ತಾರಾಗಣ: ತನುಷ್, ವಂದಿತಾ ಗೌಡ, ಪಾಯಲ್ ಚಂಗಪ್ಪ, ವಿಜೇಶ್ ಲೀ, ಸಂದೀಪ್ ನೀನಾಸಂ, ಸುಜನಿತ್ ಶೆಟ್ಟಿ, ಭೀಷ್ಮ ರಾಮಯ್ಯ ಮತ್ತಿತರರು
"ಬಾಸ್' ಫಸ್ಟ್ ಲುಕ್ ಟೀಸರ್ ಬಿಡುಗಡೆ ಆದಾಗಿನಿಂದಲೂ ಇದು ನೈಜ ಘಟನೆಯಾಧಾರಿತ ಚಿತ್ರ ಎಂದೇ ಎಲ್ಲರೂ ಭಾವಿಸಿದ್ದರು! ಟ್ರೇಲರ್ ರಿಲೀಸ್ ಬಳಿಕ ಡೌಟೇ ಇಲ್ಲ, ಇದು ಪಕ್ಕಾ ಅದೇ...! ಅಂದರು. ಅದರ ಬೆನ್ನಲ್ಲೇ ರಿಲೀಸ್ ದಿನ ಹತ್ತಿರವಾದಂತೆ ಚಿತ್ರದ ವಿರುದ್ಧ ಕಾನೂನು ಸಮರ ನಡೆಯಿತು. ಇದೀಗ ಐದು ತಿಂಗಳ ಕಾನೂನು ಹೋರಾಟದ ಬಳಿಕ ಚಿತ್ರತಂಡ, ಹಲವು ಸವಾಲುಗಳ ನಡುವೆ "ಬಾಸ್" ಬಿಡುಗಡೆ ಮಾಡಿದೆ. ಹಾಗಾದರೆ, ಈ "ಬಾಸ್' ಯಾರು? ಆತನ ಕಥೆ ಏನು? ಇದು ಅದೇನಾ? ಅಥವಾ ಅಲ್ಲವಾ?
ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಮೋರಿ ಸಮೀಪ ಅನಾಥ ಶವ ಪತ್ತೆಯಾಗುತ್ತದೆ. ನಾಲ್ವರು ಯುವಕರು ನಾವೇ ಕೊಲೆ ಮಾಡಿದ್ದು ಎಂದು ಠಾಣೆಯಲ್ಲಿ ಶರಣಾಗುತ್ತಾರೆ. ಡಿಸಿಪಿ ಹರೀಶ್ಗೆ ಸಂಸದ ಅಣ್ಣಾಜಿ ಕರೆ ಮಾಡಿ ಯಾವುದೇ ಲೋಪಗಳಿಲ್ಲದಂತೆ ತನಿಖೆ ನಡೆಸಲು ಸೂಚಿಸುತ್ತಾರೆ. ಅಲ್ಲಿಂದ ಬಿಸಿಬಿ ತಂಡದ ಸ್ಟಾರ್ ಕ್ರಿಕೆಟರ್ ತನುಷ್ ಅಲಿಯಾಸ್ ಬಾಸ್ನತ್ತ ಕಥೆ ಹೊರಳುತ್ತದೆ. ಜನಸೇವೆ ಮಾಡಿಕೊಂಡು, ಗಾಡ್ ಫಾದರ್ಗಳ (ಅಭಿಮಾನಿಗಳ) ನೆಚ್ಚಿನ "ದಾಸ'ನಾಗಿರುವ ಬಾಸ್ಗೆ ಒಂದೇ ಸಮಸ್ಯೆ. ಅದು ಮನೆಯಲ್ಲಿ ಪತ್ನಿ ವಿಜಿ (ಪಾಯಲ್) ಇದ್ದರೂ, ಶೀಲಳ (ವಂದಿತಾ) ಜತೆಗಿನ ಅಕ್ರಮ ಸಂಬಂಧ. ಶೀಲಳಿಗೆ ಹಾಸನದ ಶಿವಸ್ವಾಮಿ ಎಂಬ ಕಿಡಿಗೇಡಿ ಆನ್ಲೈನ್ನಲ್ಲಿ ಅಶ್ಲೀಲವಾಗಿ ಮೆಸೇಜ್ ಮಾಡುತ್ತಾ ಕಿರುಕುಳ ನೀಡುತ್ತಿರುತ್ತಾನೆ. ಆಕೆಯ ಮನೆಯಲ್ಲಿ ಕೆಲಸ ಮಾಡುವ ಜೀವನ್ಗೆ ವಿಷಯ ಗೊತ್ತಾಗಿ, ಅಲ್ಲಿಂದ ದೀಪು, ಸುಭಾಷ್, ವಿನಯ್ ಸೇರಿ ಬಾಸ್ ಪಟಾಲಂಗೆ ತಲುಪುತ್ತದೆ. ಶಿವಸ್ವಾಮಿಯನ್ನು ಬೆಂಗಳೂರಿಗೆ ಕರೆತರುವ ಬಾಸ್ ಪಟಾಲಂ ಆತನಿಗೆ ಥರಹೇವಾರಿ ಕಿರುಕುಳ ಕೊಟ್ಟಿರುತ್ತಾರೆ. ಸ್ಥಳಕ್ಕೆ ಬಾಸ್ ಮತ್ತು ಶೀಲಾ ಕೂಡ ಬಂದು ಹೋಗುತ್ತಾರೆ. ಸತತ ಹೊಡೆತ ತಾಳಲಾರದೇ ಶಿವಸ್ವಾಮಿ ಸಾವಿಗೀಡಾಗುತ್ತಾನೆ. ಮುಂದೆ? ಕೊಲೆ ಮಾಡಿದ್ದು ಯಾರು? ತನಿಖೆ ಹೇಗೆ ಸಾಗುತ್ತದೆ? ಸಿನಿಮಾ ನೋಡಿ!
ಸಿನಿಮಾ ಸಾಗಿದಂತೆ ಪ್ರತಿ ಹಂತದಲ್ಲೂ ಎಲ್ಲೋ ಓದಿದ, ನೋಡಿದ, ಕೇಳಿದ ಸುದ್ದಿಗಳನ್ನು ಮತ್ತೊಮ್ಮೆ ನೆನಪಿಸುತ್ತವೆ. ಅದರಾಚೆಗೂ ಹೊಸ ವಿಷಯಗಳನ್ನು ದಾಟಿಸುವ ಪ್ರಯತ್ನ ಮಾಡಿದ್ದಾರೆ ಲವ. ಹಾಗೇ "ಬಾಸ್'ಗೆ ಅಂಟಿದ ಕಳಂಕವನ್ನು ತಂಡ ಉಜ್ಜಿ ಉಜ್ಜಿ ತೊಳೆಯಲು ಯತ್ನಿಸಿದೆ. ಸಿನಿಮಾ ನೋಡಿದವರಿಗೆ ಅದು ಅರ್ಥವಾಗುತ್ತದೆ. ಮೊದರ್ಲಧ ವೇಗವಾಗಿ ಸಾಗಿದರೂ, ದ್ವೀತಿಯಾರ್ಧ ಸ್ವಲ್ಪ ನಿಧಾನವೆನಿಸುತ್ತದೆ. "ಬಾಸ್' ಆಗಲು ತನುಷ್ ಸಾಕಷ್ಟು ಎಫರ್ಟ್ ಹಾಕಿದ್ದಾರೆ. ಶೀಲಾಳಾಗಿ ವಂದಿತಾ ನ್ಯಾಚುರಲ್. ಹಲವು ಕಾರಣಗಳಿಂದ ಈ ಸಿನಿಮಾ ಒಂದು ರಿಸ್ಕಿ ಪ್ರಯತ್ನ ಎಂಬುದಂತೂ ಸತ್ಯ. ಸಿನಿಮಾ ಪ್ರೀಮಿಯರ್ ಬಳಿಕ ಪ್ರೇಕ್ಷಕರ ಮುಂದೆ ಬಂದು ನಾಯಕ ತನುಷ್ ಕಣ್ಣೀರು ಹಾಕಿದ್ದೇ ಅದಕ್ಕೆ ಸಾಕ್ಷಿ!