- ಉತ್ತರ ಕನ್ನಡ ಜಿಲ್ಲೆಯ ಇತಿಹಾಸ ತಿಳಿಸುವ ಕಾನ್ಧಾರಿ ಸಿನಿಮಾ
- ಇದೇ 18ಕ್ಕೆ ತೆರೆಗೆ, ವಿನಾಯಕ ಭಟ್ ಬೊಮ್ಮನಹಳ್ಳಿ ನಿರ್ದೇಶನ
- 1802ರಿಂದ 2026 ವರೆಗಿನ ಮೂರು ಕಾಲಘಟ್ಟಗಳಲ್ಲಿ ಮೂಡಿಬರುತ್ತಿರುವ ಚಿತ್ರ
ಬೆಂಗಳೂರು: ಕನ್ನಡದಲ್ಲಿ ಪ್ರಾದೇಶಿಕ ಭಾಗದ ಜನಜೀವನ, ಸಂಸ್ಕೃತಿ ಮೇಲೆ ಬೆಳಕು ಚೆಲ್ಲುವ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ದಕ್ಷಿಣ ಕನ್ನಡ ಭಾಗದ ಹಿನ್ನೆಲೆಯ ‘ಕಾಂತಾರ’, ‘ಕರಾವಳಿ’, ಮಲೆನಾಡಿನ ‘ವಲವಾರ’ ಹಾಗೂ ಉತ್ತರ ಕರ್ನಾಟಕ ಭಾಗದ ‘ಪಪ್ಪಿ’, ‘ಹೆಬ್ಬುಲಿ ಕಟ್’ ಸಿನಿಮಾಗಳು ಮೂಡಿಬಂದಿದ್ದವು. ಹಾಗೆಯೇ, ಇದೀಗ ಉತ್ತರ ಕನ್ನಡ ಜಿಲ್ಲೆಯ ನೆಲದ ಕಥೆಯೊಂದು ಚಿತ್ರವಾಗಿದೆ. ಹೆಸರು ‘ಕಾನ್ಧ್ದಾರಿ’. 1802ರಿಂದ 2026 ವರೆಗಿನ ಮೂರು ಕಾಲಘಟ್ಟಗಳಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ವಿನಾಯಕ ಹೆಗಡೆ ಬೊಮ್ಮನಹಳ್ಳಿ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇದೇ 18ರಂದು ಸಿನಿಮಾ ತೆರೆಗೆ ಬರುತ್ತಿದ್ದು, ಹಿರಿಯ ನಟ ದೊಡ್ಡಣ್ಣ ಚಿತ್ರದ ಟ್ರೇಲರ್ ರಿಲೀಸ್ ಮಾಡಿ, ಉತ್ತರ ಕನ್ನಡ ಜಿಲ್ಲೆಯ ನಂಟಿನ ಬಗ್ಗೆ ಮೆಲುಕು ಹಾಕಿದರು. ‘‘ಒಂದು ಮುತ್ತಿನ ಕಥೆ’ ಶೂಟಿಂಗ್ ಸಮಯದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಹೋಗಿದ್ದೆ. ಅಲ್ಲಿನ ಜನರ ಜೀವನ, ಗುಣ, ಸಂಸ್ಕೃತಿ ಕಂಡು ಖುಷಿಯಾಗಿತ್ತು. ಬಳಿಕ ಮತ್ತೆ ಅಲ್ಲಿಗೆ ಹೋಗುವ ಅವಕಾಶ ಸಿಗಲಿಲ್ಲ. ‘ಕಾನ್ಧಾರಿ’ ಟ್ರೇಲರ್ ನೋಡಿದಾಗ ಮತ್ತೆ ಹೋಗಬೇಕು ಅಂತನಿಸುತ್ತಿದೆ. ಪ್ರಕೃತಿ ಅಂದರೆ ತಾಯಿ. ತಾಯಿಯನ್ನು ಉಳಿಸುವುದು ಎಲ್ಲರ ಹೊಣೆ. ಇಲ್ಲದಿದ್ದರೆ ಮುಂದಿನ ಜನಾಂಗದವರು ಶಾಪ ಹಾಕುತ್ತಾರೆ. ಪರಿಸರವನ್ನು ನಾಶ ಮಾಡಬೇಡಿ’ ಎಂದು ಕರೆ ನೀಡಿದರು.
ಥಿಯೇಟರ್‌ನತ್ತ ಡಾಕ್ಯುಮೆಂಟರಿ
‘1600 ವರ್ಷಗಳ ಹಿಂದೆಯೇ ಉತ್ತರ ಕನ್ನಡ ಜಿಲ್ಲೆಯ ವನವಾಸಿ ಕರ್ನಾಟಕದ ರಾಜಧಾನಿಯಾಗಿತ್ತು. ಬೆಳವಾಡಿ ಮಲ್ಲಮ್ಮ ಮಹಿಳಾ ಸೈನ್ಯ ಕಟ್ಟಿದ್ದು ಇಲ್ಲೆ. ಇಂತಹ ಹಲವು ಐತಿಹಾಸಿಕ ಕುರುಹುಗಳನ್ನು ಜಿಲ್ಲೆ ಹೊಂದಿದೆ. ಇಂತಹ ವಿಚಾರಗಳು ಪ್ರತಿಯೊಬ್ಬರಿಗೂ ತಿಳಿಯಬೇಕು ಎನ್ನುವ ದೃಷ್ಟಿಯಿಂದ 98 ನಿಮಿಷದಲ್ಲಿ ಈ ಸಿನಿಮಾ ಮಾಡಿದ್ದೇವೆ. ಜಿಲ್ಲೆಯ ಮಟ್ಟಿಗೆ ಇದೊಂದು ಡಿಜಿಟಲ್ ಡಾಕ್ಯುಮೆಂಟೇಷನ್ ಆಗಲಿದೆ.