ಪ್ರಮುಖ ಮುಖ್ಯಾಂಶಗಳು
ಬೆಂಗಳೂರು : ಕನ್ನಡ ಸೇರಿ ಪರಭಾಷೆಯ 700ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಹಿರಿಯ ನಟಿಗೆ ಲಕ್ಷ್ಮೀ ಸಲ್ಲುತ್ತದೆ. ತಮ್ಮ ವೃತ್ತಿ ಜೀವನದಲ್ಲಿ 30 ಸಾವಿರಕ್ಕೂ ಅಧಿಕ ಕಾಲ್‌ಶೀಟ್‌ನಲ್ಲಿ ಕೆಲಸ ಮಾಡಿದ ಹಿರಿಮೆ ಅವರಿಗಿದೆ. ಇಂತಹ ಪಂಚಭಾಷಾ ತಾರೆ ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ‘ತ್ರಿಕೋನ’ (2022) ಅವರು ಅಭಿನಯಿಸಿದ್ದ ಕೊನೆಯ ಸಿನಿಮಾ. ಇದೀಗ ಯುವ ನಿರ್ದೇಶಕಿ ಮಾನಸಾ ಯು. ಶರ್ಮಾ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿರುವ ‘ಚಿಂಟು ಸನ್ ಆಫ್ ವಿಶಾಲಾಕ್ಷಿ’ ಮೂಲಕ ಕನ್ನಡಕ್ಕೆ ಮತ್ತೆ ಮರಳುತ್ತಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಕಿರುಚಿತ್ರ, ಜಾಹೀರಾತು ಸೇರಿ ವಿವಿಧ ವಿಭಾಗದಲ್ಲಿ ಕೆಲಸ ಮಾಡಿರುವ ಅವರು ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿದ್ದಾರೆ. ‘ಚಿಂಟು ಸನ್ ಆಫ್ ವಿಶಾಲಕ್ಷ್ಮಿ’ ಚಿತ್ರವು 60 ವರ್ಷದ ಮಗ ಹಾಗೂ ತಾಯಿ ನಡುವಿನ ಸಂಬಂಧ ಸಾರುವ ಚಿತ್ರವಾಗಿದ್ದು, ಪ್ರಕಾಶ್ ಬೆಳವಾಡಿ ಮಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕಾರ್ಯಗಳು ಪೂರ್ಣಗೊಂಡಿದ್ದು, ಅಕ್ಟೋಬರ್‌ನಲ್ಲಿ ಶೂಟಿಂಗ್ ಆರಂಭಿಸಲಿದೆ. ನಿರ್ದೇಶಕಿ ಮಾನಸಾ, ‘ಬಹುತೇಕ ಸಿನಿಮಾಗಳಲ್ಲಿ ಔಟ್ ಆ್ ಬಾಕ್ಸ್ ಅನಿಸುವ ಕಥೆಗಳನ್ನು ನಿರೀಕ್ಷಿಸುತ್ತಾರೆ. ಆದರೆ, ಇದು ಹಾಗಿಲ್ಲ. ಇದು ಎಲ್ಲರ ಮನೆಯಲ್ಲಿ ನಡೆಯುವ ಕಥೆ. ಒಮ್ಮೆ ನಾನು ಧಾರ್ಮಿಕ ಕ್ಷೇತ್ರಕ್ಕೆ ಹೋಗಿದ್ದೆ. 60 ವರ್ಷದ ಮಗನನ್ನು ತಾಯಿಯೊಬ್ಬರು ಅಲ್ಲಿಗೆ ಕರೆದುಕೊಂಡು ಬಂದಿದ್ದರು. ಅವರನ್ನು ವಿಚಾರಿಸಿದಾಗ ಹಲವು ವಿಷಯಗಳು ಗೊತ್ತಾದವು. ಆಗಲೇ ನನಗೆ ಇದನ್ನು ಸಿನಿಮಾ ಮಾಡಬಹುದು ಅಂತನಿಸಿ, ಕಥೆ ಬರೆಯಲು ಮುಂದಾದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆಯುವ ಕಥೆ ಇದು. ಬಳಿಕ ಕಾಶಿ, ಹೃಷಿಕೇಶಕ್ಕೆ ಹೋಗುತ್ತದೆ. ಆದಷ್ಟು ನೈಜವಾಗಿ ಶೂಟಿಂಗ್ ಮಾಡಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ. ಲಕ್ಷ್ಮೀ, ಪ್ರಕಾಶ್ ಬೆಳವಾಡಿ ಜತೆ ‘ಆಚಾರ್ ಆ್ಯಂಡ್ ಕೋ’ ಖ್ಯಾತಿಯ ಹರ್ಷಿಲ್ ಕೌಶಿಕ್, ಶಾಲಿನಿ ಸತ್ಯನಾರಾಯಣ, ರೋಹಿತ್ ಶ್ರೀನಾಥ್, ಶ್ರೀನಿವಾಸ ಪ್ರಭು ತಾರಾಗಣದಲ್ಲಿದ್ದಾರೆ.
ಕಥೆ ಬರೆಯುವಾಗಲೇ ಲಕ್ಷ್ಮೀ ಅಮ್ಮ ಹಾಗೂ ಪ್ರಕಾಶ್ ಬೆಳವಾಡಿ ಸರ್ ಈ ಪಾತ್ರಗಳಿಗೆ ಸೂಕ್ತ ಎಂದು ನಿರ್ಧರಿಸಿದ್ದೆ. ಇಬ್ಬರಿಗೂ ಕಥೆ ಹೇಳಿದಾಗ ಕೂಡಲೇ ಒಪ್ಪಿಕೊಂಡರು. ಅಮ್ಮ-ಮಗನ ಸಂಬಂಧದ ಜತೆಗೆ ಕಥೆಗೆ ಹಲವು ಆಯಾಮಗಳಿದ್ದು, ಕ್ಲೈಮ್ಯಾಕ್ಸ್‌ನಲ್ಲಿ ಅಧ್ಯಾತ್ಮದ ಅಂಶಗಳನ್ನು ನಿರೀಕ್ಷಿಸಬಹುದು. ಇಲ್ಲಿ ಗುಲಾಬ್ ಜಾಮೂನು ಕೂಡ ಒಂದು ಪಾತ್ರ. ಒಟ್ಟು 35 ದಿನಗಳಲ್ಲಿ ಶೂಟಿಂಗ್ ಮಾಡಿ, 2027ರ ಮೊದಲರ್ಧದಲ್ಲಿ ತೆರೆಗೆ ತರುವ ಆಲೋಚನೆಯಲ್ಲಿದ್ದೇವೆ.
-ಮಾನಸ ಶರ್ಮಾ, ನಿರ್ದೇಶಕಿ