ಚಿತ್ರ: ‘ಸಂಜು’
ನಿರ್ದೇಶನ: ಕೆ.ಯತಿರಾಜ್
ತಾರಾಗಣ: ಮನ್ವಿತ್, ಶ್ರಾವ್ಯಾ, ಸಂಗೀತ ಅನಿಲ್, ಅಪೂರ್ವ, ಬಲ ರಾಜವಾಡಿ ಮತ್ತಿತರರು.
ಶಿವ ಸ್ಥಾವರಮಠ
ಪ್ರೀತಿಯಲ್ಲಿ ವಂಚಿತನಾದ ಯುವಕ ಸಂಜು (ಮನ್ವಿತ್). ತಾಯಿಯ (ಸಂಗೀತ) ಪ್ರೇರಣೆ ನುಡಿಯಿಂದ ಹೊಸ ಜೀವನ ಕಂಡುಕೊಳ್ಳಲು ಪಯಣ ಆರಂಭಿಸುತ್ತಾನೆ. ಈ ಪಯಣದಲ್ಲಿ ಆಕಸ್ಮಿಕವಾಗಿ ಸಿಗುವವಳೇ ಸರಸ್ವತಿ (ಶ್ರಾವ್ಯಾ). ತಂದೆಯ (ಬಲ ರಾಜವಾಡಿ) ಸಿಡುಕು ಮಾತುಗಳಿಂದ ಬೇಸರಗೊಂಡು ಹೊಸ ಜೀವನಕ್ಕಾಗಿ ಹಂಬಲಿಸಿ, ಮನೆ ಬಿಟ್ಟು ಬಂದವಳು ಆಕೆ. ಈ ಇಬ್ಬರು ಸೇರುವುದು ಒಂದು ಬಸ್ ನಿಲ್ದಾಣದಲ್ಲಿ. ಇಲ್ಲಿಂದ ಆರಂಭವಾಗುವ ಇಬ್ಬರ ಕಥೆಯನ್ನು ಯತಿರಾಜ್ ‘ಸಂಜು’ ಮೂಲಕ ನಿರೂಪಿಸಿದ್ದಾರೆ.
‘ಸಂಜು’ ಒಂದು ಸರಳ ಪ್ರೇಮಕಥೆ. ಒಂದೇ ಲೈನ್‌ನಲ್ಲಿ ಇಡೀ ಸ್ಟೋರಿಯನ್ನು ಬಸ್ ನಿಲ್ದಾಣದಲ್ಲಿ ಹೇಳಿ ಮುಗಿಸಿದ್ದಾರೆ. ಪ್ರೀತಿ, ಪ್ರೇಮ, ಬಾಂಧವ್ಯ, ಸಾಹಸ ದೃಶ್ಯ ಎಲ್ಲವೂ ಇಲ್ಲಿಯೇ ತೋರಿಸಿದ್ದಾರೆ. ಇದು ನಿರ್ದೇಶಕರು ತೆಗೆದುಕೊಂಡು ಸವಾಲು ಎನ್ನಬಹುದು. ಮೊದಲರ್ಧದ ಕಥೆ ನಾಯಕ-ನಾಯಕಿಯ ಪರಿಚಯಕ್ಕೆ ಸೀಮಿತವಾಗಿದೆ. ಇನ್ನು ದ್ವಿತೀಯಾರ್ಧದಲ್ಲಿ ತಮ್ಮ ವೃತ್ತಾಂತ ಹೇಳಿಕೊಳ್ಳಲು ಮೀಸಲಾಗಿದೆ. ಈ ಕಾರಣಕ್ಕೆ ಸಿನಿಮಾ ನಿಧಾನಗತಿ ಎನಿಸುತ್ತದೆ. ಹೀಗಾಗಿ ಇನ್ನೊಂದಿಷ್ಟು ಕಲರ್‌ಫುಲ್ ಆಗಿ ತೋರಿಸುವ ಅವಕಾಶ ಇತ್ತು.
ನಾಯಕ ಮನ್ವಿತ್ ನಟನೆಯಲ್ಲಿ ಇನ್ನಷ್ಟು ಪಳಗಬೇಕು. ಸಾಹಸ ದೃಶ್ಯಗಳಲ್ಲಿ ತೋರಿದ ಖದರ್, ಪ್ರೀತಿ, ಬಾಂಧವ್ಯದ ಎಮೋಷನಲ್ ದೃಶ್ಯಗಳಲ್ಲಿ ಇನ್ನಷ್ಟು ಚೆನ್ನಾಗಿ ನಟಿಸುವ ಅವಕಾಶ ಇತ್ತು. ನಾಯಕಿ ಶ್ರಾವ್ಯಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರನ್ನು ಕಥೆಗೆ ಇನ್ನಷ್ಟು ಬಳಸಿಕೊಳ್ಳಬಹುದಿತ್ತು ಅಂತ ಅನ್ನಿಸದೇ ಇರದು. ಸಂಗೀತ ಅನಿಲ್, ಬಲ ರಾಜವಾಡಿ, ಕೆಲವು ಹಾಸ್ಯಪಾತ್ರಗಳು ಕಥೆಯಲ್ಲಿ ಗಮನಸೆಳೆಯುತ್ತವೆ. ಜೀವನದಲ್ಲಿ ಯಾರೇ ನಮ್ಮನ್ನು ಬಿಟ್ಟು ಹೋಗಲಿ ಅಲ್ಲಿಗೆ ನಮ್ಮ ಕಥೆ ಮುಗಿಯುವುದಿಲ್ಲ. ಇನ್ನೊಬ್ಬರಿಂದ ಹೊಸ ಪಯಣ ಆರಂಭವಾಗುತ್ತದೆ ಎಂದು ಸಾರುವ ‘ಸಂಜು’ವಿನ ಪ್ರೀತಿಯ ಪಯಣವನ್ನು ಒಂದು ಬಾರಿ ನೋಡಬಹುದು.