ನಾನು ಏನೋ ಬರಿತೀನಿ ಮತ್ತೇನೋ ಶೂಟ್​ ಮಾಡ್ತೀನಿ... ಟಾಕ್ಸಿಕ್​ ಡೈರೆಕ್ಟರ್​ ಗೀತು ಮೋಹನ್‌ದಾಸ್ ವಿರುದ್ಧ ಆಕ್ರೋಶ! Toxic  
ಸ್ಯಾಂಡಲ್‌ವುಡ್

ನಾನು ಏನೋ ಬರಿತೀನಿ ಮತ್ತೇನೋ ಶೂಟ್​ ಮಾಡ್ತೀನಿ... ಟಾಕ್ಸಿಕ್​ ಡೈರೆಕ್ಟರ್​ ಗೀತು ಮೋಹನ್‌ದಾಸ್ ವಿರುದ್ಧ ಆಕ್ರೋಶ! Toxic

ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ( Toxic ) ಸಿನಿಮಾದ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಈ ಹಿಂದೆ ನೀಡಿದ್ದ ಹೇಳಿಕೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸಿನಿಮಾ ಬಿಡುಗಡೆ ಬೆನ್ನಲ್ಲೇ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ತಾವು ಸಿನಿಮಾ ಮಾಡುವ ವಿಧಾನದ ಕುರಿತು ಮಾತನಾಡಿರುವ ಅವರ ಹಳೆಯ ವಿಡಿಯೋವೊಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ವೈರಲ್ ಆಗಿರುವ ಆ ವಿಡಿಯೋದಲ್ಲಿ ಗೀತಾ ಮೋಹನ್‌ದಾಸ್ ಅವರು, "ನಾನು ಏನಾದರೊಂದು ಬರೆಯುತ್ತೇನೆ, ಏನಾದರೊಂದು ಶೂಟ್ ಮಾಡುತ್ತೇನೆ, ಮತ್ತೇನೋ ಎಡಿಟ್ ಮಾಡುತ್ತೇನೆ, ಕೊನೆಗೆ ಸಿನಿಮಾ ಹೇಗೋ ಹಾಗೆ ರೂಪುಗೊಳ್ಳುತ್ತದೆ ಮತ್ತು ಅದರಿಂದ ನನಗೆ ಖುಷಿಯಾಗುತ್ತದೆ ಎಂದು ಹೇಳಿದ್ದಾರೆ. ತಾವು ಎಂದಿಗೂ ಸ್ಕ್ರಿಪ್ಟ್‌ಗೆ ಅಂಟಿಕೊಳ್ಳುವುದಿಲ್ಲ ಎಂಬುದನ್ನು ಗೀತು ಅವರು ಈ ಮೂಲಕ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

ಮುಂದುವರೆದು ಮಾತನಾಡುತ್ತಾ, ತಾವು ನಿರ್ಮಾಪಕರನ್ನು ಭೇಟಿಯಾದಾಗಲೂ ಕೂಡ ಈ ಮಾತನ್ನು ಮೊದಲೇ ಸ್ಪಷ್ಟಪಡಿಸುವುದಾಗಿ ಅವರು ತಿಳಿಸಿದ್ದಾರೆ. "ನೀವು ಸ್ಕ್ರಿಪ್ಟ್‌ನಲ್ಲಿ ಏನು ಓದುತ್ತೀರೋ, ಅಚ್ಚುಕಟ್ಟಾಗಿ ಅದೇ ಸಿನಿಮಾ ನಿಮಗೆ ಸಿಗುವುದಿಲ್ಲ ಎಂದು ನಾನು ನಿರ್ಮಾಪಕರಿಗೆ ಮೊದಲೇ ಹೇಳಿರುತ್ತೇನೆ ಎಂದು ಗೀತು ಅವರು ವಿಡಿಯೋದಲ್ಲಿ ವಿವರಿಸಿದ್ದಾರೆ.

ನಿರ್ದೇಶಕಿಯ ಈ ವಿಚಿತ್ರ ಹಾಗೂ ಬೇಜವಾಬ್ದಾರಿಯ ಹೇಳಿಕೆಯು ಈಗ ಸಿನಿಪ್ರಿಯರು ಮತ್ತು ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ದೊಡ್ಡ ಬಜೆಟ್‌ನ ಪ್ಯಾನ್ ಇಂಡಿಯಾ ಸಿನಿಮಾವೊಂದನ್ನು ನಿರ್ದೇಶಿಸುವವರು ಇಷ್ಟು ನಿರುತ್ಸಾಹದಿಂದ ಹಾಗೂ ಯಾವುದೇ ಸರಿಯಾದ ಕಥೆ ಅಥವಾ ಸ್ಕ್ರಿಪ್ಟ್ ಇಲ್ಲದೆ ಹೇಗೆ ಕೆಲಸ ಮಾಡುತ್ತಾರೆ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ.
ಚಿತ್ರರಂಗದಲ್ಲಿ ಸಿನಿಮಾದ ಯಶಸ್ಸಿಗೆ ಬಲವಾದ ಚಿತ್ರಕಥೆ ಅತ್ಯಂತ ಅವಶ್ಯಕವಾಗಿರುವಾಗ, ನಿರ್ದೇಶಕಿಯೊಬ್ಬರು ಸ್ಕ್ರಿಪ್ಟ್ ಮೇಲೆ ನಂಬಿಕೆಯಿಲ್ಲ ಎಂದು ಬಹಿರಂಗವಾಗಿ ಹೇಳಿರುವುದು ಟೀಕೆಗೆ ಕಾರಣವಾಗಿದೆ. ಸದ್ಯ 'ಟಾಕ್ಸಿಕ್' ಸಿನಿಮಾದ ಬಿಡುಗಡೆಯ ಬೆನ್ನಲ್ಲೇ ನಿರ್ದೇಶಕಿಯ ಈ ಹಳೆಯ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಟ್ರೋಲ್‌ಗಳ ಸುಳಿಗೆ ಸಿಲುಕಿದೆ.
ಅಂದಹಾಗೆ, 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾವು ನಿನ್ನೆಯಷ್ಟೇ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದು ಸ್ವಾತಂತ್ರ್ಯ ಪೂರ್ವದ ಗೋವಾ ಹಿನ್ನೆಲೆಯಲ್ಲಿ, ಕಡಲಾಚೆಯ ಅಪರಾಧ ಸಾಮ್ರಾಜ್ಯ ಮತ್ತು ಅಂಡರ್ ವರ್ಲ್ಡ್ ಲೋಕದ ಕಥೆಯನ್ನು ಒಳಗೊಂಡಿದೆ. ಈ ಚಿತ್ರದಲ್ಲಿ ಯಶ್ ಅವರು ರಾಯಾ ಮತ್ತು ಟಿಕೆಟ್ ಹೆಸರಿನ ದ್ವಿಪಾತ್ರದಲ್ಲಿ ಅಭಿನಯಿಸಿದ್ದು, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ತನ್ನ ವಿಭಿನ್ನ ಶೈಲಿಯ ಕಥೆ ಮತ್ತು ರಕ್ತಸಿಕ್ತ ಆಕ್ಷನ್ ದೃಶ್ಯಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದೆ. ಮೊದಲ ದಿನವೇ 100 ಕೋಟಿ ರೂ.ಗೆ ಅಧಿಕ ಕಲೆಕ್ಷನ್​ ಮಾಡಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ, (ಏಜೆನ್ಸೀಸ್​).