ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿ (CBFC) 'A' ಸರ್ಟಿಫಿಕೇಟ್ (Adults Only) ನೀಡಿದೆ.
ಬೆಂಗಳೂರಿನ ಪ್ರಾದೇಶಿಕ ಸೆನ್ಸಾರ್ ಕಚೇರಿಯಿಂದ ದೊರೆತಿರುವ ಪ್ರಮಾಣ ಪತ್ರದ ಪ್ರಕಾರ, ಈ ಚಿತ್ರವು ಬರೋಬ್ಬರಿ 3 ಗಂಟೆ, 14 ನಿಮಿಷ,12 ಸೆಕೆಂಡ್ ಸುದೀರ್ಘ ಚಾಲನಾ ಸಮಯವನ್ನು ಹೊಂದಿದೆ. ಮೂಲತಃ ಕನ್ನಡ ಭಾಷೆಯಲ್ಲಿ ಸಿದ್ಧಗೊಂಡಿರುವ ಈ ಚಿತ್ರವು ಅತ್ಯಂತ ಭೀಕರ ಆಕ್ಷನ್ ಮತ್ತು ಗಂಭೀರ ಕಥಾಹಂದರವನ್ನು ಹೊಂದಿರುವುದರಿಂದ ಸೆನ್ಸಾರ್ ಮಂಡಳಿ 'A' ಪ್ರಮಾಣಪತ್ರ ನೀಡಿದೆ.
ಹಿಂಸೆ, ದ್ವೇಷ ಹಾಗೂ ಬಾಂಧವ್ಯದ ಕಥೆ
ಚಿತ್ರದ ಕಥಾಹಂದರದ ಪ್ರಕಾರ, ಈ ಸಿನಿಮಾದ ಕಥೆಯು ಸ್ವಾತಂತ್ರ್ಯೋತ್ತರ ಕಾಲದ ಗೋವಾದ ಹಿನ್ನಲೆಯಲ್ಲಿ ಸಾಗಲಿದೆ. ಅಪರಾಧ, ಹಿಂಸೆ ಮತ್ತು ದ್ವೇಷದಿಂದಲೇ ಕೂಡಿರುವ ಆ ಕಾಲಘಟ್ಟದ ಅಂಧಕಾರದ ಜಗತ್ತಿನಲ್ಲಿ, ಗ್ಯಾಂಗ್‌ಸ್ಟರ್ ಒಬ್ಬ ತನ್ನ ನಿಷ್ಠೆ, ನೈತಿಕತೆ ಮತ್ತು ವೈಯಕ್ತಿಕ ಮುಕ್ತಿಗಾಗಿ ನಡೆಸುವ ಹೋರಾಟವೇ ಚಿತ್ರದ ಮುಖ್ಯ ಅಂಶವಾಗಿದೆ. ಆದಾಗ್ಯೂ, ಪ್ರೀತಿಯನ್ನು ಉಳಿಸಿಕೊಳ್ಳಲು ಮತ್ತು ಕತ್ತಲೆಯ ಪ್ರಪಂಚದಿಂದ ಹೊರಬರಲು ಪಡುವ ಪಾಡನ್ನು ಚಿತ್ರದಲ್ಲಿ ವಿವರಿಸಲಾಗಿದೆ.
ದ್ವಿಪಾತ್ರದಲ್ಲಿ ಕಣಕ್ಕಿಳಿದ ಯಶ್
ಚಿತ್ರದ ಟ್ರೇಲರ್‌ನಲ್ಲಿ ಯಶ್ ತಂದೆ ಮತ್ತು ಮಗನಾಗಿ ದ್ವಿಪಾತ್ರದಲ್ಲಿ (ರಾಯಾ ಮತ್ತು ರೂಮಿ ಅಲಿಯಾಸ್ ಟಿಕೆಟ್) ಮಿಂಚಿದ್ದಾರೆ. ತಂದೆ ಮತ್ತು ಮಗನ ನಡುವಿನ ವಿಷಪೂರಿತ ಬಾಂಧವ್ಯ, ಅವರಿಬ್ಬರ ಸಿದ್ಧಾಂತಗಳ ನಡುವಿನ ಘರ್ಷಣೆ ಹಾಗೂ ಅಂತಿಮವಾಗಿ ಇಬ್ಬರ ನಡುವಿನ ಕಾದಾಟವು ಸಿನಿಮಾದಲ್ಲಿ ರೋಮಾಂಚನಕಾರಿ ಘಟ್ಟವಾಗಲಿದೆ. ಇದರೊಂದಿಗೆ ಕಿಯಾರಾ ಅಡ್ವಾಣಿ ಮತ್ತು ತಾರಾ ಸುತಾರಿಯಾ ಅವರ ಪಾತ್ರಗಳೊಂದಿಗಿನ ಭಾಂದವ್ಯ, ಕೋಪ ಮತ್ತು ದುರಾಸೆಯ ಹಲವು ಸೀನ್ಗಳು ಕಥೆಯನ್ನು ಇನ್ನಷ್ಟು ಬೆರಗುಗೊಳಿಸಿವೆ.
ದೊಡ್ಡ ತಾರಾಗಣ ಹಾಗೂ ನಿರ್ಮಾಣ
ಕೆವಿಎನ್ ಪ್ರೊಡಕ್ಸನ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮೂಲತಃ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರ್ಮಾಣಗೊಂಡಿರುವ 'ಟಾಕ್ಸಿಕ್', ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗಲಿದೆ.
ಈ ಚಿತ್ರದಲ್ಲಿ ನಯನತಾರಾ, ಹ್ಯೂಮಾ ಕುರೇಷಿ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರಂತಹ ದಂಡೇ ಅಭಿನಯಿಸಿದೆ. ಬಿಡುಗಡೆಗೂ ಮುನ್ನವೇ ಈ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿದೆ (ಏಜೆನ್ಸೀಸ್).