ತ್ರಿಕಾರಂ ಚಿತ್ರದ ದೃಶ್ಯ 
ಸ್ಯಾಂಡಲ್‌ವುಡ್

trikaram review: ಜನ್ಮ-ಪುನರ್ಜನ್ಮದ ಪ್ರತೀಕಾರ ‘ತ್ರಿಕಾರಂ’

ಜನ್ಮ ಮತ್ತು ಪುನರ್ಜನ್ಮದಲ್ಲಿ ನಡೆಯುವ ಕಥೆ ಇದಾಗಿದ್ದು, ಮಾಸ್ ಹಾಗೂ ಆ್ಯಕ್ಷನ್ ರೂಪದಲ್ಲಿ ತೆರೆ ಮೇಲೆ ತರಲಾಗಿದೆ. ಪ್ರಸ್ತುತ ಜನ್ಮದಿಂದ ಕಥೆ ಆರಂಭವಾಗುತ್ತದೆ.

ವಿಜಯವಾಣಿ ಸುದ್ದಿ ಜಾಲ

ಚಿತ್ರ: ತ್ರಿಕಾರಂ

ನಿರ್ದೇಶನ: ದಿಲೀಪ್ ಕುಮಾರ್

ತಾರಾಗಣ: ಹರ್ಷವರ್ಧನ್, ನಿಶ್ಚಿತಾ ಶೆಟ್ಟಿ, ಬಲ ರಾಜವಾಡಿ, ಮಂಜು ಪಾವಗಡ, ಗಣೇಶ್ ಮೂರ್ತಿ ಮತ್ತಿತರರು.

ಬೆಂಗಳೂರು: ಅದೊಂದು ಸುಂದರ ಊರು. ಅಲ್ಲಿನ ಜನರದು ನೆಮ್ಮದಿ ಬದುಕು. ಆ ಊರಿನಲ್ಲಿ ದೇವರ ಆಶೀರ್ವಾದದಿಂದ ಹೆಣ್ಣು ಮಗು ಜನಿಸುತ್ತದೆ. ಆ ಮಗುವನ್ನು ಬಲಿಕೊಟ್ಟು ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮಾಂತ್ರಿಕ (ಬಲ ರಾಜವಾಡಿ) ಮುಂದಾಗುತ್ತಾನೆ. ಅದನ್ನು ತಪ್ಪಿಸಲೆಂದೇ ಶ್ರೀಕೃಷ್ಣನ ಆಶೀರ್ವಾದದಿಂದ ಆ ಊರಿಗೆ ಬರುವವನೇ ವೀರ (ಹರ್ಷವರ್ಧನ್ ಕೇಸರಿ). ಮಾಂತ್ರಿಕ ಬಲಿ ಕೊಡುವ ಎಲ್ಲ ಯೋಜನೆಯನ್ನು ಹೋರಾಡಿ ತಪ್ಪಿಸುವ ವೀರ, ಕೊನೆಗೆ ಪ್ರೇಯಸಿ ಪೂರ್ಣಿ (ನಿಶ್ಚಿತಾ) ಜತೆ ಆ ಮಾಂತ್ರಿಕನ ಕತ್ತಿಗೆ ಬಲಿಯಾಗುತ್ತಾನೆ. ಇದು ಪುನರ್ಜನ್ಮದಲ್ಲಿ ನಡೆಯುವ ಘಟನೆ. ಮುಂದಿನ ಜನ್ಮದಲ್ಲಿ ವೀರನ ಅವತಾರವಾಗಿ ಬರುವ ಮಿಥುನ್, ಆ ಮಾಂತ್ರಿಕ ಹಾಗೂ ಬಲದೇವನಿಂದ ಹೇಗೆ ಪ್ರತೀಕಾರ ಪಡೆಯುತ್ತಾನೆ ಎಂಬುದೇ ದಿಲೀಪ್ ಕುಮಾರ್ ನಿರ್ದೇಶನದ ‘ತ್ರಿಕಾರಂ’ ಚಿತ್ರದ ಪ್ರಮುಖ ಘಟ್ಟ.

ಜನ್ಮ ಮತ್ತು ಪುನರ್ಜನ್ಮದಲ್ಲಿ ನಡೆಯುವ ಕಥೆ ಇದಾಗಿದ್ದು, ಮಾಸ್ ಹಾಗೂ ಆ್ಯಕ್ಷನ್ ರೂಪದಲ್ಲಿ ತೆರೆ ಮೇಲೆ ತರಲಾಗಿದೆ. ಪ್ರಸ್ತುತ ಜನ್ಮದಿಂದ ಕಥೆ ಆರಂಭವಾಗುತ್ತದೆ. ನಾಯಕನ ಪೌರುಷ, ಪ್ರೀತಿಗೆ ಮೊದಲರ್ಧ ಮುಗಿಯುತ್ತದೆ. ದ್ವಿತೀಯಾರ್ಧದಲ್ಲಿಯೇ ಜನ್ಮ-ಪುನರ್ಜನ್ಮದ ಕಥೆ ಆರಂಭವಾಗುತ್ತದೆ. ಇನ್ನೊಂದಿಷ್ಟು ಟ್ವಿಸ್ಟ್‌ಗಳು ಕಥೆಗೆ ಅಗತ್ಯವಿತ್ತು. ಕೆಲವೆಡೆ ಲಾಜಿಕ್ ಮಿಸ್ ಆಗಿದ್ದು, ಮಾಂತ್ರಿಕನು ಬಲದೇವನಿಗೆ ಕೊಡುವ ಮಗು ಮುಂದೆ ಏನಾಯಿತು ಎಂಬುದಕ್ಕೆ ಉತ್ತರವಿಲ್ಲ. ‘ಸೀದಾ ನಿಂತ್ರು...’ ಮತ್ತು ‘ಆ ದೇವರ ಅಂಶದ ಕುಡಿ ಇವನು’ ಸಾಂಗ್‌ಗಳು ಕೇಳಲು ಇಂಪಾಗಿವೆ. ಇನ್ನು ನಟ ಹರ್ಷವರ್ಧನ್ ಕೇಸರಿ ‘ವೀರ’ನಾಗಿ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ನಿಶ್ಚಿತಾ ಶೆಟ್ಟಿ ಅಭಿನಯ ಚೆನ್ನಾಗಿ ಮೂಡಿಬಂದಿದೆ. ಮಾಂತ್ರಿಕನಾಗಿ ಬಲ ರಾಜವಾಡಿ ಅಬ್ಬರಿಸಿದ್ದಾರೆ.