- 53ನೇ ಹುಟ್ಟುಹಬ್ಬ ಆಚರಿಸಿಕೊಂಡ ನಟ ಸುದೀಪ್
- ಈ ಬಾರಿ ಹುಟ್ಟುಹಬ್ಬಕ್ಕೆ ಮೂರು ಹೊಸ ಸಿನಿಮಾ ಘೋಷಿಸಿದ ನಟ
- ದೇವರಾಯ ಚಿತ್ರದ ಮೂಲಕ ಮೊದಲ ಬಾರಿಗೆ ಐತಿಹಾಸಿಕ ಪಾತ್ರದಲ್ಲಿ ಕಿಚ್ಚ ನಟನೆ
ಬೆಂಗಳೂರು: ಸ್ಯಾಂಡಲ್‌ವುಡ್ ಖ್ಯಾತ ನಟ ಸುದೀಪ್ ಬುಧವಾರಕ್ಕೆ (ಸೆ.2) 53ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಶೂಟಿಂಗ್‌ನಲ್ಲಿ ಬಿಜಿ ಇರುವ ಕಾರಣ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ, ಹಾಗಾಗಿ, ಇದ್ದಲ್ಲಿಯೇ ಸಾಮಾಜಿಕ ಕಾರ್ಯಗಳು ಮೂಲಕ ಸಂಭ್ರಮಿಸಿ ಎಂದು ಸುದೀಪ್ ಕೆಲ ದಿನಗಳ ಹಿಂದೆಯೇ ಅಭಿಮಾನಿಗಳಿಗೆ ಪತ್ರ ಬರೆದಿದ್ದರು. ಹಾಗಾಗಿ, ಈ ಬಾರಿ ಅದ್ದೂರಿ ಆಚರಣೆ ಇಲ್ಲವಾದರೂ, ನಟನ ಮುಂದಿನ ‘ಬಿಲ್ಲಾ ರಂಗ ಬಾಷಾ’ ಚಿತ್ರದ ಫಸ್ಟ್ ಲುಕ್ ಜತೆಗೆ ಮೂರು ಹೊಸ ಸಿನಿಮಾಗಳು ಘೋಷಣೆಯಾಗಿವೆ. ಆ ಮೂಲಕ ಸುದೀಪ್ ಅಭಿಮಾನಿಗಳಿಗೆ ಹುಟ್ಟುಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ. ಸಿನಿಮಾಗಳ ಜತೆಗೆ ಸುದೀಪ್ ಇದೇ ಭಾನುವಾರದಿಂದ ಆರಂಭವಾಗಲಿರುವ ‘ಬಿಗ್‌ಬಾಸ್ ಕನ್ನಡ ಸೀಸನ್ 13’ರನ್ನು ಮುನ್ನಡೆಸಲಿದ್ದಾರೆ.
ಬಿಲ್ಲಾ ರಂಗ ಬಾಷಾನ ಆ್ಯಕ್ಷನ್
‘ವಿಕ್ರಾಂತ್ ರೋಣ’ ಬಳಿಕ ನಟ ಸುದೀಪ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ‘ಬಿಲ್ಲಾ ರಂಗ ಬಾಷಾ’ ಮೂಲಕ ಮತ್ತೆ ಒಂದಾಗಿದ್ದಾರೆ. ಕಳೆದ ವರ್ಷವೇ ಸಿನಿಮಾ ಘೋಷಣೆಯಾಗಿತ್ತು. ಸದ್ಯ ಬೆಂಗಳೂರು ಹೊರವಲಯದಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸುದೀಪ್ ಬರ್ತ್‌ಡೇಗೆ ಚಿತ್ರತಂಡ ಫಸ್ಟ್ ಲುಕ್ ರಿವೀಲ್ ಮಾಡಿದೆ. ಹಿಮಾಚ್ಛದಿತ ಪ್ರದೇಶದಲ್ಲಿ ನಟ ಬೈಕ್ ಮೇಲೆ ಚಲಿಸುತ್ತಿದ್ದು, ಅವರ ಮೇಲೆ ಹೆಲಿಕಾಪ್ಟರ್‌ಗಳು ಹಾರಾಡುತ್ತಿವೆ. ಸುದೀಪ್ ಕಾಸ್ಟ್ಯೂಮ್ ಹಾಗೂ ಲುಕ್ ಗಮನಸೆಳೆಯುತ್ತದೆ. 2027ರ ಮಾರ್ಚ್‌ಗೆ ಟೀಸರ್, ಜುಲೈ-ಸೆಪ್ಟೆಂಬರ್ ನಡುವೆ ಟ್ರೇಲರ್, ಹಾಡು ಅನಾವರಣಗೊಳ್ಳಲಿದ್ದು, ಮುಂದಿನ ವರ್ಷದ ಡಿಸೆಂಬರ್‌ಗೆ ಸಿನಿಮಾ ತೆರೆಗೆ ಬರಲಿದೆ.
‘ದೇವರಾಯ’ನಾದ ಅಭಿನಯ ಚಕ್ರವರ್ತಿ
ನಟ ಸುದೀಪ್ ‘ದೇವರಾಯ’ ಚಿತ್ರದ ಮೂಲಕ ಕನ್ನಡದಲ್ಲಿ ಮೊದಲ ಬಾರಿಗೆ ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬುಧವಾರ ಟೀಸರ್ ಮೂಲಕ ಸಿನಿಮಾ ಘೋಷಿಸಲಾಯಿತು. ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಪ್ರಿಯಾ ಸುದೀಪ್ ಒಡೆತನದ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ. ವಿಜಯನಗರದ ಸಾಮ್ರಾಜ್ಯವನ್ನು ಸುವರ್ಣಯುಗಕ್ಕೆ ಕೊಂಡೊಯ್ದ, ಅಪ್ರತಿಮ ಸಾಹಸಿ, ಚಾಣಾಕ್ಷ ಆಡಳಿತಗಾರ ಶ್ರೀಕೃಷ್ಣದೇವರಾಯನ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಕಾಣಿಸಿಕೊಳ್ಳಲಿದ್ದು, ಫಸ್ಟ್ ಲುಕ್‌ನಲ್ಲಿ ಮಿಂಚಿದ್ದಾರೆ. ಸದ್ಯಕ್ಕೆ ನಿರ್ದೇಶಕರು ಯಾರೆಂಬುದನ್ನು ಗೌಪ್ಯವಾಗಿಡಲಾಗಿದೆ. ‘ದೇವರಾಯ’ 2027ರ ಡಿಸೆಂಬರ್‌ಗೆ ತೆರೆ ಮೇಲೆ ಬರಲಿದೆ.
‘ಸ್ಕೂಲ್ ಬಸ್’ ಹತ್ತಿದ ಕಿಚ್ಚ
ತಮಿಳು ನಟ, ನಿರ್ದೇಶಕ ಪಿ.ಸಮುದ್ರಖನಿ ಆ್ಯಕ್ಷನ್-ಕಟ್ ಹೇಳುತ್ತಿರುವ ‘ಸ್ಕೂಲ್ ಬಸ್’ನಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬರ್ತ್‌ಡೇ ಹಿನ್ನೆಲೆಯಲ್ಲಿ ಚಿತ್ರತಂಡ ನಟನನ್ನು ಸ್ವಾಗತಿಸಿದೆ. 22 ಮಕ್ಕಳ ಜವಾಬ್ದಾರಿ ಹೊತ್ತ ಶಾಲಾ ಬಸ್ ಚಾಲಕನೊಬ್ಬನ ಸುತ್ತ ಈ ಕಥೆ ಸಾಗಲಿದೆ. ಕನ್ನಡ ಸೇರಿ ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಹಾಗೂ ಚೈನೀಸ್ ಭಾಷೆಯಲ್ಲಿ ‘ಸ್ಕೂಲ್ ಬಸ್’ ಮೂಡಿಬರಲಿದೆ.
ಪ್ರೇಮ್ ಅಡ್ಡದಲ್ಲಿ ‘ವಿಲನ್’
‘ದ ವಿಲನ್’ ಚಿತ್ರ ತೆರೆಕಂಡು ಎಂಟು ವರ್ಷಗಳ ಬಳಿಕ ನಟ ಸುದೀಪ್ ಹಾಗೂ ನಿರ್ದೇಶಕ ಪ್ರೇಮ್ ಮತ್ತೆ ಒಂದಾಗಿದ್ದಾರೆ. ಪ್ರೇಮ್ ನಿರ್ದೇಶನದ 10ನೇ ಚಿತ್ರವಾಗಿದ್ದು, ಟೈಟಲ್ ರಿವೀಲ್ ಮಾಡಬೇಕಿದ್ದು, ಟೀಸರ್ ಮೂಲಕ ಸಿನಿಮಾ ಘೋಷಿಸಲಾಗಿದೆ. ಇಂದಿನ ಜನರೇಷನ್ ಮನೆ ಮನೆಯ ಕಥೆಯನ್ನು ಪ್ರೇಮ್ ಕಲರ್‌ಫುಲ್ಲಾಗಿ ಹೇಳಲಿದ್ದಾರೆ ಎಂದು ತಿಳಿದುಬಂದಿದೆ. ಅಕ್ಟೋಬರ್ 20ರಂದು ಚಿತ್ರದ ಮುಹೂರ್ತ ನೆರವೇರಿಲಿದ್ದು, ಅಂದೇ ಟೈಟಲ್ ಘೊಷಿಸುವ ಜತೆಗೆ ಫಸ್ಟ್ ಲುಕ್ ರಿವೀಲ್ ಮಾಡಲಿದ್ದಾರೆ.