'ಟಾಕ್ಸಿಕ್' ಸಿನಿಮಾಗೆ ನೆಗೆಟಿವ್ ರಿವ್ಯೂ ಬರೆದವರಿಗೆ ಲೀಗಲ್ ನೋಟಿಸ್
- ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾಗೆ ನೆಗೆಟಿವ್ ರಿವ್ಯೂ
- ನೃಣಾತ್ಮಕ ವಿಮರ್ಶೆಗಳಿಗೆ ತಡೆ ಹಾಕಲು ಚಿತ್ರತಂಡದ
- 'ಟಾಕ್ಸಿಕ್' ಸಿನಿಮಾಗೆ ನೆಗೆಟಿವ್ ರಿವ್ಯೂ ಬರೆದವರಿಗೆ ಲೀಗಲ್ ನೋಟಿಸ್
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹು ನೀರಿಕ್ಷಿತ ಸಿನಿಮಾ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನಪ್ಸ್ ಸಿನಿಮಾ ಆಗಸ್ಟ್ 26 ರಂದು ತೆರೆಕಂಡಿದೆ.
ಆದರೆ, ಈ ಸಿನಿಮಾ ಬಿಡುಗಡೆಯಾದ ದಿನದಿಂದ ಸೋಷಿಯಲ್ ಮೀಡಿಯಾಗಳಲ್ಲಿ, ಟ್ರೋಲ್ ಪೇಜ್ಗಳಲ್ಲಿ ಹಾಗೂ ಯೂಟ್ಯೂಬ್ಗಳಲ್ಲಿ ಋಣಾತ್ಮಕ ವಿಮರ್ಶೆ ಕೇಳಿ ಬರುತ್ತಿರುವ ಹಿನ್ನಲೆ ಇದಕ್ಕೆ ಮೂಗುದಾರ (Toxic Legal Notice) ಹಾಕಲು ಟಾಕ್ಸಿಕ್ ತಂಡ ಮುಂದಾಗಿದೆ.
ನೆಗೆಟಿವ್ ರಿವ್ಯೂ ಹಾಕಿದವರಿಗೆ ನೋಟಿಸ್!
ಟಾಕ್ಸಿಕ್ ಸಿನಿಮಾ ಒಂದು 'ಎ' ರೇಟೆಡ್, ವಯಸ್ಕರು ಮಾತ್ರ ವೀಕ್ಷಿಸಬಹುದಾದ ಸಿನಿಮಾವಾಗಿದ್ದು, ಇದರಲ್ಲಿ ಅ್ಯಕ್ಷನ್ ಜೊತೆಗೆ ಮಡಿವಂತರಿಗೆ ಮುಜುಗರ ತರಿಸುವ ದೃಶ್ಯಗಳು ಇರುವ ಕಾರಣ ಈ ಸಿನಿಮಾವನ್ನು ಟ್ರೋಲ್ ಮಾಡಲಾಗುತ್ತದೆ.
ಆದರೆ, ಸಿನಿಮಾದಲ್ಲಿರುವ ದೃಶ್ಯಗಳು ಬೇರೆ ಸಿನಿಮಾದಲ್ಲಿ ಕೂಡ ಇದ್ದವು, ಆದರೆ ಟಾಕ್ಸಿಕ್ ಸಿನಿಮಾವನ್ನು ಬೇಕಂತಲೇ ಗುರಿಯಾಗಿಸಿಕೊಂಡು ನೆಗೆಟಿವ್ ರಿವ್ಯೂ ಕೊಡುವ ಮೂಲಕ ಸಿನಿಮಾ ಯಶಸ್ಸನ್ನು ಕಾಣದಂತೆ ಮಾಡಲಾಗುತ್ತಿದೆ ಎಂದು ಸಿನಿಮಾ ತಂಡ, ಋಣಾತ್ಮಕ ವಿಮರ್ಶೆ ಮಾಡಿದವರಿಗೆ ಲೀಗಲ್ ನೋಟಿಸ್ ನೀಡಲು ಪ್ರಾರಂಭಿಸಿದೆ.
ಯೂಟ್ಯೂಬರ್ಗಳಿಗೆ ಲೀಗಲ್ ನೋಟಿಸ್!
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸೂರಜ್ ಕುಮಾರ್ ಎಂಬ ಯೂಟ್ಯೂಬರ್, ತಮ್ಮ ಟಾಕ್ಸಿಕ್ ಸಿನಿಮಾ ವಿಮರ್ಶೆಗೆ ಸಿನಿ ತಂಡದಿಂದ ಲೀಗಲ್ ನೋಟಿಸ್ ಬಂದಿದೆ ಎಂದು ಸ್ಕ್ರೀನ್ಶಾಟ್ವೊಂದನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು ಮೂಲದ ಐಪ್ಲೆಕ್ಸ್ ಸಾಫ್ಟ್ವೇರ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆ, ಸಿನಿಮಾ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಹಾಗೂ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಪರವಾಗಿ ಈ ಲೀಗಲ್ ನೋಟಿಸ್ ನೀಡಿದೆ.
ನಮ್ಮ ಕಕ್ಷಿದಾರರ ಹಕ್ಕುಸ್ವಾಮ್ಯ ಹೊಂದಿರುವ ಟಾಕ್ಸಿಕ್ ಸಿನಿಮಾ ಬಗ್ಗೆ ನೀವು ಡಿಜಿಟಲ್ ಕಂಟೆಂಟ್ಅನ್ನು ಹಂಚಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಈ ಕುರಿತು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಇ-ಮೇಲ್ನಲ್ಲಿ ತಿಳಿಸಲಾಗಿದೆ.
ಜುಲೈ 13 ರಿಂದ ಸೆಪ್ಟೆಂಬರ್ 26 ರ ವರೆಗೆ ಕಾಪಿರೈಟ್ ಉಲ್ಲಂಘನೆ, ನಿಂದಾತ್ಮಕ ವಿಮರ್ಶೆ ಹಾಗೂ ಸುಳ್ಳು ಸುದ್ದಿ ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿನಿಮಾ ತಂಡ ನ್ಯಾಯಾಲಯದ ಅನುಮತಿ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ. ಈ ಲೀಗಲ್ ನೋಟಿಸ್ ಪಡೆದಿರುವ ಸೂರಜ್ ಕುಮಾರ್, ನನಗೆ ಲೀಗಲ್ ನೋಟಿಸ್ ನೀಡಿದ್ದಕ್ಕಾಗಿ ಟಾಕ್ಸಿಕ್ ತಂಡಕ್ಕೆ ಧನ್ಯವಾದ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.
ಮೊದಲ ದಿನವೇ 100 ಕೋಟಿ ಕ್ಲಬ್ ಸೇರಿದ ಟಾಕ್ಸಿಕ್!
ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ದೊರೆಯುತ್ತಿದ್ದರೂ ಸಿನಿಮಾ ಮಾತ್ರ ಮೊದಲ ದಿನವೇ ಪ್ರಪಂಚದಾದ್ಯಂತ ಸುಮಾರು 140 ಕೋಟಿ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಸುಮಾರು 120 ಕೋಟಿ ಗಳಿಸಿದರೆ, ವಿದೇಶಗಳಿಂದ ಸುಮಾರು 20 ಕೋಟಿಯನ್ನು ಬಾಚಿಕೊಂಡಿದೆ. ಇನ್ನು ಶನಿವಾರ ಹಾಗೂ ಭಾನುವಾರದ ಗಳಿಕೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್).