ಸಾಯೋ ಮುನ್ನ ನಟ ರವಿಚಂದ್ರನ್ಗೆ ಏನು ಹೇಳಲು ಬಯಸಿದ್ದರೂ ಸಿಲ್ಕ್ ಸ್ಮಿತಾ? ಮಾತನಾಡಲು ಅವಕಾಶ ನೀಡದ ವಿಧಿ! Silk Smitha
- ಸಿಲ್ಕ್ ಸ್ಮಿತಾ ನಿಧನರಾದ ದಿನದಂದು ನಟಿ ಅನುರಾಧಾ ಹಾಗೂ ನಟ ವಿ ರವಿಚಂದ್ರನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು
- ಶೂಟಿಂಗ್‌ನಲ್ಲಿದ್ದ ಕಾರಣ ಮತ್ತು ಕಳಪೆ ನೆಟ್‌ವರ್ಕ್‌ನಿಂದಾಗಿ ರವಿಚಂದ್ರನ್ ಜತೆಗೆ ಮಾತುಕತೆ ನಡೆದಿರಲಿಲ್ಲ
- ಆ ಕರೆಯನ್ನು ಕೇವಲ ಸಾಮಾನ್ಯವೆಂದು ಭಾವಿಸಿದ್ದ ರವಿಚಂದ್ರನ್ ಆಳವಾದ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ
- ಅಪೂರ್ಣ ಸಂಭಾಷಣೆಗಳು ಹಾಗೂ ಸಿಲ್ಕ್ ಸ್ಮಿತಾ ಅವರ ಸಾವಿನ ರಹಸ್ಯ ಎಂದೆಂದಿಗೂ ಹಾಗೆಯೇ ಉಳಿಯಿತು
Silk Smitha : ದಕ್ಷಿಣ ಭಾರತದ ಚಿತ್ರರಂಗದಲ್ಲಿ 80ರ ದಶಕದಲ್ಲಿ ಮಿಂಚು ಹರಿಸಿದ್ದ ನಟಿ ಸಿಲ್ಕ್ ಸ್ಮಿತಾ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ದುರಂತ ಸಾವಿಗೀಡಾದರು. ಸ್ಮಿತಾ ಅವರ ದೇಹದಲ್ಲಿ ಹೆಚ್ಚುವರಿ ಆಲ್ಕೋಹಾಲ್ ಕಂಡುಬಂದಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನಿರ್ಣಯಿಸಲಾಯಿತು. 80ರ ದಶಕದಲ್ಲಿ ಸಿಲ್ಕ್ ಸ್ಮಿತಾ ಬಹುಬೇಡಿಕೆಯ ನಟಿಯಾಗಿದ್ದರು. ಹೆಚ್ಚಾಗಿ ಅವರು ಕಾಮಪ್ರಚೋದಕ ದೃಶ್ಯಗಳಲ್ಲಿ ನಟಿಸುತ್ತಿದ್ದರು. ಐಟಂ ಸಾಂಗ್ಗಳಿಗೆ ಹೆಚ್ಚಾಗಿ ಸೊಂಟ ಬಳುಕಿಸುತ್ತಿದ್ದರು. ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಹೊಳೆಯುವ ಕಣ್ಣುಗಳು ಮತ್ತು ದ್ರಾವಿಡ ಮೈಬಣ್ಣವು ಸಿಲ್ಕ್ ಸ್ಮಿತಾಳನ್ನು ಖ್ಯಾತಿಯ ಉತ್ತುಂಗಕ್ಕೆ ಕೊಂಡೊಯ್ದಿತು. ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಅವರ ಆತ್ಮಹತ್ಯೆ ಸುದ್ದಿ ಅಭಿಮಾನಿಗಳಲ್ಲಿ ದೊಡ್ಡ ಆಘಾತವನ್ನುಂಟು ಮಾಡಿತು. ಇದೀಗ ಸಿಲ್ಕ್ ಸ್ಮಿತಾ ಅವರ ಕುರಿತಾದ ಇಂಟೆರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ.
ತಾಜಾ ಸಂಗತಿ ಏನೆಂದರೆ, ಸಿಲ್ಕ್ ಸ್ಮಿತಾ ಅವರು ಸಾಯುವ ಮುನ್ನ ರಾತ್ರಿ ನಟಿ ಅನುರಾಧಾ ಮತ್ತು ನಟ ವಿ. ರವಿಚಂದ್ರನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ, ವಿಧಿ ಅವರ ಆ ಕೊನೆಯ ಮಾತುಗಳನ್ನು ರಹಸ್ಯವಾಗಿಯೇ ಉಳಿಸಿತು. ಅಷ್ಟಕ್ಕೂ ನಡೆದಿದ್ದೇನೆಂದರೆ, 1996ರ ಸೆಪ್ಟೆಂಬರ್ 22ರ ರಾತ್ರಿ ಅನುರಾಧಾ ಅವರಿಗೆ ಕರೆ ಮಾಡಿ ಮಾತನಾಡಬೇಕಿದೆ ಎಂದು ಸಿಲ್ಕ್ ಸ್ಮಿತಾ ಹೇಳಿದ್ದರೂ ಆ ಭೇಟಿ ಮಾತ್ರ ಸಾಧ್ಯವಾಗಲಿಲ್ಲ. ಹಾಗೆಯೇ ನಟ ರವಿಚಂದ್ರನ್ ಅವರನ್ನು ಸಂಪರ್ಕಿಸಲು ಹೋದಾಗಲೂ ಕಳಪೆ ನೆಟ್‌ವರ್ಕ್ ಕಾರಣದಿಂದ ಮಾತುಕತೆ ನಡೆದಿರಲಿಲ್ಲ. ಆದರೆ ಮಾರನೇ ದಿನ ಬೆಳಗ್ಗೆ ಅವರೆಲ್ಲರಿಗೂ ಸಿಲ್ಕ್ ಸ್ಮಿತಾ ತಮ್ಮ ಚೆನ್ನೈ ನಿವಾಸದಲ್ಲಿ ನಿಧನರಾಗಿದ್ದಾರೆ ಎಂಬ ಆಘಾತಕಾರಿ ಸುದ್ದಿ ತಲುಪಿತು. ಕೇವಲ 35ನೇ ವಯಸ್ಸಿನಲ್ಲಿ ಅವರು ಸಾವಿಗೀಡಾಗಿದ್ದು, ಆ ಅಪೂರ್ಣ ಸಂಭಾಷಣೆಗಳು ಎಂದಿಗೂ ಬಗೆಹರಿಯದ ರಹಸ್ಯವಾಗಿ ಉಳಿದವು. ಬಹುಶಃ ಅಂದು ಸಿಲ್ಕ್ ಸ್ಮಿತಾ ಅವರ ನೋವುಗಳನ್ನು ಕೇಳಿದ್ದರೆ ಆಕೆ ಜೀವಂತವಾಗಿ ಇರುತ್ತಿದ್ದರೇನೋ ಆದರೆ, ವಿಧಿ ಮಾತ್ರ ಅದಕ್ಕೆ ಅವಕಾಶ ನೀಡಲಿಲ್ಲ.
ರವಿಚಂದ್ರನ್ ಅವರು ಶೂಟಿಂಗ್‌ನಲ್ಲಿದ್ದ ಕಾರಣ ಮತ್ತು ಕಳಪೆ ನೆಟ್‌ವರ್ಕ್‌ನಿಂದಾಗಿ ಸ್ಮಿತಾ ಅವರ ಕರೆಗಳು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. 1992ರ 'ಹಳ್ಳಿ ಮೇಷ್ಟ್ರು' ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ಈ ಇಬ್ಬರ ನಡುವೆ ಉತ್ತಮ ಒಡನಾಟವಿತ್ತು. ಆ ಕರೆಯನ್ನು ಕೇವಲ ಸಾಮಾನ್ಯವೆಂದು ಭಾವಿಸಿದ್ದ ರವಿಚಂದ್ರನ್, ಆಕೆಯ ದುರಂತ ಸಾವಿನ ನಂತರ ತಾವು ಆ ದಿನ ಮಾತನಾಡಿದ್ದರೆ ಆ ದುರಂತವನ್ನು ತಪ್ಪಿಸಬಹುದಿತ್ತೇ ಎಂದು ಹಲವು ಬಾರಿ ಆಳವಾದ ಪಶ್ಚಾತಾಪ ಕೂಡ ವ್ಯಕ್ತಪಡಿಸಿದ್ದಾರೆ.
ಆಂಧ್ರಪ್ರದೇಶದ ಕೋವಳ್ಳಿ ಗ್ರಾಮದಲ್ಲಿ ಡಿಸೆಂಬರ್ 2, 1960 ರಂದು ಜನಿಸಿದ ವಡ್ಲಾಪಟಿ ವಿಜಯಲಕ್ಷ್ಮಿ (ಸಿಲ್ಕ್ ಸ್ಮಿತಾ ಅವರ ಮೂಲ ಹೆಸರು) ಅವರ ಬಾಲ್ಯ ಅಷ್ಟು ಸುಲಭವಾಗಿರಲಿಲ್ಲ. ಬಡತನದ ಕಾರಣದಿಂದ ನಾಲ್ಕನೇ ತರಗತಿಗೇ ವಿದ್ಯಾಭ್ಯಾಸ ಮುಕ್ತಾಯಗೊಂಡಿತು. ಕೇವಲ 14ನೇ ವಯಸ್ಸಿನಲ್ಲಿ ಹಿರಿಯ ವ್ಯಕ್ತಿಯೊಬ್ಬರೊಂದಿಗೆ ಮದುವೆಯಾದರೂ, ಪತಿ ಮತ್ತು ಅತ್ತೆಯ ಮನೆಯವರಿಂದ ನಿರಂತರ ಕಿರುಕುಳ ಹಾಗೂ ಹಿಂಸೆಯನ್ನು ಅನುಭವಿಸಿದರು. ಕೇವಲ ಎರಡು ವರ್ಷಗಳಲ್ಲೇ ಆ ನರಕದಿಂದ ಹೊರಬಂದ ಸ್ಮಿತಾ, ಹೇಗಾದರೂ ಮಾಡಿ ಬದುಕಬೇಕೆಂಬ ಹಂಬಲದಿಂದ ಚೆನ್ನೈಗೆ ಬಂದಿಳಿದರು. ಆರಂಭದಲ್ಲಿ ತಾಯಿಯೊಂದಿಗೆ ವಾಸಿಸುತ್ತಾ, ಶೂಟಿಂಗ್ ಸ್ಥಳಗಳಲ್ಲಿ ಟಚ್‌ಅಪ್ ಆರ್ಟಿಸ್ಟ್ ಆಗಿ ಅಂದರೆ ಇತರ ನಟಿಯರ ಮೇಕಪ್ ಸರಿಪಡಿಸುವ ಸಣ್ಣ ಕೆಲಸದಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.
ಮಲಯಾಳಂ ನಿರ್ದೇಶಕ ಆಂಟನಿ ಈಸ್ಟ್‌ಮನ್ ಅವರ 'ಇನಾಯೆ ತೇದಿ' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಅವರಿಗೆ 'ಸ್ಮಿತಾ' ಎಂಬ ಹೊಸ ನಾಮಕರಣವಾಯಿತು. ನಿರ್ದೇಶಕ ವಿನು ಚಕ್ರವರ್ತಿ ಅವರು ಸ್ಮಿತಾ ಅವರಿಗೆ ಇಂಗ್ಲಿಷ್ ಮತ್ತು ನೃತ್ಯವನ್ನು ಕಲಿಸಿ ನಟನೆಯಲ್ಲಿ ಬೆಂಬಲಿಸಿದರು. ತದನಂತರ 'ವಂಡಿಚಕ್ಕರಮ್' ಚಿತ್ರದಲ್ಲಿ ಅವರು ನಿರ್ವಹಿಸಿದ 'ಸಿಲ್ಕ್' ಪಾತ್ರವು ಅಪಾರ ಯಶಸ್ಸು ತಂದುಕೊಟ್ಟಿತು. ಆ ಚಿತ್ರದ ನಂತರ ವಿಜಯಲಕ್ಷ್ಮಿ ಎಂಬ ಹೆಸರು ಸಿಲ್ಕ್ ಸ್ಮಿತಾ ಎಂದು ಬದಲಾಗಿ ತೆರೆಮೇಲೆ ಭಾರಿ ಸಂಚಲನ ಮೂಡಿಸಿತು. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಅಂದಾಜು 450ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಅವರು, ನಿರ್ಮಾಪಕರಿಗೆ ಅದೃಷ್ಟದ ದೇವತೆಯಂತೆ ಕಂಡರು. ಅವರ ಹಾಡುಗಳು ಹಾಗೂ ನೃತ್ಯವೇ ಚಿತ್ರಗಳ ಗೆಲುವಿಗೆ ಭದ್ರ ಬುನಾದಿ ಹಾಕಿತು.
ಜನಪ್ರಿಯತೆಯ ಉತ್ತುಂಗದಲ್ಲಿದ್ದರೂ, ಸಿನಿಮಾಗಳಲ್ಲಿ ಅವರಿಗೆ ಕೇವಲ ಕ್ಯಾಬರೆ ನರ್ತಕಿ ಅಥವಾ ವಾಂಪ್ ಪಾತ್ರಗಳನ್ನಷ್ಟೇ ನೀಡಿದವು. ಬಾಲು ಮಹೇಂದ್ರ ಅವರ 'ಮೂಂಡ್ರಂ ಪಿರಾಯ್' (ಹಿಂದಿಯಲ್ಲಿ 'ಸದ್ಮಾ') ಚಿತ್ರವು ಅವರು ಕೇವಲ ಗ್ಲಾಮರ್ ನಟಿಯಲ್ಲ, ಬದಲಿಗೆ ಅತ್ಯುತ್ತಮ ನಟನೆಯನ್ನು ನೀಡಬಲ್ಲ ಪ್ರತಿಭೆ ಎಂಬುದನ್ನು ತೋರಿಸಿಕೊಟ್ಟಿತು. ಆದರೆ ದುರಾದೃಷ್ಟವಶಾತ್ ಇಂತಹ ವಿಭಿನ್ನ ಪಾತ್ರಗಳು ಅವರಿಗೆ ಸಿಕ್ಕಿದ್ದು ತೀರಾ ಕಡಿಮೆ. ತೆರೆಯ ಹಿಂದೆ ಆರ್ಥಿಕ ಮುಗ್ಗಟ್ಟುಗಳು ಮತ್ತು ವೈಯಕ್ತಿಕ ಬದುಕಿನ ನೋವುಗಳು ಅವರನ್ನು ಕಾಡುತ್ತಲೇ ಇದ್ದವು.
ಅವರ ನಿವಾಸದಲ್ಲಿ ಪತ್ತೆಯಾದ ಡೆತ್ ನೋಟ್ ಅವರ ಅಂತರಾಳದ ಒಂಟಿತನ, ಕಷ್ಟಪಟ್ಟು ದುಡಿದರೂ ಮೋಸ ಹೋಗಿರುವುದು ಮತ್ತು ಕಾಯುತ್ತಿದ್ದ ಪ್ರೀತಿಯಲ್ಲಿ ಎದುರಾದ ವಂಚನೆಯ ಕಥೆಯನ್ನು ಬಿಚ್ಚಿಟ್ಟಿತು. ಡಾ. ರಾಧಾಕೃಷ್ಣನ್ ಅಲಿಯಾಸ್ 'ಬಾಬು' ಎಂಬವರೊಂದಿಗಿನ ಸಂಬಂಧ ಹಾಗೂ ನಂತರದ ನಿರಾಶೆಗಳ ಬಗ್ಗೆಯೂ ಆ ಪತ್ರದಲ್ಲಿ ಉಲ್ಲೇಖವಿತ್ತು. ಇದು ಅವರ ಒಳಮನಸ್ಸಿನ ತೀವ್ರ ವೇದನೆಯನ್ನು ತೋರಿದರೂ, ಸಾವಿಗೆ ಸಂಪೂರ್ಣ ಕಾರಣವೇನು ಎಂಬುದನ್ನು ಎಂದಿಗೂ ಸ್ಪಷ್ಟಪಡಿಸಲಿಲ್ಲ. ಕಾಲಾನಂತರದಲ್ಲಿ ಅವರ ಸಾವು ಆತ್ಮಹತ್ಯೆಯೆಂಬುದು ದೃಢಪಟ್ಟರೂ, ಕೆಲವರು ಇದು ಕೊಲೆ ಇರಬಹುದೆಂಬ ಶಂಕೆಯನ್ನು ವ್ಯಕ್ತಪಡಿಸಿದರು. ಆದರೆ ಯಾವುದೇ ಬಲವಾದ ಸಾಕ್ಷ್ಯಗಳು ಅದಕ್ಕೆ ಸಿಗಲಿಲ್ಲ.
ಸಿಲ್ಕ್ ಸ್ಮಿತಾ ಅವರ ವರ್ಣರಂಜಿತ ಹಾಗೂ ನೋವಿನ ಬದುಕನ್ನು ಆಧರಿಸಿ ನಂತರದ ದಿನಗಳಲ್ಲಿ 'ದಿ ಡರ್ಟಿ ಪಿಕ್ಚರ್' ಸೇರಿದಂತೆ ಹಲವು ಸಿನಿಮಾಗಳು ನಿರ್ಮಾಣವಾದವು. ಆದರೆ ತೆರೆಯ ಮೇಲಿನ ಆ ಗ್ಲಾಮರ್ ತಾರೆಯ ಬಿಂಬದ ಹಿಂದೆ ಇದ್ದ ಬಡತನದ ಬಾಲ್ಯ, ಬಲವಂತದ ಮದುವೆ ಮತ್ತು ಸ್ವಂತ ಕಾಲ ಮೇಲೆ ನಿಲ್ಲಲು ಪಟ್ಟ ಕಷ್ಟಗಳು ಹಲವರಿಗೆ ಮರೆತುಹೋದವು. 'ಸಿಲ್ಕ್' ಆಗಿ ಬದಲಾಗುವ ಮುನ್ನ ಅವಳೂ ಒಬ್ಬ ಸಾಮಾನ್ಯ ಮನುಷ್ಯಳಾಗಿ ಬದುಕು ಕಟ್ಟಿಕೊಳ್ಳಲು ಹೆಣಗಾಡಿದ್ದಳು.
ತಮ್ಮ ಜೀವನದ ಕೊನೆಯ ರಾತ್ರಿಯಲ್ಲಿ ಯಾರೊಂದಿಗೋ ಮನಬಿಚ್ಚಿ ಮಾತನಾಡಲು ಹಂಬಲಿಸಿದ್ದ ಆ ನಟಿಯ ಕೊನೆಯ ಆಸೆ ಈಡೇರಲಿಲ್ಲ. ಆಕೆ ಹೇಳಲು ಹೊರಟಿದ್ದ ಆ ರಹಸ್ಯವೇನು ಎಂಬುದು ಆಕೆಯ ಜೊತೆಜೊತೆಗೇ ಮಣ್ಣಾಯಿತು, ಮತ್ತು ಆ ಪ್ರಶ್ನೆ ಮಾತ್ರ ಎಂದೆಂದಿಗೂ ಸಿನಿರಂಗದ ಇತಿಹಾಸದಲ್ಲಿ ಉಳಿಯಿತು, (ಏಜೆನ್ಸೀಸ್).