- ಎರಡು ವರ್ಷಗಳ ಬಳಿಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ಮೋಕ್ಷಾ ಕುಶಾಲ್
- ಮೋಡ ಕವಿದ ವಾತಾವರಣ ಇದೇ ವಾರ ರಿಲೀಸ್
- ಸಿಂಪಲ್ ಸುನಿ ನಿರ್ದೇಶನದ ರೊಮ್ಯಾಂಟಿಕ್ ಲವ್ ಸ್ಟೋರಿ
ಬೆಂಗಳೂರು : ಪರಮೇಶ್ವರ್ ಗುಂಡ್ಕಲ್ ನಿರ್ದೇಶನದ ‘ಕೋಟಿ’ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದವರು ನಟಿ ಮೋಕ್ಷಾ ಕುಶಾಲ್. ಈ ಚಿತ್ರದಲ್ಲಿ ನಟಿಯ ‘ನವಮಿ’ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಹೀಗಾಗಿ, ಸ್ಯಾಂಡಲ್‌ವುಡ್‌ನಲ್ಲಿ ಅವರು ಮತ್ತಷ್ಟು ಬಿಜಿಯಾಗಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ‘ಕೋಟಿ’ ಬಳಿಕ ಮೋಕ್ಷಾ ಮಾತ್ರ ಎಲ್ಲಿಯೂ ಕಾಣಿಸಿಕೊಳ್ಳದೆ, ಮುಂದಿನ ಸಿನಿಮಾದ ಯಾವೊಂದು ಮಾಹಿತಿ ನೀಡಿರಲಿಲ್ಲ. ಒಂದೇ ಸಿನಿಮಾದಲ್ಲಿ ಮಿಂಚಿ ನಟಿ ಹಿನ್ನೆಲೆಗೆ ಸರಿದರಾ ಎನ್ನುವಷ್ಟರಲ್ಲಿ ಮೋಕ್ಷಾ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಲು ಬರುತ್ತಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಚಿತ್ರದಲ್ಲಿ ಅವರು ಮುಖ್ಯಭೂಮಿಕೆಯಲ್ಲಿದ್ದು, ಇದೇ 26ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ನಟಿ ‘ವಿಜಯವಾಣಿ’ ಜತೆ ಮಾತಿಗೆ ಸಿಕ್ಕರು. ‘‘ಕೋಟಿ’ ದೊಡ್ಡ ಯಶಸ್ಸು ನೀಡಿ, ಬೆಳವಣಿಗೆ ಕಾರಣವಾಗಿತ್ತು. ಅದನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿ ಇತ್ತು. ಈ ವೇಳೆ ಸಾಕಷ್ಟು ಕಥೆ ಕೇಳಿದ್ದರೂ, ನನಗೆ ಯಾವೊಂದು ಇಷ್ಟವಾಗಲಿಲ್ಲ. ಹಾಗಾಗಿ, ತಾಳ್ಮೆ ವಹಿಸಿದೆ. ಅದಕ್ಕೂ ಮುನ್ನವೇ ನಾನು ‘ಮೋಡ ಕವಿದ ವಾತಾವರಣ’ ಸಿನಿಮಾ ಒಪ್ಪಿಕೊಂಡಿದ್ದೆ. ಸಿಂಪಲ್ ಸುನಿ ಅವರು ಸೌಪಾರ್ಣಿಕಾ ಹೆಸರಿನ ನನ್ನ ಪಾತ್ರವನ್ನು ಕ್ರಿಯೇಟಿವ್ ಆಗಿ ಹೆಣೆದಿದ್ದಾರೆ. ಪಾತ್ರಕ್ಕೆ ತಾಜಾತನವಿದೆ. ಇದೊಂದು ಲವ್‌ಸ್ಟೋರಿ ಸಿನಿಮಾವಾಗಿದ್ದು, ಚಿಕ್ಕಮಗಳೂರು, ಕಳಸದ ಮಳೆಯಲ್ಲಿ ಶೂಟ್ ಮಾಡಿದ್ದೇವೆ. ಇಡೀ ಕಥೆ ‘ಮುಂಗಾರುಮಳೆ’ ಫೀಲ್ ಕೊಡಲಿದೆ. ಸುನಿ ಸರ್ ಹಿಂದಿನ ಸಿನಿಮಾಗಳಿಗಿಂತ ಇಲ್ಲಿ ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಶೀಲಂಗೆ ಚೊಚ್ಚಲ ಚಿತ್ರವಾದರೂ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಕಾರಣ ಸಿನಿಮಾ ಜ್ಞಾನವಿದೆ. ಹೀಗಾಗಿ, ಇಬ್ಬರ ಕಾಂಬಿನೇಷನ್ ಚೆನ್ನಾಗಿ ಮೂಡಿಬಂದಿದೆ’ ಎಂದು ಖುಷಿಹಂಚಿಕೊಳ್ಳುತ್ತಾರೆ ನಟಿ ಮೋಕ್ಷಾ ಕುಶಾಲ್.
ಸೈಕಲ್ ಒಡೆದ ನಟಿ
ಚಿತ್ರದ ಪಾತ್ರಕ್ಕೆ ಸಿದ್ಧತೆ, ಸವಾಲು ಕುರಿತು ಮೋಕ್ಷಾ, ‘ಈ ಚಿತ್ರಕ್ಕಾಗಿ ಒಂದೂವರೆ ತಿಂಗಳು ವರ್ಕ್‌ಶಾಪ್ ಮಾಡಿದ್ದೇವೆ. ಡೈಲಾಗ್ ಟೋನ್, ದೇಹಭಾಷೆ ಎಲ್ಲವೂ ಸರಿ ಬರಲು ನಿರಂತರ ಶ್ರಮಪಟ್ಟೆವು. ಚಿಕ್ಕಂದಿನಿಂದಲೂ ನಾನು ಸೈಕಲ್ ಓಡಿಸಿದವಳಲ್ಲ. ಈ ಚಿತ್ರಕ್ಕಾಗಿ ನಾನು ಸೈಕಲ್ ಓಡಿಸುವುದು ಕಲಿಯಬೇಕಾಯಿತು’ ಎಂದು ಖುಷಿ ಹಂಚಿಕೊಳ್ಳುತ್ತಾರೆ. ‘ಇಲ್ಲಿ ಪಾತ್ರಕ್ಕಿಂತ ಕಥೆಯೇ ಹೀರೋ’ ಎನ್ನುವ ಮೋಕ್ಷಾ ಕುಶಾಲ್ ಸದ್ಯ ಕನ್ನಡದಲ್ಲಿ ಎರಡು-ಮೂರು ಕಥೆಗಳನ್ನು ಕೇಳಿದ್ದು, ಅವು ಅಂತಿಮ ಹಂತದಲ್ಲಿವೆಯಂತೆ.