ನಿರ್ದೇಶನ: ಶ್ರೀನಿಧಿ ಬೆಂಗಳೂರು
ತಾರಾಗಣ: ಭರತ್, ಜೀವನ್, ತೇಜೇಶ್, ಪ್ರಿಯಾ, ನಲ್ಮೆ ಮತ್ತಿತರರು
ಫೌಂಡ್ ಫುಟೇಜ್ ಜಾನರ್ ಸಿನಿಮಾಗಳು ಕನ್ನಡದಲ್ಲಿ ಅಪರೂಪ. ಈ ಹಿಂದೆ "6-5+2' (2013) ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅದಾಗಿ 13 ವರ್ಷಗಳ ಬಳಿಕ "ಬ್ಲಿಂಕ್' ನಿರ್ದೇಶಕ ಶ್ರೀನಿಧಿ ಅಂಥದ್ದೇ ಕಥೆಯ "ವಿಡಿಯೋ' ಹೆಕ್ಕಿ ತಂದಿದ್ದಾರೆ. ಹಾಗಾದರೆ ಹೇಗಿದೆ "ಎಲ್ಲೋ ಸಿಕ್ಕ' ಈ ಹಾರರ್ ಥ್ರಿಲ್ಲರ್?
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಬೇಕು ಅಂತ ನಾನಾ ರೀತಿಯ ಸರ್ಕಸ್ ಮಾಡುವ ಚಿತ್ರ, ವಿಚಿತ್ರ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಇನ್ನು ಯೂಟ್ಯೂಬ್ ವ್ಲಾಗ್ ಮಾಡುವುದನ್ನೇ ಸಾವಿರಾರು ಮಂದಿ ವೃತ್ತಿ ಮಾಡಿಕೊಂಡಿದ್ದಾರೆ. ಅಂಥದ್ದೇ "ತರಲೆ ಗ್ಯಾಂಗ್' ಯೂಟ್ಯೂಬ್ ಚಾನಲ್ನ ಭರತ್, ಜೀವನ್, ತೇಜೇಶ್, ಮಧುರಾ (ಪ್ರಿಯಾ) ಮತ್ತು ಚಂದ್ರ (ನಲ್ಮೆ) ಕಥೆಯಿದು. ಹತ್ತು ಲಕ್ಷ ಫಾಲೋವರ್ಸ್ ಪಡೆಯುವ ಈ "ತರಲೆ ಗ್ಯಾಂಗ್' ಒಂದೊಳ್ಳೆ ವೈರಲ್ ಕಂಟೆಂಟ್ ಮೂಲಕ ಸಾಧನೆಯನ್ನು ಸೆಲೆಬ್ರೇಟ್ ಮಾಡಲು ತೀರ್ಮಾನಿಸುತ್ತಾರೆ. ಅದರಂತೆ ಕರ್ನಾಟಕದ ಕೆಲ ಹಾಂಟೆಡ್ ಸ್ಥಳಗಳಿಗೆ ಭೇಟಿ ಕೊಟ್ಟು ಅನುಭವವಿರುವ ಈ ಗ್ಯಾಂಗ್ ಒಡಿಶಾದ ಪದ್ಮಾಪುರ ಶಾಲೆಗೆ ತೆರಳಲು ನಿರ್ಧರಿಸುತ್ತದೆ. ಯೂಟ್ಯೂಬರ್ ಸಮೀರ್, ಭೂತ ಪ್ರೇತಗಳ ಬಗ್ಗೆ ಅಧ್ಯಯನ ನಡೆಸಿರುವ ಅಲ್ತ್ಾ ಮತ್ತು ಶಾಂತನು ಸೇರಿ ಕೆಲವರನ್ನು ಭೇಟಿಯಾಗಿ ತರಲೆ ಗ್ಯಾಂಗ್ ಸದಸ್ಯರು ಆ ಶಾಲೆಯ ಬಗ್ಗೆ, ಅಲ್ಲಿ ನಡೆದಿರುವ ಅತಿಮಾನುಷ ಟನೆಗಳ ಬಗ್ಗೆ ಮಾಹಿತಿ ಪಡೆಯುತ್ತಾರೆ. ಚಂದ್ರ ಗ್ರಹಣದ ಸಮಯದಲ್ಲಿ ಅಲ್ಲಿಗೆ ಯಾರೂ ಹೋಗುವಂತಿಲ್ಲ. ಹೋದರೆ, ವಾಪಸ್ ಬರುವುದಿಲ್ಲ ಎಂಬ ನಂಬಿಕೆ ಇರುತ್ತದೆ. ಆದರೆ, ಈ ಗ್ಯಾಂಗ್ ಚಂದ್ರಗ್ರಹಣದ ದಿನವೇ ಅಲ್ಲಿಗೆ ತೆರಳಲು ತೀರ್ಮಾನಿಸಿ. ದಾರಿಯುದ್ಧಕ್ಕೂ ಕೆಲ ಸಮಸ್ಯೆಗಳು ಎದುರಾಗುತ್ತವೆ. ಆದರೂ, ಎದೆಗುಂದದೇ ಪದ್ಮಾಪುರ ಶಾಲೆಗೆ ಹೋಗುವ ತರಲೆ ಗ್ಯಾಂಗ್ ವಾಪಸ್ಸಾಗುತ್ತಾ? ಎಂಬುದೇ "ವಿಡಿಯೋ' ಕಥೆ.
ಫೌಂಡ್ ಫುಟೇಜ್ ಸಿನಿಮಾಗಳನ್ನು ಮಾಡುವುದು ಸರಳವಲ್ಲ. ಚಿತ್ರಕಥೆ, ಮೇಕಿಂಗ್, ಸೇರಿ ತಾಂತ್ರಿಕವಾಗಿ ತುಂಬ ಎಚ್ಚರಿಕೆ ವಹಿಸಿರಬೇಕು. ಅದರಂತೆ ಶ್ರೀನಿಧಿ ಕಣ್ಣು "ಬ್ಲಿಂಕ್' ಮಾಡಲು ಬಿಡದಂತೆ "ವಿಡಿಯೋ' ನೋಡಿಸಿಕೊಂಡು ಹೋಗುತ್ತಾರೆ. ಮೊದರ್ಲಧ ಜಾಲಿ ಮಾತುಗಳು, ಜಗಳಗಳೊಂದಿಗೆ ನೋಡಿಸಿಕೊಂಡು ಹೋಗುತ್ತಾರೆ. ದ್ವೀತಿಯಾರ್ಧದಲ್ಲಿ ದೆವ್ವ, ಭೂತಗಳನ್ನೂ ಮೀರಿದ ವಿಷಯ ಹೇಳುವ ಪ್ರಯತ್ನ ಮಾಡಿದ್ದಾರೆ. ಆ ಕುತೂಹಲವನ್ನು ಉಳಿಸಿಕೊಂಡಿದ್ದರೆ "ವಿಡಿಯೋ' ಪ್ರೇಕ್ಷಕರಲ್ಲಿ ಮತ್ತಷ್ಟು ಭಯ ಹುಟ್ಟಿಸುವ ಸಾಧ್ಯತೆ ಇರುತ್ತಿತ್ತು. ಆದರೂ, ಭರತ್, ಜೀವನ್, ತೇಜೇಶ್, ಪ್ರಿಯಾ, ನಲ್ಮೆ ತಾವೂ ಹೆದರುತ್ತಾ, ಪ್ರೇಕ್ಷಕರನ್ನೂ ಹೆದರಿಸಲು ಯತ್ನಿಸಿದ್ದು, ಅದಕ್ಕೆ ಹಿನ್ನೆಲೆ ಸಂಗೀತದ ಮೂಲಕ ಪ್ರಸನ್ನ ಕುಮಾರ್, ಅವಿನಾಶ್ ಛಾಯಾಗ್ರಹಣ ಮತ್ತು ಸಂಜೀವ್ ಜಾಗೀರ್ದಾರ್ ಸಂಕಲನ ಸಾಥ್ ನೀಡಿದ್ದಾರೆ.