ಹೈದರಾಬಾದ್: 'ಕೆಜಿಎಫ್ 2' ಚಿತ್ರದ ಯಶಸ್ಸಿನ ನಂತರ ಬಾಲಿವುಡ್ ನಟ ಸಂಜಯ್ ದತ್ ಹೆಚ್ಚುಹೆಚ್ಚು ದಕ್ಷಿಣದ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಅವರು ಧ್ರುವ ಅಭಿನಯದ 'ಕೆಡಿ' ಚಿತ್ರದಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಇದಲ್ಲದೆ, ವಿಜಯ್ ಅಭಿನಯದ ಹೊಸ ತಮಿಳು ಚಿತ್ರದಲ್ಲೂ ಸಂಜಯ್ ದತ್ ನಟಿಸುತ್ತಿದ್ದಾರೆ ಎಂಬ ಸುದ್ದಿ ಇದೆ. ಇದೆಲ್ಲದರ ಮಧ್ಯೆ, ಅವರು ಪ್ರಭಾಸ್ ಅಭಿನಯದ ಹೊಸ ತೆಲುಗು ಚಿತ್ರದಲ್ಲೂ ನಟಿಸುತ್ತಿದ್ದಾರಂತೆ.
ಹೌದು, ಮಾರುತಿ ನಿರ್ದೇಶನದ ಹೊಸ ಚಿತ್ರದಲ್ಲಿ ಪ್ರಭಾಸ್ ನಾಯಕನಾಗಿ ನಟಿಸುತ್ತಿರುವ ಸುದ್ದಿ ಇತ್ತು. ಅಷ್ಟೇ ಅಲ್ಲ, ಈಗಾಗಲೇ ಹೈದರಾಬಾದ್ನಲ್ಲಿ ಕೆಲವು ದಿನಗಳ ಚಿತ್ರೀಕರಣವೂ ಆಗಿದೆ. ಈ ಮಧ್ಯೆ, ಈ ಚಿತ್ರತಂಡಕ್ಕೆ ಸಂಜು ಬಾಬ ಸೇರ್ಪಡೆಯಾಗಿದೆಯಂತೆ. ಹಾಗಂತ ಟಾಲಿವುಡ್ನಲ್ಲಿ ಸುದ್ದಿಯಾಗಿದೆ. ಇದಕ್ಕೂ ಮೊದಲು ಸ್ಯಾಂಡಲ್ವುಡ್ ಮತ್ತು ಕಾಲಿವುಡ್ ಚಿತ್ರಗಳಲ್ಲಿ ಅಭಿನಯಿಸಿದ್ದ ಸಂಜಯ್ ದತ್, ಈಗ ಈ ಚಿತ್ರದ ಮೂಲಕ ಟಾಲಿವುಡ್ಗೆ ಸಹ ಎಂಟ್ರಿ ಕೊಡುತ್ತಿರುವುದು ವಿಶೇಷ.
ಬಾಲಿವುಡ್ನಲ್ಲಿ ಹೀರೋ ಆಗಿ ಮಿಂಚಿದ್ದ ಸಂಜಯ್ ದತ್, ಈಗ ದಕ್ಷಿಣದ ಚಿತ್ರಗಳಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಈ ಚಿತ್ರದಲ್ಲೂ ಅವರು ವಿಲನ್ ಆಗಿ ಮುಂದುವರೆಯುತ್ತಾರಾ? ಎಂಬ ಪ್ರಶ್ನೆ ಸಹಜ. ಫಾರ್ ಎ ಚೇಂಜ್, ಸಂಜಯ್ ದತ್ ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡುತ್ತಿಲ್ಲವಂತೆ. ಬದಲಿಗೆ ಒಂದು ಪಾಸಿಟಿವ್ ಆದ ಮತ್ತು ಅಷ್ಟೇ ಪ್ರಮುಖವಾದ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇದೆ.
ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಪ್ರಭಾಸ್, ಆ ನಂತರ 'ಪ್ರಾಜೆಕ್ಟ್ ಕೆ' ಚಿತ್ರದ ಚಿತ್ರೀಕರಣ ಮುಗಿಸಿ, ಆ ನಂತರ ಈ ಹೊಸ ಚಿತ್ರದಲ್ಲಿ ತಮ್ಮ ಭಾಗದ ಚಿತ್ರೀಕರಣ ಮುಗಿಸಲಿದ್ದಾರ ಎಂದು ಹೇಳಲಾಗುತ್ತಿದೆ.