ನಿರ್ದೇಶನ: ಗೀತು ಮೋಹನ್ದಾಸ್
ನಿರ್ಮಾಣ: ಕೆವಿಎನ್ ಪ್ರೊಡಕ್ಷನ್ಸ್
ತಾರಾಗಣ: ಯಶ್, ನಯನತಾರಾ, ಕಿಯಾರಾ ಅಡ್ವಾನಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಹುಮಾ ಖುರೇಷಿ, ಬಾಲಾಜಿ ಮನೋಹರ್, ಸುದೇವ್ ನಾಯರ್ ಮತ್ತಿತರರು
"ಕೆಜಿಎಫ್' ಮೂಲಕ ಯಶಸ್ವಿ ಪ್ಯಾನ್ ಇಂಡಿಯಾ ಸವಾರಿ ಮಾಡಿದ್ದ ಯಶ್ "ಟಾಕ್ಸಿಕ್' ಮೂಲಕ ಪ್ಯಾನ್ ವರ್ಲ್ಡ್ ಯಾತ್ರೆ ಹೊರಟಿದ್ದಾರೆ. ಟೈಟಲ್ ಹೇಳುವಂತೆಯೇ ಇದು ಫೇರಿಟೇಲ್ ಫಾರ್ ಗ್ರೋನಪ್ಸ್. ಹೀಗಾಗಿ, ಕುಟುಂಬ ಸಮೇತ ಸಿನಿಮಾ ವೀಸಲು ಮುಜುಗರ ಅನಿಸಬಹುದು. ಹಾಗಾದರೆ, ಹೇಗಿದೆ ಸಿನಿಮಾ?
"ನಮ್ಮಿಂದ ನಮ್ಮನ್ನು ಕಾಪಾಡೋಕೆ ಯಾರಿಂದನೂ ಆಗಲ್ಲ' ಅಂತಾನೆ ರಾಯ (ಯಶ್). ಹುಟ್ಟಿದ ಕ್ಷಣದಿಂದಲೇ ರಕ್ತ ನೋಡಿದ ಆತ ಎಲ್ಲ ರೀತಿಯ ಭಾವನೆಗಳನ್ನೂ ಕಳೆದುಕೊಂಡಿರುತ್ತಾನೆ. ಹೋರಾಟದ ಬದುಕಿನ ನಡುವೆ ಅಕ್ಕ ಗಂಗಾ (ನಯನತಾರಾ) ರಾಯನಿಗೆ ಆಸರೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ಪೋರ್ಚುಗೀಸರ ಆಳ್ವಿಕೆಯಲ್ಲಿರುವ ಗೋವಾದ ಅಂಡರ್ವರ್ಲ್ಡ್ ಮತ್ತು ಡ್ರಗ್ಸ್ ಮಾಫಿಯಾ ದೊರೆಯಾಗಲು ಅಕ್ಕ-ತಮ್ಮ ಇಬ್ಬರೂ ಗೋವಾ ಡಾನ್ ಸಾಲ್ವಡಾರ್ ಜತೆ ಕೈಜೋಡಿಸುತ್ತಾರೆ. "ನನ್ ಮದರ್ ಟಂಗ್ ವೈಲೆನ್ಸ್ ಕಣೋ, ಯೂನಿವರ್ಸಲ್ ಲಾಂಗ್ವೇಜ್' ಅಂತ ನಂಬುವ ರಾಯ, ಎಲ್ಲ ಎದುರಾಳಿಗಳನ್ನೂ ಮಟ್ಟ ಹಾಕುತ್ತಾನೆ. ಸಾಲ್ವಡಾರ್ ಮಗಳು ರೆಬೆಕ್ಕಾ (ತಾರಾ) ಜತೆ ಆತನ ಮದುವೆ ನಿಶ್ಚಯವಾಗುತ್ತದೆ. ಅದರ ನಡುವೆ ಆತನಿಗೆ ಸರ್ಕಸ್ ಕಲಾವಿದೆ ನಾಡಿಯಾ (ಕಿಯಾರಾ) ಮೇಲೆ ಲವ್ ಆಗುತ್ತದೆ. ಆದರೆ, ಗೋವಾ ಪಡೆಯಬೇಕೆಂದರೆ ನಾಡಿಯಾ ಸಹವಾಸ ಬಿಡಬೇಕು ಎಂಬ ಷರತ್ತು ರಾಯನಿಗೆ ಎದುರಾಗುತ್ತದೆ. ಅಷ್ಟರಲ್ಲಿ ಆಕೆ ಗರ್ಭಿಣಿ ಅಂತ ಗೊತ್ತಾಗುತ್ತದೆ. ಇಬ್ಬರನ್ನೂ ಕಳೆದುಕೊಳ್ಳುವ ರಾಯ, "ಎಣ್ಣೆ ಹ್ಯಾಂಗೋವರ್ ಹೋಗಲು ಎಣ್ಣೆ ಹೊಡಿತೀವಿ, ಹೆಣ್ಣಿನ ಹ್ಯಾಂಗೋವರ್ ಹೋಗಲು ಮತ್ತೊಬ್ಬ ಹೆಣ್ಣಿನ ಹತ್ತಿರ ಹೋಗ್ತೀವಿ' ಅಂತ ಮೆಲ್ಲಿಸಾ (ರುಕ್ಮಿಣಿ) ಮೊರೆ ಹೋಗುತ್ತಾನೆ. ಹೀಗೆ ಹೊರಗೆ ಗೋವಾ ಗೆಲ್ಲಲು, ಒಳಗೆ ಭಾವನೆಗಳನ್ನು ಬದಿಗಿಟ್ಟು, ಹೃದಯವನ್ನು ಕಲ್ಲಾಗಿಸಿಕೊಂಡು ಪಾಪಪ್ರಜ್ಞೆಯನ್ನು ಜಯಿಸಲು ರಾಯ ನಡೆಸುವ ಹೋರಾಟದ ಸುತ್ತ "ಟಾಕ್ಸಿಕ್' ಸಾಗುತ್ತದೆ.
1920, 1947, 1967... ಹೀಗೆ ಮೂರು ಕಾಲಘಟ್ಟಗಳಲ್ಲಿ ನಡೆಯುವ ಕಥೆಯಿದು. ಹೀಗಾಗಿ ಯಶ್ ಮೂರ್ನಾಲ್ಕು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಪ್ರಾರಂಭವಾದ 40 ನಿಮಿಷಗಳಲ್ಲಿ ನಾಲ್ಕು ಹೊಡೆದಾಟಗಳು ಸೇರಿ ಮೊದರ್ಲಧ 8, 9 ಬಾರಿ ರಕ್ತಪಾತ ನಡೆಯುತ್ತದೆ. ಇಲ್ಲಿ ಯಾರೂ ಹೀರೋಗಳಲ್ಲ. ಎಲ್ಲರೂ ವಿಲನ್ಗಳೇ! ಅಪ್ಪ ಮಗನನ್ನ, ಹೆಂಡತಿ ಗಂಡನನ್ನ, ಅಕ್ಕ ತಮ್ಮನ್ನ, ವಧು - ವರನನ್ನು... ಹೀಗೆ ಮಕ್ಕಳು, ಹೆಂಗಸರು, ಮುದುಕರು ಎಂಬ ಬೇಧಭಾವವಿಲ್ಲದಂತೆ ಎಲ್ಲರ ಕ್ರೌರ್ಯದ ಕರಾಳ ಮುಖಗಳ ಅನಾವರಣವಾಗುತ್ತದೆ. ಹೀಗಾಗಿ ಸ್ವಲ್ಪ ಓವರ್ ದ ಟಾಪ್ ಅಂತನ್ನಿಸಬಹುದು. ಆದರೆ, ದ್ವೀತಿಯಾರ್ಧ ಸಿನಿಮಾ ಇನ್ನೊಂದು ಹಾದಿ ಹಿಡಿಯುತ್ತದೆ. ಅಲ್ಲಿ ಆ್ಯಕ್ಷನ್ ಜತೆಜತೆಗೆ ಭಾವನೆಗಳ ಮೇಲಾಟ ನಡೆಯುತ್ತದೆ. ಮೊದಲರ್ಧ ಹೊಡೆದಾಟವಿದ್ದರೆ, ದ್ವೀತಿಯಾರ್ಧ ತೊಳಲಾಟವಿದೆ. ಎರಡೂ ವಿಷಯಗಳಲ್ಲಿ ಯಶ್ ಮಿಂಚಿದ್ದಾರೆ. ರಾಯ, ಟಿಕೆಟ್ ಆಗಿ ಒಬ್ಬರೇ ಇಡೀ ಚಿತ್ರವನ್ನು ಹೊತ್ತು ಸಾಗಿದ್ದಾರೆ. ಅವರಿಗೆ ಅಲ್ಲಲ್ಲಿ ನಯನತಾರಾ, ಕಿಯಾರಾ, ರುಕ್ಮಿಣಿ ಸ್ವಲ್ಪ ದೂರ ಕೈಬದಲಾಯಿಸಿದ್ದಾರೆ. ಹಾಲಿವುಡ್ ಮೇಕಿಂಗ್ ಇರುವ ಭಾರತೀಯ ಚಿತ್ರವಿದು. ಹೀಗಾಗಿ ಕೆಲವೊಮ್ಮೆ ಕನ್ನಡಕ್ಕೆ ಡಬ್ ಆದ ಇಂಗ್ಲೀಷ್ ಚಿತ್ರವನ್ನು ನೋಡುತ್ತಿರುವ ಫೀಲ್ ನೀಡಿದರೂ ಆಶ್ಚರ್ಯವಿಲ್ಲ. ಅಷ್ಟರ ಮಟ್ಟಿಗಿದೆ ಮೇ"ಕಿಂಗ್! ಜತೆಗೆ ಪ್ರತಿಯೊಬ್ಬ ಕಲಾವಿದರ ಪರ್ಫಾಮೆನ್ಸ್ ಕೂಡ ಇಷ್ಟವಾಗುತ್ತದೆ. ಅದರಲ್ಲೂ ಯಶ್ ಹೆಸರಿಗೆ ತಕ್ಕಂತೆ ರಾ"ಕಿಂಗ್'! ಹಾಲಿವುಡ್ ಶೈಲಿಯ ಚಿತ್ರದ ಮೂಲಕ ಭಾರತದ ಎಮೋಷನಲ್ ಫೇರಿಟೇಲ್ಅನ್ನು ಪ್ರೇಕ್ಷಕರ ಮುಂದಿಡುವ ನಿರ್ದೇಶಕಿ ಗೀತು ಮೋಹನದಾಸ್ ಸಾಹಸವನ್ನು ಮೆಚ್ಚಲೇಬೇಕು. ರವಿ ಬಸ್ರೂರ್ ಹಿನ್ನೆಲೆ ಸಂಗೀತ, ಸಂಭಾಷಣೆಕಾರ ರಾವ್ ವಿನಯ್ ಒನ್ಲೈನರ್ಗಳು, ರಾಜೀವ್ ರವಿ ಛಾಯಾಗ್ರಹಣ "ಟಾಕ್ಸಿಕ್' ಅದ್ದೂರಿತನ ಹೆಚ್ಚಿಸಿವೆ. ಇನ್ನು 194 ನಿಮಿಷಗಳ ಸುದೀರ್ಘ ಸಿನಿಮಾದಲ್ಲಿ ಕೆಲ ಫೈಟ್ಗಳ ಜತೆಗೆ ಒಂದಷ್ಟು ಸನ್ನಿವೇಶಗಳಿಗೆ ಕತ್ತರಿ ಹಾಕುವ ಅವಕಾಶವಿತ್ತು. ಚಿತ್ರಕಥೆಯನ್ನು ಇನ್ನಷ್ಟು ಗಟ್ಟಿ ಮಾಡಬಹುದಿತ್ತು. ಅದೇನೇ ಇರಲಿ, ಕನ್ನಡ ನೆಲದಿಂದ ಪ್ಯಾನ್ ವರ್ಲ್ಡ್ ಹೊರಟಿರುವ ಯಶ್ ಸಾಹಸಕ್ಕೆ ಬೆನ್ನು ತಟ್ಟಲು, ಇದುವರೆಗಿನ ಅವರ ಬೆಸ್ಟ್ ಪರ್ಫಾಮೆನ್ಸ್ಗೆ ಸಾಕ್ಷಿಯಾಗಲು, ಹಾಲಿವುಡ್ ಶೈಲಿಯ ಕನ್ನಡ ಸಿನಿಮಾ ಕಣ್ತುಂಬಿಕೊಳ್ಳಲು ಇಷ್ಟಪಡುವವರಿಗೆ "ಟಾಕ್ಸಿಕ್' ಮೋಸ ಮಾಡುವುದಿಲ್ಲ.