ಮುಂಬೈ: 'ಮುನ್ನಾಭಾಯ್' ಖ್ಯಾತಿಯ ಸಂಜಯ್ ದತ್ ಈಗ ಸಖತ್ ಸಕ್ರಿಯವಾಗಿದ್ದಾರೆ. ಈಗಾಗಲೇ ಕನ್ನಡದ 'ಕೆಡಿ', ತಮಿಳಿನ 'ಲಿಯೋ', ಹಿಂದಿಯ 'ದಿ ಗುಡ್ ಮಹಾರಾಜ', 'ಗುಡ್ಚಡಿ', 'ಬಾಪ್' ಸೇರಿದಂತೆ ಐದಾರು ಚಿತ್ರಗಳಲ್ಲಿ ನಟಿಸುತ್ತಿರುವ ಅವರು, ಇದೀಗ ಇನ್ನೂ ಒಂದು ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಅದೇ 'ಜವಾನ್'.
ಅಟ್ಲಿ ನಿರ್ದೇಶನದ 'ಜವಾನ್' ಚಿತ್ರದಲ್ಲಿ ಶಾರುಖ್ ಖಾನ್ ಜವಾನ್ ಆಗಿ ನಟಿಸುತ್ತಿರುವುದು ಗೊತ್ತೇ ಇದೆ. ನಯನತಾರಾ, ಪ್ರಿಯಾಮಣಿ, ವಿಜಯ್ ಸೇತುಪತಿ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಇದೀಗ ಸಂಜಯ್ ದತ್ ಸೇರ್ಪಡೆಯಾಗಿದೆ. ನಿನ್ನೆ ಸೋಮವಾರ, ಸಂಜಯ್ ದತ್ ಭಾಗದ ಚಿತ್ರ ಚಿತ್ರೀಕರಣ ಪ್ರಾರಂಭವಾಗಿದ್ದು, ಮುಂದಿನ ಐದಾರು ದಿನಗಳ ಚಿತ್ರೀಕರಣ ನಡೆಯಲಿದೆ.
ಇತ್ತೀಚಿನ ದಿನಗಳಲ್ಲಿ ಸಂಜಯ್ ದತ್ ಸಾಕಷ್ಟು ಚಿತ್ರಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಿರುವಾಗ, 'ಜವಾನ್' ಚಿತ್ರದಲ್ಲಿ ಅವರ ಪಾತ್ರವೇನಿರಬಹುದು ಎಂಬ ಪ್ರಶ್ನೆ ಸಹಜ. ಈ ಚಿತ್ರದಲ್ಲಿ ಅವರು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೋ ಅಥವಾ ಪಾಸಿಟಿವ್ ಪಾತ್ರವೋ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಆದರೆ, ಚಿತ್ರತಂಡ ಇದಕ್ಕೆ ಉತ್ತರಿಸಿಲ್ಲ. ಸಂಜಯ್ ದತ್ ಅವರದ್ದು ಅತಿಥಿ ಪಾತ್ರ ಎಂದು ಹೇಳಲಾಗುತ್ತಿದೆಯೇ ಹೊರತು, ಅವರ ಪಾತ್ರವೇನು ಎಂಬ ರಹಸ್ಯವನ್ನು ಚಿತ್ರತಂಡ ಇನ್ನೂ ಬಿಟ್ಟುಕೊಟ್ಟಿಲ್ಲ.
ಇದಕ್ಕೂ ಮುನ್ನ, ಶಾರುಖ್ ಖಾನ್ ಅಭಿನಯದ 'ರಾ ಒನ್' ಚಿತ್ರದಲ್ಲಿ ಸಂಜಯ್ ದತ್ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈಗ ಒಂದು ದಶಕದ ನಂತರ ಪುನಃ ಶಾರುಖ್ ಖಾನ್ ಮತ್ತು ಸಂಜಯ್ ದತ್ ಜತೆಯಾಗಿ ನಟಿಸುತ್ತಿದ್ದಾರೆ. ಅಂದಹಾಗೆ, 'ಜವಾನ್' ಚಿತ್ರವು ಜೂನ್ 02ರಂದು ಬಿಡುಗಡೆಯಾಗಲಿದೆ ಎಂದು ಘೋಷಣೆಯಾಗಿತ್ತು. ಈಗ ಚಿತ್ರ ಸ್ವಲ್ಪ ವಿಳಂಬವಾಗುತ್ತಿರುವುದರಿಂದ, ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.