- ಗುಳಿಗ ಗುಳಿಗ ಹಾಡಿಗೆ ಉತ್ತಮ ಪ್ರತಿಕ್ರಿಯೆ
- 30 ಲಕ್ಷದತ್ತ ವೀಕ್ಷಣೆ ಕಂಡ ದೈವಿಕ ಹಾಡು
- ಕರಾವಳಿ ದೈವ ಕೊರಗಜ್ಜ ಹಿನ್ನೆಲೆ ಕುರಿತ ಸಿನಿಮಾ
koragajja: ಬೆಂಗಳೂರು : ಕರಾವಳಿಯ ಕಾರ್ಣಿಕ ಪುರುಷ ಕೊರಗಜ್ಜ ದೈವದ ಕುರಿತು ಕನ್ನಡದಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ‘ಕೊರಗಜ್ಜ’. ಬಹುಕೋಟಿ ವೆಚ್ಚದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ತ್ರಿವಿಕ್ರಮ್ ಸಪಲ್ಯ ಬಂಡವಾಳ ಹೂಡಿದ್ದು, ಸುಧೀರ್ ಅತ್ತಾವರ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈಗಾಗಲೇ 3ಡಿ ಪೋಸ್ಟರ್ ರಿಲೀಸ್ ಮಾಡಿದ್ದ ಚಿತ್ರತಂಡ ಇತ್ತೀಚೆಗೆ ‘ಗುಳಿಗ ಗುಳಿಗ’ ಎಂಬ ಹಾಡನ್ನು ಬಿಡುಗಡೆ ಮಾಡಿತ್ತು. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಸಂಗೀತದಲ್ಲಿ ಮೂಡಿಬಂದಿರುವ ಹಾಡಿಗೆ ಸುಧೀರ್ ಅತ್ತಾವರ ಸಾಹಿತ್ಯ ರಚಿಸಿದ್ದು, ಹಿಂದಿ ಗಾಯಕ ಜಾವೇದ್ ಅಲಿ ಧ್ವನಿಯಾಗಿದ್ದಾರೆ. ಸಂಗೀತ ಪ್ರಿಯರಿಂದ ‘ಗುಳಿಗ ಗುಳಿಗ’ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರ ಮತ್ತು ಹಾಡಿನ ಯಶಸ್ಸು ಬಯಸದ ಕೆಲ ವಿಕೃತ ಮನಸ್ಥಿತಿಯ ಕಿಡಿಗೇಡಿಗಳು ಜಾಲತಾಣದಲ್ಲಿ ಸುಳ್ಳು ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ ಎಂದು ಚಿತ್ರತಂಡ ಆರೋಪಿಸಿತ್ತು. ದೈವಗಳನ್ನು ಆರಾಧಿಸುವ ಹಲವರು ಅಂತಹ ಟ್ರೋಲ್‌ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿಯೇ ಇತ್ತೀಚೆಗಷ್ಟೆ ಚಿತ್ರತಂಡ ಕೇರಳ ಜ್ಯೋತಿಷಿಗಳ ಮೊರೆ ಹೋಗಿದೆ. ಅದಕ್ಕಾಗಿ ಮಂಗಳೂರು ಮೂಲದ ಕೇರಳದ ತ್ರಿಶೂರ್‌ನ ವರುಣ್ ಭಟ್ ಅವರ ಬಳಿ ಕವಡೆ ಶಾಸ ಕೇಳಿದ್ದು, ಗುಳಿಗ ದೈವ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರಂತೆ. ಈ ವಿಷಯ ಚಿತ್ರತಂಡದ ಹರ್ಷಕ್ಕೆ ಕಾರಣವಾಗಿದೆ. ‘ಚಿತ್ರತಂಡದ ಕಾರ್ಯದಿಂದ ಗುಳಿಗನಿಗೆ ಸಂಪೂರ್ಣ ತೃಪ್ತಿ, ಸಂತೋಷವಾಗಿದೆ. ಕೊರಗಜ್ಜನಿಗೂ ಸಂತೋಷವಿದೆ. ಎಲ್ಲ ದೇವರ ಆಶೀರ್ವಾದ ಇದೆ ಎಂದು ಜ್ಯೋತಿಷಿ ತಿಳಿಸಿದ್ದಾರೆ’ ಎಂದು ತಂಡ ತಿಳಿಸಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳು ಭರದಿಂದ ಸಾಗಿದ್ದು, ಜನವರಿಯಲ್ಲಿ ಸಿನಿಮಾ ತೆರೆಗೆ ಬರಲಿದೆ.
ಜೀ ಮ್ಯೂಸಿಕ್‌ನಲ್ಲಿ ರಿಲೀಸ್ ಆಗಿರುವ ‘ಗುಳಿಗ ಗುಳಿಗ’ ಹಾಡಿಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಈ ಬಗ್ಗೆ ನಿರ್ದೇಶಕ ಸುಧೀರ್ ಅತ್ತಾವರ, ‘‘ಗುಳಿಗ ಗುಳಿಗ’ ಹಾಡಿನ ಮೇಕಿಂಗ್, ವಿಷ್ಯುವಲ್, ಸಂಗೀತದ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಆರು ಭಾಷೆ ಸೇರಿ ನಾಲ್ಕು ದಿನಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಚಿತ್ರರಂಗದವರು, ಸಾಹಿತಿಗಳು, ವೈದ್ಯರು, ವಿದ್ಯಾರ್ಥಿಗಳು ಸೇರಿ ಹಲವರು ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಈ ಮೂಲಕ ನಮ್ಮ ಸಂಸ್ಕೃತಿಯನ್ನು ವಿಶ್ವಮಟ್ಟದಲ್ಲಿ ಎತ್ತಿ ತೋರಿಸುವ ಪ್ರಯತ್ನವಾಗುತ್ತಿದೆ ಎಂಬ ಪ್ರಶಂಸೆಗಳು ಬಂದಿವೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ.