ಬೆಂಗಳೂರು: ರಾಕಿಂಗ್ಸ್ಟಾರ್ ಯುಶ್ ಅಭಿನಯದ ಹಾಗೂ ಗೀತು ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನಪ್ಸ್ ಸಿನಿಮಾ ತೆರೆಕಂಡು ಅಂದುಕೊಂಡ ಯಶಸ್ಸು ದೊರೆಯದ ಹಿನ್ನಲೆ ಈಗ ಓಟಿಟಿ (Toxic OTT Deal) ಮೌಲ್ಯ ಕೂಡ ಕುಸಿತವಾಗಿದೆ ಎಂದು ವರದಿಯಾಗಿದೆ.
ಸಿನಿಮಾ ತೆರೆಕಂಡು ಇಂದಿಗೆ 12 ದಿನ ಪೂರ್ಣಗೊಂಡಿದ್ದು ಇಲ್ಲಿವೆರೆಗೆ ಸುಮಾರು 337 ಕೋಟಿ ಗಳಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಮಾಧ್ಯಮ ವರದಿ ಪ್ರಕಾರ, ಸಿನಿಮಾ ಬಜೆಟ್ ಸುಮಾರು 600 ಕೋಟಿ ಎಂದು ಹೇಳಲಾಗುತ್ತಿರುವ ಕಾರಣ ಸಿನಿಮಾ ಫ್ಲಾಪ್ ಆಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸಿನಿಮಾದ ಓಟಿಟಿ ಮೌಲ್ಯ ಕೂಡ ಕಡಿಮೆ ಆಗಿದೆ ಎಂದು ತಿಳಿದು ಬಂದಿದೆ.
ಅಂದು 150 ಕೋಟಿ ಈಗ 30 ಕೋಟಿ!
ತಿಳಿದು ಬಂದ ಮಾಹಿತಿ ಪ್ರಕಾರ, ಟಾಕ್ಸಿಕ್ ಬಿಡುಗಡೆಯಾಗುವ ಮುನ್ನ ಓಟಿಟಿ ವೇದಿಕೆಯೊಂದು ಸುಮಾರು 150 ಕೋಟಿ ಕೊಟ್ಟು ಸಿನಿಮಾ ಖರೀದಿಗೆ ಮುಂದಾಗಿದ್ದರಂತೆ. ಆದರೆ ಇದಕ್ಕೆ ಸಿನಿಮಾ ತಂಡ ಒಪ್ಪದೆ 200 ಕೋಟಿಗಿಂತ ಹೆಚ್ಚಿನ ಹಣ ನೀಡಿದರೆ ಸಿನಿಮಾ ನೀಡುವುದಾಗಿ ಪಟ್ಟು ಹಿಡಿದ ಕಾರಣ ಈ ವ್ಯವಹಾರ ಕೂಡಿಬಂದಿರಲಿಲ್ಲ.
ನಂತರ ಸಿನಿಮಾ ತೆರೆಕಂಡು ಅಂದುಕೊಂಡ ಮಟ್ಟಗಿನ ಯಶಸ್ಸು ದೊರೆಯದ ಹಿನ್ನಲೆ, ಈಗ ಅದೇ ಓಟಿಟಿ ವೇದಿಕೆ ಕೇವಲ 30 ಕೋಟಿಗೆ ಸಿನಿಮಾ ಖರೀದಿ ಮಾಡುವುದಾಗಿ ತಿಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ತಮ್ಮ ಸಿನಿಮಾ ಯಶಸ್ವಿಯಾಗುತ್ತೇ ಎಂಬ ಅತಿಯಾದ ಆತ್ಮ ವಿಶ್ವಾಸದಿಂದ ಈಗ ಸುಮಾರು 100 ಕೋಟಿ ಲಾಸ್ ಆಗಿದೆ ಎಂದು ಹೇಳಬಹುದಾಗಿದೆ.
ಟಾಕ್ಸಿಕ್ ಕಲೆಕ್ಷನ್ ಎಷ್ಟು?
ಆಗಸ್ಟ್ 26 ರಂದು ಬಿಡುಗಡೆಯಾದ ಸಿನಿಮಾ ಮೊದಲ ದಿನ ವಿದೇಶ ಸೇರಿದಂತೆ ಒಟ್ಟು 150 ಕೋಟಿಯ ಭರ್ಜರಿ ಓಪನಿಂಗ್ ತೆಗೆದುಕೊಂಡಿತು. ಆದರೆ ವಾರಾಂತ್ಯದಲ್ಲಿ ಅಂದುಕೊಂಡ ಮಟ್ಟಿಗೆ ಟಿಕೆಟ್ ಸೇಲ್ ಆಗಲಿಲ್ಲ. ಇಂದು (ಸೆ.7) ಟಾಕ್ಸಿಕ್ ಕೇವಲ 2 ರಿಂದ 3 ಕೋಟಿ ಮಾತ್ರ ಕಲೆಹಾಕಿದೆ ಎಂದು ಹೇಳಲಾಗುತ್ತಿದ್ದು, ಭಾರತದಲ್ಲಿ ಇಲ್ಲಿವರೆಗೆ 245 ಕೋಟಿ ವಿದೇಶ ಸೇರಿಸಿದರೆ 337 ಕೋಟಿ ಗಳಿಸಿದೆ ಎಂದು ವರದಿಯಾಗಿದೆ, (ಏಜನ್ಸೀಸ್).