ಬೆಂಗಳೂರು: ನಿತೇಶ್ ತಿವಾರಿ ನಿರ್ದೇಶನ ಹಾಗೂ ನಮಿತ್ ಮಲೋತ್ರಾ ನಿರ್ಮಾಣದ ಬಹು ನೀರಿಕ್ಷಿತ ಸಿನಿಮಾ ರಾಮಾಯಣ ಬಾಕ್ಸ್ ಆಫೀಸ್ನಲ್ಲಿ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ತೆರೆಕಂಡ ದಿನ ಹೇಳಿಕೊಳ್ಳುವಂತ ಕಲೆಕ್ಷನ್ ಮಾಡಿದ್ದರೂ 8 ನೇ ದಿನಕ್ಕೆ ಸಾವಿರ ಕೋಟಿಗೂ ಮೀರಿದ ಗಳಿಕೆ ಮಾಡಿದ್ದು, ಕರ್ನಾಟಕದಲ್ಲಿ ಕೂಡ ಈ ಸಿನಿಮಾ ಅತ್ಯುತ್ತಮ ಗಳಿಕೆ ಕಾಣುತ್ತಿದೆ.
ಈ ರಾಮಾಯಣ ಸಿನಿಮಾದಲ್ಲಿ ಕನ್ನಡದ ನಟ, ರಾಕಿಂಗ್ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಾರಣ, ಈ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಹಾಗೂ ನಂಬಿಕೆಯನನ್ನು ಪ್ರೇಕ್ಷಕ ಹೊಂದಿದ್ದನು.
ಆ ನಂಬಿಕೆಯನ್ನು ಯಶ್ ತಮ್ಮ ಅಭಿನಯದ ಮೂಲಕ ಉಳಿಸಿಕೊಂಡಿದ್ದು, ಜನರು ಕೂಡ ಯಶ್ ಅವರ ರಾವಣನ ಪಾತ್ರವನ್ನು ಮನಸಾರೆ ಮೆಚ್ಚಿಕೊಂಡ ಕಾರಣ ಸಿನಿಮಾ ಬಿಡುಗಡೆಯಾದ 9 ನೇ ದಿನಕ್ಕೆ 'ರಾಮಾಯಣ' ಕರ್ನಾಟಕದಲ್ಲಿ ಭರ್ತಿ 100 ಕೋಟಿಗೂ ಮೀರಿದ ಗಳಿಕೆ ಮಾಡಲು ಸಾಧ್ಯವಾಗಿದೆ. ಅದೇ ರೀತಿ ಕನ್ನಡ ಭಾಷೆಯಲ್ಲಿ ಡಬ್ ಆದ ವರ್ಷನ್ ಸುಮಾರು 50 ಕೋಟಿಗೂ ಹೆಚ್ಚಿನ ಗಳಿಕೆ ಮಾಡಿದೆ ಎಂದು ತಿಳಿದುಬಂದಿದೆ.
ಬಾಲಿವುಡ್ನಲ್ಲಿ ತಯಾರಾದ ಸಿನಿಮಾವೊಂದು ಕರ್ನಾಟಕದಲ್ಲಿ ನೂರು ಕೋಟಿ ಗಳಿಕೆ ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ರಾಮಾಯಣ ಪಾತ್ರವಾಗಿದೆ. ಈ ಮೈಲಿಗಲ್ಲನ್ನು ದಾಟುವಲ್ಲಿ ಕನ್ನಡಿಗ ರಾಕಿಂಗ್ಸ್ಟಾರ್ ಯಶ್ ಪಾತ್ರ ಬಹುಮುಖ್ಯವಾಗಿದೆ ಎನ್ನುವುದನ್ನು ಅಲ್ಲಗೇಳಿಯುವಂತಿಲ್ಲ.
ರಾಮಾಯಣ ಈ ದಾಖಲೆಯನ್ನು ಮಾಡುವ ಮೊದಲು ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾ 56 ಕೋಟಿ ಗಳಿಸಿ, ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್ ಸಿನಿಮಾ ಎಂಬ ದಾಖಲೆ ನಿರ್ಮಿಸಿತ್ತು. ಈಗ ಈ ದಾಖಲೆಯನ್ನು ಕನ್ನಡಿಗ ಯಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ರಾಮಾಯಣ ಮುರಿದಿದೆ.
ಕನ್ನಡ ಸಿನಿಮಾಗಳನ್ನು ಹೊರತು ಪಡಿಸಿ, ಕರ್ನಾಟಕದಲ್ಲಿ ಇತರ ಭಾಷೆಗಳ ಅದರಲ್ಲೂ ಬಾಲಿವುಡ್ ಸಿನಿಮಾಗಳು ಅಷ್ಟೇನು ಗಳಿಕೆ ಮಾಡುತ್ತಿರಲಿಲ್ಲ. ರಾಮಾಯದಲ್ಲಿ ಪ್ರಭು ಶ್ರೀರಾಮನಾಗಿ ಕಾಣಿಕೊಂಡಿರುವ ರಣಬೀರ್ ಕಪೂರ್ ನಟನೆಯ ಅನಿಮಲ್ ಸಿನಿಮಾದ ಕನ್ನಡ ವರ್ಷನ್ ಕೇವಲ 64 ಲಕ್ಷ ಮಾತ್ರ ಗಳಿಸಿತ್ತು. ಅಷ್ಟೇ ಅಲ್ಲದೇ, ಬಾಲಿವುಡ್ನ ಇತಿಹಾಸವನ್ನೇ ಬದಲಿಸಿದ ಧುರಂಧರ್ ಸಿನಿಮಾದ ಕನ್ನಡ ವರ್ಷನ್ ಕೇವಲ 3.87 ಕೋಟಿ ಮಾತ್ರ ಗಳಿಸಿಕೊಳ್ಳುವಲ್ಲಿ ಸಫಲವಾಗಿತ್ತು.
ಆದರೆ, ಈಗ ರಾಮಾಯಣದ ಕನ್ನಡ ವರ್ಷನ್ ಭರ್ತಿ 50 ಕೋಟಿ ಗಳಿಸುವ ಮೂಲಕ ಬೇರೆ ಭಾಷೆಯ ಸಿನಿಮಾಗಳಲ್ಲಿ ಕನ್ನಡದ ನಟರಿಗೆ ಸೂಕ್ತ ಸಮ್ಮಾನ ದೊರೆತರೆ ಹಾಗೂ, ಡಬ್ಬಿಂಗ್ ಅನ್ನು ಅರ್ಥಪೂರ್ಣವಾಗಿ ಮಾಡಿದರೆ ಕನ್ನಡ ಪ್ರೇಕ್ಷಕರು ಸಿನಿಮಾವನ್ನು ಅವರ ಭಾಷೆಯಲ್ಲಿಯೇ ನೋಡಿ, ಚಿತ್ರತಂಡಕ್ಕೆ ಕೋಟ್ಯಾಂತರ ರೂಪಾಯಿ ವ್ಯಾಪರ ನೀಡುತ್ತಾರೆಂದು ರಾಮಾಯಣ ಸಿನಿಮಾ ಸಾಭೀತು ಪಡಿಸಿದೆ, (ಏಜೆನ್ಸೀಸ್).