಬ್​' ಖ್ಯಾತಿಯ ವೇಣು ಶ್ರೀರಾಮ್​ ಆ್ಯಕ್ಷನ್​-ಕಟ್​ ಹೇಳಿರುವ ಈ ಚಿತ್ರದಲ್ಲಿ ಸಪ್ತಮಿ ನಿತಿನ್​ಗೆ ನಾಯಕಿಯಾಗಿದ್ದಾರೆ.

ಚಿತ್ರದ ಬಗ್ಗೆ, "ನನ್ನ ಹಿಂದಿನ ಸಿನಿಮಾಗಳನ್ನು ನೋಡಿ ನಿರ್ದೇಶಕ ವೇಣು ಶ್ರೀರಾಮ್​ ಕರೆ ಮಾಡಿದ್ದರು. ಲುಕ್​ ಟೆಸ್ಟ್​ ಕೊಟ್ಟೆ. ನನ್ನ ಭಾಗದ ಚಿತ್ರೀಕರಣ ಕಳೆದ ಮೇನಲ್ಲಿ ಆರಂಭವಾಗಬೇಕಿತ್ತು. ಆದರೆ, ಸ್ವಲ್ಪ ತಡವಾಗಿ ಆಗಸ್ಟ್​ನಲ್ಲಿ ಹೈದರಾಬಾದ್​ನಲ್ಲಿ ಚಿತ್ರೀಕರಣದಲ್ಲಿ ನಡೆಯಿತು. ನಾನಿಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದೇನೆ. ಸದ್ಯ ಈ ಸಿನಿಮಾ ರಿಲೀಸ್​ಗೆ ರೆಡಿಯಾಗಿದ್ದು, ನಾಯಕ ನಿತಿನ್​ ಬೇರೆ ಚಿತ್ರದಲ್ಲಿ ಬಿಜಿಯಿರುವ ಕಾರಣ ಕೆಲವೇ ದಿನಗಳಲ್ಲಿ ಬಿಡುಗಡೆ ದಿನಾಂಕ ಘೋಷಿಸುವ ನಿರೀೆ ಇದೆ' ಎಂದು ಮಾಹಿತಿ ನೀಡುತ್ತಾರೆ ಸಪ್ತಮಿ.

ಅಶೋಕನ ಜತೆ ಅಂಬಿಕ

ಸದ್ಯ ಸಪ್ತಮಿ ಗೌಡ ನೀನಾಸಂ ಸತೀಶ್​ ನಾಯಕನಾಗಿರುವ "ದ ರೈಸ್​ ಆಫ್​ ಅಶೋಕ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಅವರ ಫಸ್ಟ್​ ಲುಕ್​ ಕೂಡ ಬಿಡುಗಡೆಯಾಗಿದ್ದು, ಹೂ ಮಾರುವ ಹಳ್ಳಿ ಹುಡುಗಿ ಅಂಬಿಕಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ಹಾಗೇ ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಅದರ ಬಗ್ಗೆ ಇನ್ನಷ್ಟೇ ಅಧಿಕೃತ ಅನೌನ್ಸ್​ಮೆಂಟ್​ ಆಗಬೇಕಿದೆ. ಕೆಲ ಕಥೆಗಳನ್ನು ಕೇಳುತ್ತಿದ್ದೇನೆ. ಆದರೆ, ಸದ್ಯ ಕೈಯಲ್ಲಿರುವ ಚಿತ್ರಗಳ ಶೂಟಿಂಗ್​ ಪೂರ್ಣಗೊಂಡ ಬಳಿಕ ಹೊಸ ಸಿನಿಮಾ ಕೈಗೆತ್ತಿಕೊಳ್ಳಲಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ.