ಕಿಯಾರಾ ಅಡ್ವಾಣಿ, ಟಾಕ್ಸಿಕ್​ ಸಿನಿಮಾ ವಿರುದ್ಧ ನಟಿ ತಾಪ್ಸಿ ಪನ್ನು ಆಕ್ರೋಶ! ಹೀಗಂದಿದ್ದೇಕೆ ಬಾಲಿವುಡ್​ ಬ್ಯೂಟಿ? Toxic  
ಸ್ಯಾಂಡಲ್‌ವುಡ್

ಕಿಯಾರಾ ಅಡ್ವಾಣಿ, ಟಾಕ್ಸಿಕ್​ ಸಿನಿಮಾ ವಿರುದ್ಧ ನಟಿ ತಾಪ್ಸಿ ಪನ್ನು ಆಕ್ರೋಶ! ಹೀಗಂದಿದ್ದೇಕೆ ಬಾಲಿವುಡ್​ ಬ್ಯೂಟಿ? Toxic

ಪ್ರಮುಖ ಮುಖ್ಯಾಂಶಗಳು

  • ತಾಪ್ಸಿ ಪನ್ನು ನೀಡಿರುವ ವಿವಾದಾತ್ಮಕ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ
  • ಯಶ್ ಹಾಗೂ ಕಿಯಾರಾ ನಟನೆಯ ಟಾಕ್ಸಿಕ್ ಚಿತ್ರದ ವಿರುದ್ಧ ತಾಪ್ಸಿ ಪರೋಕ್ಷ ಟೀಕೆ
  • ಸದ್ಯದ ಕೆಲವು ದೊಡ್ಡ ಬಜೆಟ್ ಸಿನಿಮಾಗಳನ್ನು ನೋಡಿ ನಿವೃತ್ತಿ ಪಡೆಯಲು ಅನಿಸಿತು ಎಂದ ನಟಿ
  • ಪ್ರೇಕ್ಷಕರು ಇಷ್ಟಪಟ್ಟರೂ ಅಂತಹ ಸಿನಿಮಾಗಳಲ್ಲಿ ನಟಿಸಲು ತನಗೆ ಆಸಕ್ತಿ ಇಲ್ಲ ಎಂದ ತಾಪ್ಸಿ
ಮುಂಬೈ: ಬಾಲಿವುಡ್​ ನಟಿ ತಾಪ್ಸಿ ಪನ್ನು ತಮ್ಮ ವಿಶಿಷ್ಟ ಹಾಗೂ ವಿಭಿನ್ನ ಪಾತ್ರಗಳ ಮೂಲಕವೇ ಗುರುತಿಸಿಕೊಂಡವರು. ಆದರೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾಪ್ಸಿ ನೀಡಿರುವ ಹೇಳಿಕೆಯೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಯಶ್ ಹಾಗೂ ಕಿಯಾರಾ ಅಡ್ವಾಣಿ ನಟನೆಯ 'ಟಾಕ್ಸಿಕ್' ( Toxic ) ಚಿತ್ರದ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿವೆ. ಅಷ್ಟಕ್ಕೂ ತಾಪ್ಸಿ ಹೇಳಿದ್ದೇನು? ಯಾಕೆ ಚರ್ಚಯಾಗುತ್ತಿದೆ? ಎಂಬ ಪ್ರಶ್ನೆಗಳಿಗೆ ವಿವರವಾದ ಉತ್ತರವನ್ನು ನಾವೀಗ ತಿಳಿದುಕೊಳ್ಳೋಣ.
ಸಿನಿಮಾ ಪತ್ರಕರ್ತ ಸುಚಿನ್ ಮೆಹ್ರೋತ್ರಾ ಅವರೊಂದಿಗೆ ಮಾತನಾಡಿದ ನಟಿ ತಾಪ್ಸಿ ಪನ್ನು, ತಾವು ದಶಕದ ಹಿಂದೆ ಚಿತ್ರರಂಗಕ್ಕೆ ಕಾಲಿಡಲು ಸಿಕ್ಕ ಅವಕಾಶದ ಬಗ್ಗೆ ಸ್ಮರಿಸಿದರು. ತಮಗೆ ಸಿಕ್ಕ ಆರಂಭಿಕ ದಿನಗಳ ವಾತಾವರಣದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ತಾಪ್ಸಿ, ಆ ಕಾಲದಲ್ಲಿ ಹಿಂದಿ ಮುಖ್ಯವಾಹಿನಿಯ ಸಿನಿಮಾಗಳು ಒಂದೇ ರೀತಿಯಾಗಿರದೆ, ವಿಭಿನ್ನತೆಯಿಂದ ಕೂಡಿರುತ್ತಿದ್ದವು ಎಂದ ತಿಳಿಸಿದರು.

ಸದ್ಯದ ಸಿನಿಮಾಗಳ ಬಗ್ಗೆ ನಿರಾಶೆ

ಸದ್ಯ ಬಿಡುಗಡೆಯಾಗುತ್ತಿರುವ ಚಿತ್ರಗಳನ್ನು ನೋಡಿದಾಗ ತಮಗೆ ಬೇಸರವಾಗುತ್ತದೆ ಎಂದು ತಾಪ್ಸಿ ಹೇಳಿದರು. ಇತ್ತೀಚಿನ ತಿಂಗಳುಗಳಲ್ಲಿ ತೆರೆಕಂಡ ಕೆಲವು ಸಿನಿಮಾಗಳನ್ನು ತಮ್ಮ ಕುಟುಂಬದೊಂದಿಗೆ ವೀಕ್ಷಿಸಿದಾಗ, ಈ ರೀತಿಯ ಸಿನಿಮಾಗಳಲ್ಲಿ ನಟಿಸುವುದಕ್ಕಿಂತ ಈಗಲೇ ಚಿತ್ರರಂಗದಿಂದ ನಿವೃತ್ತಿ ಪಡೆಯುವುದು ಉತ್ತಮವೇ ಎಂದು ತಮಗೆ ಅನಿಸಿತು ಎಂದು ತಾಪ್ಸಿ ಸ್ಪಷ್ಟಪಡಿಸಿದರು.
ಸದ್ಯ ಚಿತ್ರರಂಗದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಾತನಾಡುತ್ತಾ, ತಮಗೆ ಸಿನಿಮಾ ನಟನೆಯ ಮೇಲಿನ ಒಲವು ಕುರುಡಾಗಿಲ್ಲ ಎಂದು ತಾಪ್ಸಿ ತಿಳಿಸಿದರು. ಅಂತಹ ವಿಭಿನ್ನ ಅಥವಾ ಕಮರ್ಷಿಯಲ್ ಮಾದರಿಯ ಸಿನಿಮಾಗಳನ್ನು ಮಾಡುವಷ್ಟು ಕುರುಡು ಪ್ರೀತಿ ತನ್ನ ವೃತ್ತಿಯ ಮೇಲೆ ಇಲ್ಲ ಎಂದು ತಾಪ್ಸಿ ಅವರು ಖಡಕ್ ಆಗಿ ನುಡಿದರು. ಅಲ್ಲದೆ, ಅಂತಹ ದೊಡ್ಡ ಬಜೆಟ್‌ನ ಚಿತ್ರಗಳಿಗೆ ಒಂದು ವರ್ಗದ ಪ್ರೇಕ್ಷಕರು ಇದ್ದಾರೆ ಎಂಬುದನ್ನು ತಾಪ್ಸಿ ಒಪ್ಪಿಕೊಂಡರು. ಆದರೆ, ಪ್ರೇಕ್ಷಕರು ಇಷ್ಟಪಡುತ್ತಾರೆ ಎಂದ ಮಾತ್ರಕ್ಕೆ ತಾವೇ ಖುದ್ದಾಗಿ ಆ ರೀತಿಯ ಸಿನಿಮಾಗಳಲ್ಲಿ ನಟಿಸಲು ಇಷ್ಟಪಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ವೈಯಕ್ತಿಕವಾಗಿ ತನ್ನ ಆಯ್ಕೆಗಳು ಬೇರೆ ಇರುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಸಮಯ ಬದಲಾಗಬಹುದು ಆದರೆ ತಾವೂ ನಿರ್ಮಿಸಿಕೊಂಡಿರುವ ಸಿನಿಮಾ ವೃತ್ತಿಜೀವನ ಹಾಗೆಯೇ ಉಳಿಯುತ್ತದೆ ಎಂದು ತಾಪ್ಸಿ ಹೇಳಿದರು. ಭವಿಷ್ಯದಲ್ಲಿ ತಾವು ಮಾಡಿದ ಸಿನಿಮಾಗಳನ್ನು ಹಿಂತಿರುಗಿ ನೋಡಿದಾಗ ಯಾವುದೇ ಮುಜುಗರವಾಗದಂತಹ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ತಾವು ಬಯಸುವುದಾಗಿ ಅವರು ತಿಳಿಸಿದರು.

ನೆಟ್ಟಿಗರಿಂದ ತೀವ್ರ ಟೀಕೆ

ತಾಪ್ಸಿ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇಂಟರ್‌ನೆಟ್‌ನಲ್ಲಿ ನೆಟ್ಟಿಗರು ನಟಿಯ ವಿರುದ್ಧ ತಿರುಗಿಬೆದ್ದಿದ್ದಾರೆ. ಕಿಯಾರಾ ಅಡ್ವಾಣಿ ನಟನೆಯ 'ಟಾಕ್ಸಿಕ್' ಚಿತ್ರದ ಕಡೆಗೆಯೇ ತಾಪ್ಸಿ ಈ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ ಎಂದು ವಾದಿಸುತ್ತಿರುವ ಅಭಿಮಾನಿಗಳು, ತಾಪ್ಸಿ ತಮ್ಮ ವೃತ್ತಿಯ ಆರಂಭದಲ್ಲಿ ಯಾವ ರೀತಿಯ ಸಿನಿಮಾಗಳನ್ನು ಮಾಡಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಲಿ ಎಂದು ಕಿಡಿಕಾರುತ್ತಿದ್ದಾರೆ.
ಅಂದಹಾಗೆ, ವೆಂಕಟ್ ಕೆ. ನಾರಾಯಣ್ ಮತ್ತು ಯಶ್ ಅವರ ನಿರ್ಮಾಣದಲ್ಲಿ ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರವು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮೂಡಿಬಂದಿದೆ. ನಯನತಾರಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಸೇರಿದಂತೆ ದೊಡ್ಡ ತಾರಾಗಣವಿರುವ ಈ ಚಿತ್ರವು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದು, ನಿರೀಕ್ಷಿತ ಮಟ್ಟದಲ್ಲಿ ಬಾಕ್ಸ್‌ಆಫೀಸ್‌ನಲ್ಲಿ ಸದ್ದು ಮಾಡುವಲ್ಲಿ ಕೊಂಚ ಹಿನ್ನಡೆ ಅನುಭವಿಸಿದೆ, (ಏಜೆನ್ಸೀಸ್​).