ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಸತೀಶ್ ನೀನಾಸಂ ನಾಯಕನಾಗಿರುವ "ಅಶೋಕ ಬ್ಲೇಡ್' ಇದೀಗ "ದ ರೈಸ್ ಆಫ್ ಅಶೋಕ' ಹೆಸರಿನಲ್ಲಿ ಮೂಡಿಬರುತ್ತಿರುವುದು ಗೊತ್ತಿದೆ. ಹಾಗೇ ನಿರ್ದೇಶಕ ವಿನೋದ್ ಧೋಂಡಾಲೆ ನಿಧನದ ಬಳಿಕ ಸಂಕಲನಕಾರ ಮನು ಶೇಡ್ಗಾರ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಸದ್ಯ ಚಿತ್ರತಂಡ ಎರಡನೇ ಹಂತದ ಶೂಟಿಂಗ್ನಲ್ಲಿ ಬಿಜಿಯಾಗಿದೆ. ಆದರೆ, ನಾಯಕ ಸತೀಶ್ ನೀನಾಸಂಗೆ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬ ಪ್ರಶ್ನೆ ಹಲವರದ್ದಾಗಿತ್ತು. ಇದೀಗ ಚಿತ್ರತಂಡ ಆ ಪ್ರಶ್ನೆಗೆ ಉತ್ತರ ನೀಡಿದೆ. "ದ ರೈಸ್ ಆಫ್ ಅಶೋಕ' ಚಿತ್ರಕ್ಕೆ ನಾಯಕಿಯಾಗಿ ಸಪ್ತಮಿ ಗೌಡ ಆಯ್ಕೆಯಾಗಿದ್ದಾರೆ. ಎರಡನೇ ಹಂತದ ಶೂಟಿಂಗ್ನಲ್ಲಿ ಪಾಲ್ಗೊಂಡಿರುವ ಅವರು ಈಗಾಗಲೇ ಕೆಲ ಮಾತಿನ ಭಾಗ ಹಾಗೂ ಒಂದು ಹಾಡಿನ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.
ನಾಯಕಿಯ ಆಯ್ಕೆಯ ಬಗ್ಗೆ ನಾಯಕ ಸತೀಶ್, "ಚಿತ್ರದಲ್ಲಿ ಸುಂದರ ಲವ್ಸ್ಟೋರಿ ಇದೆ. ಮಾಡೆಲ್ಗಳಂತೆ ಗ್ಲಾಮರಸ್ ಆಗಿ ಕಾಣುವವರು ಈ ಪಾತ್ರಕ್ಕೆ ಬೇಕಿರಲಿಲ್ಲ. ಅಚ್ಚುಕಟ್ಟಾಗಿ ಚಾಮರಾಜನಗರ, ನಂಜನಗೂಡಿನ ಕನ್ನಡದಲ್ಲಿ ಮಾತನಾಡುವಂತಹ ಹುಡುಗಿಗಾಗಿ ಹುಡುಕಾಟ ನಡೆಸಿದ್ದೆವು. ಅಂಬಿಕಾ ಪಾತ್ರಕ್ಕೆ ಸಪ್ತಮಿ ಚೆನ್ನಾಗಿ ಸೂಟ್ ಆಗುತ್ತಾರೆ ಅಂತನ್ನಿಸಿತು. ನಮ್ಮಿಬ್ಬರ ಕಾಂಬಿನೇಷನ್ ಬರುತ್ತೆ ಅಂತ ಬೇರೆಯವರಿರಲಿ ನಾವೂ ಯೋಚಿಸಿರಲಿಲ್ಲ. ಅವರು ಸಹ ಕಥೆ ಕೇಳಿ ಇಷ್ಟಪಟ್ಟು, ಖುಷಿಯಾಗಿ ನಟಿಸಲು ಒಪ್ಪಿಕೊಂಡರು. ಸಪ್ತಮಿ ಹಳ್ಳಿ ಹಿನ್ನೆಲೆಯಿರುವ ಹುಡುಗಿಯಾದ ಕಾರಣ ಭಾಷೆಯ ಮೇಲೂ ಒಳ್ಳೆ ಹಿಡಿತವಿದ್ದು, ಸಲೀಸಾಗಿ ನಟಿಸಿದರು. "ಕಾಂತಾರ' ಮತ್ತು "ಪಾಪ್ಕಾರ್ನ್ ಮಂಕಿ ಟೈಗರ್' ಪಾತ್ರಗಳ ಛಾಯೆ ಕಾಣಿಸದಂತೆ ಪಾತ್ರವನ್ನು ಡಿಸೈನ್ ಮಾಡಲಾಗಿದ್ದು, ಅವರ ಪಾತ್ರದಲ್ಲಿ ನಾಚಿಕೆ, ಬಿಗುಮಾನ, ಹೊಸತನ ಎಲ್ಲವೂ ಇರಲಿದೆ' ಎಂದು ಮಾಹಿತಿ ನೀಡುತ್ತಾರೆ.
""ದ ರೈಸ್ ಆಫ್ ಅಶೋಕ' 70ರ ದಶಕದ ಕಥೆ' ಎನ್ನುವ ಸತೀಶ್, "ಇನ್ನು 15 ದಿನಗಳ ಶೂಟಿಂಗ್ ಮಾತ್ರ ಬಾಕಿಯಿದೆ. ಏ. 20ರ ಒಳಗೆ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಮೇಕಿಂಗ್, ಕಾಸ್ಟ್ಯೂಮ್, ಭಾಷೆ, ಹಿನ್ನೆಲೆ, ಪಾತ್ರಗಳು, ವಿಎ್ಎಕ್ಸ್, ಹಿನ್ನೆಲೆ ಸಂಗೀತ ಎಲ್ಲದರ ಮೂಲಕ ಅಂದಿನ ಕಾಲಟ್ಟವನ್ನೇ ಕಣ್ಣಮುಂದೆ ತರಲು, ಪ್ರೇಕ್ಷಕರನ್ನು 70ರ ದಶಕಕ್ಕೆ ಮತ್ತೆ ಕರೆದೊಯ್ಯಲು ಪ್ರಯತ್ನಿಸಿದ್ದೇವೆ. ಹೀಗಾಗಿ ಸಿನಿಮಾ ಕೂಡ ದೊಡ್ಡ ಬಜೆಟ್ನಲ್ಲಿ ಮೂಡಿಬರಲಿದೆ' ಎಂದು ಹೇಳಿಕೊಳ್ಳುತ್ತಾರೆ.
ನಾನು ಹೂ ಮಾರುವ ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಪಾತ್ರ ತುಂಬ ಚೆನ್ನಾಗಿದೆ. ನಿರ್ದೇಶಕರು ಲುಕ್ ಟೆಸ್ಟ್ ಮಾಡಿದ ದಿನವೇ ಪಾತ್ರದ ಬಗ್ಗೆ ಹೇಳಿದ್ದರು. ಅದಕ್ಕೆ ತಕ್ಕಂತೆ ನಾನು ಸಿದ್ಧತೆ ಮಾಡಿಕೊಂಡೆ. "ಪಾಪ್ಕಾರ್ನ್ ಮಂಕಿ ಟೈಗರ್'ನಲ್ಲಿ ಉದ್ದದ ಡೈಲಾಗ್ಸ್ ಇತ್ತು. ಆ ಬಳಿಕ "ದ ರೈಸ್ ಆಫ್ ಅಶೋಕ'ದಲ್ಲಿ ಲೆಂಥಿ ಡೈಲಾಗ್ಸ್ ಇವೆ. ಅಶೋಕ ಮತ್ತು ಅಂಬಿಕಾಳ ಲವ್ಸ್ಟೋರಿ ಒಂದೆಡೆ ಮತ್ತೊಂದೆಡೆ ಸಮುದಾಯಗಳ ನಡುವಿನ ಸಂರ್ಷ ಹೀಗೆ ಎರಡು ಟ್ರ್ಯಾಕ್ಗಳಲ್ಲಿ ಕಥೆ ಸಾಗುತ್ತದೆ.
- ಸಪ್ತಮಿ ಗೌಡ, ನಾಯಕಿ