ದೀಪಾವಳಿಗೆ ಪ್ರಭಾಸ್​ 'ಸ್ಪಿರಿಟ್' ರಿಲೀಸ್​ ಅಂತ ಹೇಳಿದ್ದೇ ಆದರೂ ಮತ್ತದೇ ಮಿಸ್ಟೇಕ್​ ಮಾಡಿದ ನಿರ್ದೇಶಕ ಸಂದೀಪ್​ | Prabhas Spirit 
ಸಿನಿವಾಣಿ

ದೀಪಾವಳಿಗೆ ಪ್ರಭಾಸ್​ 'ಸ್ಪಿರಿಟ್' ರಿಲೀಸ್​ ಅಂತ ಹೇಳಿದ್ದೇ ಆದರೂ ಮತ್ತದೇ ಮಿಸ್ಟೇಕ್​ ಮಾಡಿದ ನಿರ್ದೇಶಕ ಸಂದೀಪ್​ | Prabhas Spirit

ಅಕ್ಟೋಬರ್​ 27, ದೀಪಾವಳಿ ಹಬ್ಬಕ್ಕೆ ರಿಲೀಸ್​ ಆಗಲಿದೆ ಎಂದು ಹೇಳಿರುವ ಸಂದೀಪ್​, ಇದು ಈ ವರ್ಷ ಅಲ್ಲ, ಮುಂದಿನ ವರ್ಷಕ್ಕೆ ತೆರೆ ಕಾಣಲಿದೆ ಎಂದಿರುವುದು ಸದ್ಯ ನಟನ ಫ್ಯಾನ್ಸ್ ಬಳಗಕ್ಕೆ ತೀವ್ರ​ ಬೇಸರ ತಂದಿದೆ.

Prabhas Spirit: ತೆಲುಗು ನಿರ್ದೇಶಕ ಸಂದೀಪ್ ವಂಗಾ ರೆಡ್ಡಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹಾಗೂ ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ಸ್ಪಿರಿಟ್’​ ಚಿತ್ರದ ರಿಲೀಸ್​ ದಿನಾಂಕ ಇದೀಗ ಅಧಿಕೃತವಾಗಿ ಹೊರಬಿದ್ದಿದೆ.

ಪ್ರಭಾಸ್​ ಅಭಿಮಾನಿಗಳು ತುದಿಗಾಲಿನಲ್ಲಿ ಹಾಗೂ ಭಾರಿ ಕುತೂಹಲದಿಂದ ಕಾಯುತ್ತಿರುವ ಸ್ಪಿರಿಟ್​ ಸಿನಿಮಾದ ರಿಲೀಸ್​ ದಿನಾಂಕವನ್ನು ನಿರ್ದೇಶಕರು ಘೋಷಿಸಿದ್ದೇ ಆದರೂ ಮತ್ತದೇ ಮುಂದೂಡುವ ಪ್ರಯತ್ನ ಕಿಂಚಿತ್ತು ಇಷ್ಟವಾಗಿಲ್ಲ. ಅಕ್ಟೋಬರ್​ 27, ದೀಪಾವಳಿ ಹಬ್ಬಕ್ಕೆ ರಿಲೀಸ್​ ಆಗಲಿದೆ ಎಂದು ಹೇಳಿರುವ ಸಂದೀಪ್​, ಇದು ಈ ವರ್ಷ ಅಲ್ಲ, ಮುಂದಿನ ವರ್ಷಕ್ಕೆ ತೆರೆ ಕಾಣಲಿದೆ ಎಂದಿರುವುದು ಸದ್ಯ ನಟನ ಫ್ಯಾನ್ಸ್ ಬಳಗಕ್ಕೆ ತೀವ್ರ​ ಬೇಸರ ತಂದಿದೆ.

ಮುಂದಿನ ದೀಪಾವಳಿಗೆ ರಿಲೀಸ್​

ಕಳೆದ ವರ್ಷ ಬರೀ ಮುಂದೂಡಿಕೆಯಿಂದಲೇ ಸುದ್ದಿಯಾಗಿದ್ದ ಸ್ಪಿರಿಟ್, ಮತ್ತೊಂದೆಡೆ, ​ನಟಿ ದೀಪಿಕಾ ಪಡುಕೋಣೆ ಅವರನ್ನು ನಾಯಕಿ ಸ್ಥಾನದಿಂದ ಕೈಬಿಡುವ ಮೂಲಕ ದೊಡ್ಡದಾಗಿ ಸುದ್ದಿ ಮಾಡಿತ್ತು. ಚಿತ್ರಕ್ಕೆ ಸ್ಟಾರ್​ ಹೀರೋಯಿನ್​ ಆಗಿ ಎಂಟ್ರಿಕೊಟ್ಟಿದ್ದ ದೀಪಿಕಾ ಅವರ ಒಂದಷ್ಟು ಡಿಮಾಂಡ್​ಗಳಿಗೆ ಯಾವುದೇ ಕಾರಣಕ್ಕೂ ಒಪ್ಪಿಗೆ ಇಲ್ಲ ಎಂದು ಸಂದೀಪ್​ ಅವರನ್ನು ಚಿತ್ರತಂಡದಿಂದ ದಿಢೀರ್​ ಕೈಬಿಟ್ಟರು. ಇದೊಂದು ದೊಡ್ಡ ವಿವಾದಕ್ಕೆ ತಿರುಗುತ್ತಿದ್ದಂತೆ, ನಾಯಕಿಯ ಸ್ಥಾನಕ್ಕೆ ಹಲವರ ಹೆಸರು ಕೇಳಿಬಂದರೂ ಅವರ ಸ್ಥಾನಕ್ಕೆ ಮತ್ತೊಬ್ಬ ಸ್ಟಾರ್​ ನಟಿಯ ಬದಲು ಬಾಲಿವುಡ್​ ಯುವ ನಟಿ ತ್ರಿಪ್ತಿ ದಿಮ್ರಿ ಅವರನ್ನೇ ಆಯ್ಕೆ ಮಾಡಿದ್ದು ಮತ್ತೊಂದು ಅಚ್ಚರಿಗೆ ಕಾರಣವಾಯಿತು.

ಬಿಗ್​ ಪ್ರಾಜೆಕ್ಟ್​ನಿಂದ ಸ್ಟಾರ್​ ನಟಿ ಹೊರನಡೆಯುತ್ತಿದ್ದಂತೆ ಅವರ ಸ್ಥಾನಕ್ಕೆ ಮತ್ತೊಬ್ಬ ನಯನತಾರ, ರುಕ್ಮಿಣಿ ವಸಂತ್​, ಮೃನಾಲ್​ ಠಾಕೂರ್​, ಕೃತಿ ಶೆಟ್ಟಿ ಸೇರಿದಂತೆ ಹಲವರ ಹೆಸರುಗಳು ಟಾಲಿವುಡ್​ ಅಂಗಳದಲ್ಲಿ ಕೇಳಿಬಂದಿತ್ತು. ಇವರಲ್ಲಿ ಯಾರಿಗೆ ಪ್ರಭಾಸ್​ ಸ್ಪಿರಿಟ್​ನಲ್ಲಿ ಅವಕಾಶ ಸಿಗಬಹುದು ಎಂಬ ಕುತೂಹಲ ಸಿನಿಪ್ರೇಮಿಗಳಲ್ಲಿ ಕಾಡುತ್ತಿತ್ತು. ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದಂತೆ ಒಬ್ಬೊಬ್ಬರ ಅಭಿಪ್ರಾಯಗಳು ವಿಭಿನ್ನವಾಗಿತ್ತು. ಕಾರಣ, ಅದಾಗಲೇ ತಮ್ಮದೇ ಅನಿಮಲ್​ ಚಿತ್ರದಲ್ಲಿ ನಟಿಸಿದ್ದ ತ್ರಿಪ್ತಿಗೆ ದೊಡ್ಡ ಅವಕಾಶ ಕೊಡುವ ಮೂಲಕ ಸಂದೀಪ್​ ತಮ್ಮ ಸೇಡು ತೀರಿಸಿಕೊಂಡರು. ಮತ್ತು ನಿರ್ಮಾಪಕರ ಜೇಬನ್ನು ಇನ್ನಷ್ಟು ಗಟ್ಟಿ ಮಾಡಿದರು.

8 ಭಾಷೆಗಳಲ್ಲಿ 'ಸ್ಪಿರಿಟ್' ಅಬ್ಬರ!

ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಮೊದಲ ಬಾರಿಗೆ ಈ ಚಿತ್ರಕ್ಕಾಗಿ ಒಟ್ಟಾಗಿ ಕೆಲಸ ಮಾಡ್ತಿದ್ದಾರೆ. ಭೂಷಣ್ ಕುಮಾರ್ ಅವರ ಟಿ-ಸೀರಿಸ್ ಹಾಗೂ ಭದ್ರಕಾಳಿ ಪಿಕ್ಚರ್ಸ್ ಸಹಯೋಗದಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಒಟ್ಟು ಎಂಟು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಚಿತ್ರದಲ್ಲಿ ಪ್ರಭಾಸ್ ಇದೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ತೃಪ್ತಿ ದಿಮ್ರಿ, ವಿವೇಕ್ ಒಬೆರಾಯ್ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ ಎಂದು ಸಿನಿ ವರದಿಗಳು ತಿಳಿಸಿವೆ,(ಏಜೆನ್ಸೀಸ್).