ಸ್ಕಂದ ಅಶೋಕ್ 
ಸ್ಯಾಂಡಲ್‌ವುಡ್

‘ಸಮುದ್ರ ಮಂಥನ’ಕ್ಕಿಳಿದ ಸ್ಕಂದ ಅಶೋಕ್ : ಸಚಿನ್ ಶೆಟ್ಟಿ ನಿರ್ದೇಶನದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟ SKANDA ASHOK

ಕನ್ನಡದ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಗಮನ ಸೆಳೆದವರು ನಟ ಸ್ಕಂದ ಅಶೋಕ್. ಜನಪ್ರಿಯ ಧಾರಾವಾಹಿಗಳಾದ ‘ರಾಧಾ ರಮಣ’, ‘ಅವನು ಮತ್ತು ಶ್ರಾವಣಿ’ ಜತೆಗೆ ‘ಚಾರುಲತಾ’, ‘ಯೂ ಟರ್ನ್’ ಸೇರಿ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಬೆಂಗಳೂರು: ಕನ್ನಡದ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಗಮನ ಸೆಳೆದವರು ನಟ ಸ್ಕಂದ ಅಶೋಕ್. ಜನಪ್ರಿಯ ಧಾರಾವಾಹಿಗಳಾದ ‘ರಾಧಾ ರಮಣ’, ‘ಅವನು ಮತ್ತು ಶ್ರಾವಣಿ’ ಜತೆಗೆ ‘ಚಾರುಲತಾ’, ‘ಯೂ ಟರ್ನ್’ ಸೇರಿ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅಭಿನಯಿಸಿದ್ದ ‘ಭೈರಾದೇವಿ’ (2024) ಸ್ಕಂದ ಕಾಣಿಸಿಕೊಂಡಿದ್ದ ಕೊನೆಯ ಸಿನಿಮಾ. ಇದೀಗ ಎರಡು ವರ್ಷಗಳ ಬಳಿಕ ಅವರು ‘ಸಮುದ್ರ ಮಂಥನ’ ಮೂಲಕ ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸಚಿನ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಯಶವಂತ್ ಕುಮಾರ್ ಮತ್ತು ಮಂದಾರ ಬಟ್ಟಲಹಳ್ಳಿ ಮುಖ್ಯಭೂಮಿಕೆಯಲ್ಲಿದ್ದು, ಸ್ಕಂದ ಅಶೋಕ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘‘ಸಮುದ್ರ ಮಂಥನ’ ಚಿತ್ರದ ಕಥೆ ಮತ್ತು ಪಾತ್ರಕ್ಕಿರುವ ಮಹತ್ವ ನೋಡಿ ಬಹಳ ಇಷ್ಟಪಟ್ಟು ಒಪ್ಪಿಕೊಂಡೆ. ನಿಜ ಜೀವನದಲ್ಲಿ ಕಾನೂನಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮಾತ್ರವಲ್ಲದೆ, ಸಂಚಾರ ನಿಯಮ ಉಲ್ಲಂಘನೆಯ ವಿರುದ್ಧ ಜನಜಾಗೃತಿಯಲ್ಲೂ ತೊಡಗಿಕೊಂಡಿದ್ದೆ. ಆದರೆ, ‘ಯೂ ಟರ್ನ್’ ಚಿತ್ರದಲ್ಲಿ ಅದಕ್ಕೆ ತದ್ವಿರುದ್ಧವಾದ ಪಾತ್ರ ಮಾಡಿದ್ದೆ. ಇದೀಗ ‘ಸಮುದ್ರ ಮಂಥನ’ದಲ್ಲಿ ಕಾನೂನಿನ ಮೇಲೆ ಗೌರವವಿಟ್ಟುಕೊಂಡು ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ ಪಾತ್ರ ನನ್ನ ನಿಜ ಜೀವನಕ್ಕೆ ಬಹಳ ಹತ್ತಿರವೆನಿಸಿತು’ ಎಂದು ಸ್ಕಂದ ಅಶೋಕ್ ಹೇಳಿಕೊಳ್ಳುತ್ತಾರೆ.

ಶಿವು ಪಾತ್ರ ಬದುಕನ್ನು ನೋಡುವ ರೀತಿಗೂ, ನನ್ನ ಯೋಚನಾಲಹರಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಇದು ಪಾತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿಭಾಯಿಸಲು ಪೂರಕವಾಯಿತು. ಜತೆಗೆ ಈ ಚಿತ್ರತಂಡದ ಬದ್ಧತೆ ಹಾಗೂ ಪರಿಶ್ರಮ ನನಗೆ ಇಷ್ಟವಾಯಿತು. ಈ ಎಲ್ಲ ಕಾರಣಗಳಿಂದ ನಾನು ಈ ಚಿತ್ರತಂಡದ ಭಾಗವಾದೆ.
ಸ್ಕಂದ ಅಶೋಕ್, ನಟ