Chargesheet 03-08 Review 
ಸ್ಯಾಂಡಲ್‌ವುಡ್

Chargesheet 03-08 Review : ಮಗಳ ಪ್ರೇಮಕಥೆ, ಅಪ್ಪನ ವ್ಯಥೆ

Chargesheet 03-08 Review _
ಚಿತ್ರ: ಚಾರ್ಜ್​ಶೀಟ್​
ನಿರ್ದೇಶನ: ವೆಂಕಟ್​ ಭಾರದ್ವಾಜ್​
ತಾರಾಗಣ: ಸುಂದರ್​ ರಾಜ್​, ಹರ್ಷ ಅರ್ಜುನ್​, ಅಮರ್​, ಸತ್ಯಶ್ರೀ, ವೆಂಕಟ್​ ಮತ್ತಿತರರು.
ಪತ್ನಿಯನ್ನು ಕಳೆದುಕೊಂಡಿರುವ ನಿವೃತ್ತ ಎಂಜಿನಿಯರ್​ ರಾಮಣ್ಣನಿಗೆ (ಸುಂದರ್​ ರಾಜ್​) ಮಗಳು ಸೌಮ್ಯಳೇ (ಸತ್ಯಶ್ರೀ) ಪ್ರಪಂಚ. ಮಲೇಷಿಯಾ ಏರ್​ಲೈನ್ಸ್​ನಲ್ಲಿ ಗಗನಸಖಿ ಕೆಲಸಕ್ಕೆಂದು ಹೋಗುವ ಆಕೆ ಕಣ್ಮರೆಯಾಗುತ್ತಾಳೆ. ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲು ಹೋದರೆ, ಮಲೇಷಿಯಾದಲ್ಲೇ ಹೋಗಿ ಹುಡುಕಿ ಎಂಬ ಉತ್ತರ. ಕಾರ್ಪೊರೇಟರ್​ನಿಂದ ಹಿಡಿದು ಶಾಸಕ, ಸಂಸದರ ಬಳಿ ಹೋಗಿ ಅಳಲು ತೋಡಿಕೊಂಡರೂ ಯಾರೂ ಸ್ಪಂದಿಸುವುದಿಲ್ಲ. ಕೊನೆಗೆ ಪರಿಚಯದವರು ಕಲಾಸಿಪಾಳ್ಯ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​ ಎಸ್​.ಕೆ. ಉಮೇಶ್​ (ಹರ್ಷ ಅರ್ಜುನ್​) ಬಳಿ ವಿಷಯ ತಿಳಿಸಲು ಹೇಳುತ್ತಾರೆ. ರಾಮಣ್ಣನ ನೋವಿಗೆ ಸ್ಪಂದಿಸುವ ದಕ್ಷ ಅಧಿಕಾರಿ ಉಮೇಶ್​ ಅನ್​-ಅಫಿಷಿಯಲ್ಲಾಗಿ ಐದು ವರ್ಷಗಳ ಹಿಂದಿನ ಪ್ರಕರಣದ ಬೆನ್ನು ಹತ್ತುತ್ತಾರೆ. ಅವರ ತಂಡವೂ ಅಧಿಕಾರಿಯ ಬೆನ್ನಿಗೆ ನಿಲ್ಲುತ್ತದೆ. ಅಲ್ಲಿಂದ ಸೌಮ್ಯ ಮತ್ತು ಪ್ರಭಾಕರ್​ ರಾಜು (ಅಮರ್​) ನಡುವಿನ ಲವ್​ಸ್ಟೋರಿ ತೆರೆದುಕೊಳ್ಳುತ್ತದೆ. ಆತನ ಮೇಲಿದ್ದ ಅನುಮಾನ, ಕೊನೆಗೆ ರಾಮಣ್ಣನತ್ತಲೇ ತಿರುಗುತ್ತದೆ. ಕರ್ನಾಟಕದಿಂದ ಆರಂಭವಾಗುವ ಕಥೆ ತಮಿಳುನಾಡು, ಆಂಧ್ರ ಪ್ರದೇಶಕ್ಕೂ ಸಂಚರಿಸುತ್ತದೆ. ಹಾಗಾದರೆ ಸೌಮ್ಯ ಕಣ್ಮರೆ ಹಿಂದಿನ ಕಥೆಯೇನು? ಆಕೆ ಎಲ್ಲಿಗೆ ಹೋದಳು? ಏನಾದಳು? ಮತ್ತೆ ವಾಪಸ್​ ಬರುತ್ತಾಳಾ? "ಚಾರ್ಜ್​ಶೀಟ್​ 03-08' ನೋಡಿ.
2003ರಿಂದ 2008ರವರೆಗೆ ನಡೆದ ನೈಜ ಘಟನೆಯಾಧಾರಿತ ಕೆಮ್​ ಥ್ರಿಲ್ಲರ್​ ಕಥೆಯನ್ನು ನಿರ್ದೇಶಕ ವೆಂಕಟ್​ ಭಾರದ್ವಾಜ್​ ನೈಜವಾಗಿಯೇ ಪ್ರೇಕ್ಷಕರ ಮುಂದಿಡಲು ಯತ್ನಿಸಿದ್ದಾರೆ. ಚಿತ್ರದುದ್ದಕ್ಕೂ ಸೌಮ್ಯ ಏನಾದಳು? ಎಂಬ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತದೆ. ಕೆಲವೆಡೆ ಲಿಂಕ್​ ಇಲ್ಲದೇ ಚಿತ್ರಕಥೆ ಕೈಕೊಟ್ಟರೂ, ನಿವೃತ್ತ ಪೊಲೀಸ್​ ಅಧಿಕಾರಿ ಎಸ್​.ಕೆ. ಉಮೇಶ್​ ಅವರೇ ಬಂದು ಕಥೆಯನ್ನು ಮುಂದುವರಿಸುವ ಕಾರಣ "ಚಾರ್ಜ್​ಶೀಟ್​' ಕುತೂಹಲದಿಂದ ನೋಡಿಸಿಕೊಂಡು ಹೋಗುತ್ತದೆ. ಸುಂದರ್​ ರಾಜ್​ ಅಕ್ಷರಶಃ ರಾಮಣ್ಣ ಪಾತ್ರವನ್ನು ಜೀವಿಸಿದ್ದಾರೆ. ಅವರ ನಟನೆಯೇ ಚಿತ್ರದ ಹೈಲೈಟ್​. ಎಸ್​.ಕೆ. ಉಮೇಶ್​ ಪಾತ್ರದಲ್ಲಿ ಹರ್ಷ ಅರ್ಜುನ್​, ಪ್ರೀತಿಸಿದ ಹುಡುಗಿಯನ್ನು ಕಳೆದುಕೊಳ್ಳುವ ಪ್ರೇಮಿಯಾಗಿ ಅಮರ್​ ಗಮನ ಸೆಳೆಯುತ್ತಾರೆ. ಸಮೀರ್​ ಕುಲಕರ್ಣಿ ಸಂಗೀತದಲ್ಲಿ "ಋತುಮಾನವು ಬದಲಾಗಿದೆ' ಹಾಡು ನೆನಪಿನಲ್ಲಿ ಉಳಿಯುತ್ತದೆ. ನೈಜ ಘಟನೆಯಾಧಾರಿತ ಹಾಗೂ ಕ್ರೈಮ್​​ ಥ್ರಿಲ್ಲರ್​ ಅಭಿಮಾನಿಗಳಿಗೆ "ಚಾರ್ಜ್​ಶೀಟ್​' ಇಷ್ಟವಾಗಬಹುದು.