ಪ್ರಮುಖ ಮುಖ್ಯಾಂಶಗಳು
ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್(ಸಚಿನ್: ಎ ಬಿಲಿಯನ್ ಡ್ರೀಮ್ಸ್), ಮಹೇಂದ್ರ ಸಿಂಗ್ ಧೋನಿ (ಎಂ.ಎಸ್.ಧೋನಿ: ದ ಅನ್‌ಟೋಲ್ಡ್ ಸ್ಟೋರಿ), ಅಜರುದ್ದೀನ್ (ಅಜರ್), ಮಿಥಾಲಿ ರಾಜ್‌ರ (ಶಹಬ್ಬಾಸ್ ಮಿಥೂ) ಜೀವನ ಚರಿತ್ರೆಗಳು ಈಗಾಗಲೇ ತೆರೆಮೇಲೆ ಬಂದಿವೆ. ಇನ್ನು ಸೌರವ್ ಗಂಗೂಲಿ (ದಾದಾ), ಯುವರಾಜ್ ಸಿಂಗ್, ಹರರ್ಭಜನ್ ಸಿಂಗ್ ಹಾಗೂ ಲಾಲಾ ಅಮರನಾಥ್ ಸೇರಿ ಹಲವು ಕ್ರಿಕೆಟಿಗರ ಬಯೋಪಿಕ್‌ಗಳ ಸಿದ್ಧತೆ ನಡೆಯುತ್ತಿದ್ದು, ಕೆಲವು ಸಿನಿಮಾಗಳ ಶೂಟಿಂಗ್ ಆರಂಭವಾಗಿದೆ. ಹೀಗಿರುವಾಗಲೇ ಮತ್ತೊಬ್ಬ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಬದುಕನ್ನು ವೆಬ್ ಸರಣಿ ಮೂಲಕ ತೆರೆ ಮೇಲೆ ತರಲಾಗುತ್ತಿದೆ. ಸರಣಿಗೆ ‘ಕಾಂಬ್ಳಿ’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ‘ಹರ್ ಹರ್ ಮಹಾದೇವ್’, ‘ಅನಿ... ಡಾ.ಕಾಶಿನಾಥ್ ಘಣೇಕರ್’ ಎಂಬ ಮರಾಠಿ ಚಿತ್ರಗಳನ್ನು ನಿರ್ದೇಶಿಸಿರುವ, ಹಲವು ಬಾಲಿವುಡ್ ಸಿನಿಮಾಗಳಿಗೆ ಬರಹಗಾರರಾಗಿ ಗುರುತಿಸಿಕೊಂಡಿರುವ ಅಭಿಜಿತ್ ಶಿರಿಷ್ ದೇಶಪಾಂಡೆ ಈ ಸರಣಿಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಸದ್ಯ ಅಭಿಜಿತ್ ಇನ್ನೊಂದು ಸಿನಿಮಾ ಲೋಕದ ದಿಗ್ಗಜ ‘ವಿ.ಶಾಂತಾರಾಮ್’ ಬಯೋಪಿಕ್ ನಿರ್ದೇಶಿಸುವವರಿದ್ದರು. ಆದರೆ, ಆ ಚಿತ್ರದ ಕಾರ್ಯಗಳು ವಿಳಂಬವಾಗಿದ್ದು, ಮುಂದಿನ ವರ್ಷದ ಮಾರ್ಚ್‌ಗೆ ಸೆಟ್ಟೇರಲಿದೆ. ಹೀಗಾಗಿ, ಅವರು ಅದಕ್ಕೂ ಮುನ್ನ ವಿನೋದ್ ಕಾಂಬ್ಳಿ ಜೀವನಾಧಾರಿತ ವೆಬ್‌ಸರಣಿಯನ್ನು ಕೈಗೆತ್ತಿಕೊಂಡಿದ್ದಾರೆ. ‘2019ರಿಂದಲೇ ನಾನು ವಿನೋದ್ ಕಾಂಬ್ಳಿ ಸರಣಿಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದೆ. ಇದೀಗ ಅದು ತೆರೆ ಮೇಲೆ ಬರಲು ಕಾಲ ಕೂಡಿ ಬಂದಿದೆ. ವಿನೋದ್ ಕಾಂಬ್ಳಿ ಬಯೋಪಿಕ್ ಕೇವಲ ಕ್ರಿಕೆಟ್‌ಗಷ್ಟೇ ಸೀಮಿತವಾಗಿರದೆ, ಅವರ ಇಡೀ ಜೀವನದ ಕಥೆಯಾಗಿರಲಿದೆ. ಕಾಂಬ್ಳಿ ಬದುಕು ಅನ್ವೇಷಿಸಲು ನಿಂತಾಗ, ಅವರ ಬಗ್ಗೆ ನನಗೆ ಹಲವು ಆಸಕ್ತಿಕರ ವಿಚಾರಗಳು ತಿಳಿದವು. ಅದೆಲ್ಲವನ್ನು ಒಂದೇ ಸಿನಿಮಾದಲ್ಲಿ ತೋರಿಸಲು ಅಸಾಧ್ಯ ಅನಿಸಿತು. ಹಾಗಾಗಿ, ಅದನ್ನು ಸರಣಿ ಮೂಲಕ ತೋರಿಸಬೇಕು ಎಂದು ನಿರ್ಧರಿಸಿದೆ. ತಾರಾಗಣ ಹಾಗೂ ತಾಂತ್ರಿಕ ಬಳಗದ ಆಯ್ಕೆ ನಡೆಯುತ್ತಿದೆ’ ಎಂದು ಅಭಿಜಿತ್ ತಿಳಿಸಿದ್ದಾರೆ. ನವೆಂಬರ್‌ನಿಂದ ಸರಣಿಯ ಶೂಟಿಂಗ್ ಆರಂಭವಾಗಲಿದೆ. -ಏಜೆನ್ಸೀಸ್