ನಟನೆಯ ಜತೆ ನಿರ್ಮಾಣಕ್ಕೂ ಇಳಿದ ಕನ್ನಡತಿ
ನಟಿ ಸಂಗೀತಾ ಭಟ್ ಮತ್ತೆ ವಾಪಸ್ಸಾಗಿದ್ದಾರೆ. ಇದೀಗ ಮೂರು ಚಿತ್ರಗಳಲ್ಲಿ ಬಿಜಿಯಿದ್ದಾರೆ. ಕೆಲವು ವರ್ಷಗಳ ಹಿಂದೆ ತಾವು ಚಿತ್ರರಂಗದಲ್ಲಿ ಎದುರಿಸಿದ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಓಪನ್ ಲೆಟರ್ ಬರೆದು, ನಟನೆಗೆ ಗುಡ್ಬೈ ಹೇಳಿದ್ದರು. ಆ ಬಳಿಕವೂ ಅವರಿಗೆ ನಟಿಸಲು ಅವಕಾಶ ಬರುತ್ತಿತ್ತು. ಹೀಗಾಗಿ ಸಾಕಷ್ಟು ಯೋಚಿಸಿ, ಚಿಂತಿಸಿ ಇದೀಗ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇದೇ ಖುಷಿಯಲ್ಲಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು ಸಂಗೀತಾ ಭಟ್.
- ಈಗೇನು ಮಾಡುತ್ತಿದ್ದೀರಿ?
- "ಕ್ಲಾಂತ', "ರೂಪಾಂತರ' ಹಾಗೂ "ಅಬಜಬದಬ'.. ಮೂರು ಚಿತ್ರಗಳಲ್ಲಿ ನಟಿಸಿದ್ದೇನೆ. ಚಿತ್ರೀಕರಣ ಪೂರ್ಣಗೊಂಡು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ವರ್ಷ ರಿಲೀಸ್ ಆಗುವ ನಿರೀೆಯಿದೆ. ಹೊಸ ಚಿತ್ರಕ್ಕೆ ಸೈನ್ ಮಾಡುವ ಮೊದಲು ಈಗ ಫಿಟ್ನೆಸ್ ಬಗ್ಗೆ ಗಮನ ಹರಿಸಿದ್ದೇನೆ.
- ನಿಮ್ಮನ್ನು ತೆರೆಯ ಮೇಲೆ ನೋಡಿ ಮೂರು ವರ್ಷಗಳಾಯಿತು.
- ಹೌದು, "ಆದ್ಯಾ' ಚಿತ್ರದ ಬಳಿಕ ಮತ್ತೆ ನಾನು ನಟಿಸಿರಲಿಲ್ಲ. ಮೀಟೂ ನಂತರ ದೂರ ಇದ್ದುಬಿಡೋಣ ಅಂತ ಸುಮ್ಮನಿದ್ದೆ. ನನಗೂ ಒಂದು ಗ್ಯಾಪ್ ಬೇಕಾಗಿತ್ತು. ಆ ಬ್ರೇಕ್ ತೆಗೆದುಕೊಂಡಿದ್ದು ಒಳ್ಳೆಯದೇ ಅಂತನ್ನಿಸುತ್ತಿದೆ. ಮತ್ತೆ ಧೈರ್ಯದೊಂದಿಗೆ ವಾಪಸ್ ಬರುವುದು ಕಷ್ಟವಾಯಿತು. ಹಳೆಯದನ್ನು ಮರೆತು ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡುವ ನಿರ್ಧಾರ ತೆಗೆದುಕೊಳ್ಳುವುದೇ ತುಂಬ ಕಷ್ಟವಾಯಿತು.
- ಈಗ ಹೊಸ ಪಯಣ ಆರಂಭವಾಗಿದೆ…
- ಸಂಗೀತಾ ಅಂದರೆ ಈ ರೀತಿಯ ಪಾತ್ರ ಮಾಡುತ್ತಾರೆ, ಆ ಪಾತ್ರಕ್ಕೆ ಹೊಂದುತ್ತಾರೆ ಅಂತ ಇತ್ತು. ಆದರೆ, ಈ ಕಮ್ಬ್ಯಾಕ್ ಮಾಡುವಾಗ ನಾನು ಇದುವರೆಗೂ ಮಾಡಿರದ, ಹೊಸ ರೀತಿಯ ಪಾತ್ರಗಳಲ್ಲಿ ನಟಿಸಬೇಕು ಅಂತ ನಿರ್ಧರಿಸಿದ್ದೆ. "ಅಬಜಬದಬ' ಚಿತ್ರದಲ್ಲಿ ಅತಿಥಿ ಪಾತ್ರವಾದರೂ, ಕಥೆಗೆ ಟ್ವಿಸ್ಟ್ ನೀಡುವ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದೇನೆ. "ಕ್ಲಾಂತ' ಚಿತ್ರದಲ್ಲಿ ಈಗಷ್ಟೇ ಕಾಲೇಜು ಮುಗಿಸಿ, ಕೆಲಸಕ್ಕೆ ಸೇರಿದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಇನ್ನು "ರೂಪಾಂತರ' ಸಿನಿಮಾದಲ್ಲಿ ಒಂದು ಕುಟುಂಬವನ್ನು ಒಟ್ಟಿಗೇ ಹಿಡಿದಿಡುವ ತಾಯಿಯ ಪಾತ್ರದಲ್ಲಿ ನಟಿಸಿದ್ದೇನೆ. ಮುಂದೆಯೂ ಸಹ ಹೊಸ ಹೊಸ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ.
- ಈ ಹಿಂದೆ ಪರಭಾಷೆಗಳಲ್ಲೂ ನಟಿಸಿದ್ದಿರಿ. ಮುಂದೆ?
- ಹೌದು, ತಮಿಳಿನಲ್ಲಿ ಮೂರು, ತೆಲುಗಿನಲ್ಲಿ ಒಂದು ಚಿತ್ರದಲ್ಲಿ ನಟಿಸಿದ್ದೆ. ಆದರೆ, ಕನ್ನಡದಲ್ಲಿ ಸಿಗುವ ಸಮಾಧಾನ ಬೇರೆ ಭಾಷೆಗಳಲ್ಲಿ ಸಿಗಲಿಲ್ಲ. ಹಾಗಂತ ಪರಭಾಷೆಗಳಲ್ಲಿ ನಟಿಸುವುದೇ ಅಂತಲ್ಲ. ಮುಂದೆ ಇಷ್ಟವಾದ ಪಾತ್ರ ಸಿಗುವುದಾದರೆ ಖಂಡಿತ ಹೋಗುತ್ತೇನೆ. ಏಕೆಂದರೆ ನಮ್ಮ ಸಿನಿಮಾಗಳನ್ನು ಅವರು ನೋಡುತ್ತಿದ್ದಾರೆ, ಅವರ ಸಿನಿಮಾಗಳನ್ನು ನಾವು ನೋಡುತ್ತಿದ್ದೇವೆ. ಕರೊನಾ ಬಳಿಕ ಎಲ್ಲ ಬಗೆಯ ಕಂಟೆಂಟ್ಗಳನ್ನು ಎಲ್ಲರೂ ನೋಡುತ್ತಿದ್ದೇವೆ.
- ನಟನೆ ಜತೆ ನಿರ್ಮಾಣ, ನಿರ್ದೇಶನ…
- ಇತ್ತೀಚೆಗಷ್ಟೆ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದೇನೆ. ಸಂಗೀತಾ ಭಟ್ ಸುದರ್ಶನ್ ಪ್ರೊಡಕ್ಷನ್ಸ್ ಬ್ಯಾನರ್ ನೋಂದಣಿ ಮಾಡಿದ್ದೇನೆ. ನಮ್ಮ ಬ್ಯಾನರ್ನಲ್ಲಿ ನಮಗೆ ಇಷ್ಟವಾದ ಚಿತ್ರಗಳನ್ನು, ಪಾತ್ರಗಳನ್ನು ನಾವೇ ಮಾಡಬಹುದು ಎಂಬ ಖುಷಿಯಿದೆ.