ಉಡಾಳ ಚಿತ್ರದ ಪೋಸ್ಟರ್ 
ಸ್ಯಾಂಡಲ್‌ವುಡ್

UDAALA MOVIE REVIEW: ‘ಉಡಾಳ’ ಪಕ್ಯಾನ ಆಟ-ರಂಪಾಟ

ಪ್ರಮುಖ ಮುಖ್ಯಾಂಶಗಳು

  • ಅಮೋಲ್ ಜವಾರಿ ಜನರ ಬದುಕಿನ ಸೊಗಸಾದ ಕಥೆ ನಿರೂಪಿಸಿದ್ದಾರೆ
  • ಸಿನಿಮಾ ನೋಡುತ್ತಿದ್ದಂತೆಯೇ ನಾವು ಬಿಜಾಪುರದಲ್ಲೇ ಇದ್ದೇವೆ ಎಂಬಂತೆ ಭಾಸವಾಗುತ್ತದೆ
  • ಕಥೆಯಲ್ಲಿ ಯೋಗರಾಜ್ ಭಟ್‌ರ ‘ಡ್ರಾಮಾ’ ಚಿತ್ರದ ಛಾಯೆ ಇದೆ
ಚಿತ್ರ: ಉಡಾಳ
ನಿರ್ದೇಶನ: ಅಮೋಲ್ ಪಾಟೀಲ್
ತಾರಾಗಣ: ಪೃಥ್ವಿ ಶಾಮನೂರ್, ಹೃತಿಕಾ ಶ್ರೀನಿವಾಸ್, ಬಲರಾಜವಾಡಿ, ವೈಜನಾಥ್ ಬಿರಾದಾರ್, ಗೋವಿಂದೇಗೌಡ ಮತ್ತಿತರರು.
ಶಿವ ಸ್ಥಾವರಮಠ
ಪಕ್ಯಾ ಅಲಿಯಾಸ್ ಪ್ರಕಾಶ್ ಬಿಜಾಪುರ (ಪೃಥ್ವಿ). ಗೋಲ್‌ಗುಂಬಜ್‌ನಲ್ಲಿ ಟೂರ್ ಗೈಡ್ ಮತ್ತು ಆಟೋ ಡ್ರೈವರ್ ಆಗಿ ಕೆಲಸ ಮಾಡುವಾತ. ಪಿಸ್ತೂಲ್ ಶಬ್ಧ ಕೇಳಿದರೆ ಸಾಕು ಗಢಗಢ ನಡುಗುವ ಅಂಜುಬುರಕ. ಅಂತಹ ಪಕ್ಯಾ ರಾಜಸ್ಥಾನದ ಮರಳುಗಾಡಿನಲ್ಲಿ ಸುಂದರಿಯೊಬ್ಬಳಿಗೆ ಮುತ್ತಿಡುವ ಕನಸು ಕಾಣುತ್ತಾನೆ. ಕನಸಿನಲ್ಲಿ ಕಂಡ ಹುಡುಗಿ ಎರಡನೇ ದಿನವೇ ಆತನಿಗೆ ಎದುರಾಗುತ್ತಾಳೆ. ಆಕೆಯೇ ಪಿಂಕಿ ಪಾಟೀಲ್ (ಹೃತಿಕಾ). ಒಣ ಮೆಣಸಿನಕಾಯಿಯಷ್ಟೇ ಖಾರದ ಹುಡುಗಿ. ಅಂತಹ ಪಿಂಕಿ ಹಿಂದೆ ಪಕ್ಯಾ ಬೀಳುತ್ತಾನೆ. ಓದದಿದ್ದರೂ ಫೇಕ್ ಸರ್ಟೀಫಿಕೆಟ್ ಮಾಡಿಸಿ, ಆಕೆಯ ಕಾಲೇಜು ಸೇರುತ್ತಾನೆ. ಅದೊಂದು ದಿನ ಕಾಲೇಜಿನಲ್ಲಿ ರ‌್ಯಾಗಿಂಗ್ ಮಾಡುವ ಸೀನಿಯರ್ಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಪಿಂಕಿ, ಪಕ್ಯಾನ ಸಹಾಯ ಕೇಳಿ, ಪಿಸ್ತೂಲ್ ತಂದು ಕೊಡಲು ವಿನಂತಿಸುತ್ತಾಳೆ. ಅಂತೆಯೇ ಪ್ರಕಾಶ್, ಬಿಜಾಪುರದ ಡಾನ್ ಮಾರ್ತಾಂಡ ಸಾಠೇ (ಬಲರಾಜವಾಡಿ) ಗನ್ ಫ್ಯಾಕ್ಟರಿಯಿಂದ ಪಿಸ್ತೂಲ್ ಕದ್ದು ಪಿಂಕಿಗೆ ತಂದುಕೊಡುತ್ತಾನೆ. ಬಳಿಕ ಇಬ್ಬರೂ ಮುಸುಕುಧಾರಿಯಾಗಿ ಸೀನಿಯರ್‌ಗಳನ್ನು ಎದುರಿಸುತ್ತಾರೆ. ಅದನ್ನೇ ಪಪ್ಯಾ (ವಾದಿರಾಜ್) ವಿಡಿಯೋ ಮಾಡಿ, ಪಕ್ಯಾ ಮತ್ತು ಪಿಂಕಿಯನ್ನು ಬೆದರಿಸುತ್ತಾನೆ. ಈ ಸಮಸ್ಯೆ ಪರಿಹರಿಸಿಕೊಳ್ಳಲು ಹೋಗಿ ಇಬ್ಬರೂ ಮತ್ತೊಂದು ಪಜೀತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಅದೇನು ಅಂತ ತಿಳಿಯಬೇಕಾದರೆ, ‘ಉಡಾಳ’ ಸಿನಿಮಾ ನೋಡಬೇಕಷ್ಟೇ.
ನಿರ್ದೇಶಕ ಅಮೋಲ್ ಪಾಟೀಲ್ ಬಿಜಾಪುರ ಜವಾರಿ ಜನರ ಬದುಕಿನ ಸೊಗಸಾದ ಕಥೆಯನ್ನು ‘ಉಡಾಳ’ ಮೂಲಕ ನಿರೂಪಿಸಿದ್ದಾರೆ. ಸಿನಿಮಾ ನೋಡುತ್ತಿದ್ದಂತೆಯೇ ನಾವು ಬಿಜಾಪುರದಲ್ಲೇ ಇದ್ದೇವೆ ಎಂಬಂತೆ ಭಾಸವಾಗುತ್ತದೆ. ಅಷ್ಟು ನೈಜತೆ ಚಿತ್ರದಲ್ಲಿ ಕಾಣಬಹುದು. ವಿಜಯಪುರ ಭಾಷೆಯನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಕೆಲ ಕಡೆ ಬೈಗುಳಗಳು ಇದ್ದರೂ ಕಥೆಗೆ ಪೂರಕವಾಗಿವೆ. ಕಥೆಯಲ್ಲಿ ಯೋಗರಾಜ್ ಭಟ್‌ರ ‘ಡ್ರಾಮಾ’ ಚಿತ್ರದ ಛಾಯೆ ಕಾಣುತ್ತದೆ. ಮೌನಕ್ಕಿಂತ ಚಟಪಟ ಸಿಡಿಯುವ ಜವಾರಿ ಸಂಭಾಷಣೆ ಹಾಗೂ ಪಿಸ್ತೂಲ್ ಸದ್ದೇ ಹೆಚ್ಚು. ಪೃಥ್ವಿ ನಟನೆ, ಡಾನ್ಸ್ ಮತ್ತು ಡೈಲಾಗ್ ಮೂಲಕ ಮಿಂಚಿ ಭರವಸೆ ಮೂಡಿಸುತ್ತಾರೆ. ಹೃತಿಕಾ ಕೂಡ ಗಮನ ಸೆಳೆಯುತ್ತಾರೆ. ಬಲರಾಜವಾಡಿ, ವೈಜನಾಥ್ ಬಿರಾದಾರ್ ಸೇರಿ ಹಲವು ಪಾತ್ರಗಳು ಸೊಗಸಾಗಿ ಮೂಡಿಬಂದಿವೆ. ಹರೀಶ್ ಕಾಮಿಡಿ ಜತೆ ಜತೆಗೆ ಸಾಗುವ ವಿಲನ್ ಪಾತ್ರದಿಂದ ಗಮನಸೆಳೆಯುತ್ತಾರೆ. ಚೇತನ್, ಡೇವ್ ಸುರೇಶ್ ಸಂಗೀತ ಜವಾರಿ ಮಂದಿಗೆ ಹೇಳಿಮಾಡಿಸಿದಂತಿದೆ.
ರೇಟಿಂಗ್: 3