Siddu Moolimani Interview -
"ರಂಗಿತರಂಗ', "ವಿಕ್ರಾಂತ್ ರೋಣ' ಸೇರಿ ಕೆಲ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ, ಕ್ರಮೇಣ "ಅಜ್ಞಾತವಾಸಿ', "ಲವ್ ಯೂ ಮುದ್ದು', "ಸೀಟ್ ಎಡ್ಜ್' ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಿರುವ ನಟ ಸಿದ್ದು ಮೂಲಿಮನಿ ಇದೀಗ ಕಾಲಿವುಡ್ಗೆ ಹಾರಿದ್ದಾರೆ. ಅವರು ನಟಿಸಿರುವ "ಕೋಲ್ಡ್ ಕಾಲ್' ಎಂಬ ತಮಿಳು ಸಿನಿಮಾ ಇದೇ 18ರಂದು ರಿಲೀಸ್ ಆಗಲಿದೆ. ಕಾಲಿವುಡ್ ಡೆಬ್ಯೂ ಬಗ್ಗೆ ಸಿದ್ದು, ""ಕೋಲ್ಡ್ ಕಾಲ್' ನಿರ್ದೇಶಕ ತಂಬಿದುರೈ ಅವರ "ಇಂಟರ್ಪ್ರೀಟರ್' ಎಂಬ ಕಿರುಚಿತ್ರದಲ್ಲಿ ಕಿವುಡ, ಮೂಗನ ಪಾತ್ರದಲ್ಲಿ ನಟಿಸಿದ್ದೆ. ಆಗಲೇ ಅವರು ನಾನು ಸಿನಿಮಾ ನಿರ್ದೇಶಿಸಿದರೆ ಖಂಡಿತ ಒಟ್ಟಿಗೆ ಕೆಲಸ ಮಾಡೋಣ ಎಂದಿದ್ದರು. ಅದರಂತೆ "ಕೋಲ್ಡ್ ಕಾಲ್'ನಲ್ಲಿ ಅವಕಾಶ ನೀಡಿದರು. ಇದು ಓದು ಮುಗಿಸಿ, ಕೆಲಸಕ್ಕಾಗಿ ಅಲೆದು ಕೊನೆಗೆ ಸೇಲ್ಸ್ಮನ್ಗಳಾಗುವ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ನಾಲ್ವರು ಹುಡುಗರ ಕಥೆ. ಬೆಂಗಳೂರಿನಲ್ಲಿ ಕೆಲಸ ಮಾಡುವ ಅವರ ಜೀವನ, ಹೋರಾಟದ ಸುತ್ತ ಕಥೆ ಸಾಗುತ್ತದೆ. ನಾನಿಲ್ಲಿ ಗೌತಮ್ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಚಿತ್ರರಂಗಕ್ಕೆ ಬರುವ ಮುನ್ನ ಐಪಿಎಲ್ನಲ್ಲಿ ನೂಡಲ್ಸ್, ಚಾಕಲೇಟ್ಸ್ ಮಾರಿದ್ದೇನೆ. ಕಂಡಕ್ಟರ್ ಆಗಿಯೂ ಕೆಲಸ ಮಾಡಿದ್ದೇನೆ. ಅಂದಿನ ಅನುಭವಗಳು ಈ ಸಿನಿಮಾ ವೇಳೆ ನನಗೆ ತುಂಬ ಉಪಯೋಗಕ್ಕೆ ಬಂತು' ಎಂದು ಅನುಭವ ಹಂಚಿಕೊಳ್ಳುತ್ತಾರೆ.
ಭಾವನೆ ಜತೆ ಭಾಷೆಯೂ ಮುಖ್ಯ
"ಜನರೊಂದಿಗೆ ಕನೆಕ್ಟ್ ಆಗಲು ಭಾವನೆಯ ಜತೆಗೆ ಭಾಷೆ ಕೂಡ ಮುಖ್ಯ' ಎನ್ನುವ ಸಿದ್ದು, ತಮಿಳು ಕಲಿಯಬೇಕು ಅಂದುಕೊಂಡಿದ್ದರಂತೆ. "ತಮಿಳು ಸಿನಿಮಾ ನೋಡುತ್ತೇನೆ, ಹಾಡುಗಳನ್ನು ಕೇಳುತ್ತೇನೆ. ಶೂಟಿಂಗ್ಗೂ ಮುನ್ನ ವರ್ಕ್ಶಾಪ್ ಮಾಡಿದೆವು. ಚಿತ್ರೀಕರಣದ ಸಮಯದಲ್ಲಿ ಸ್ವಲ್ಪ ತಮಿಳು ಕಲಿತೆ. ಇವತ್ತು ಕಲೆಗೆ, ಕಲಾವಿದರಿಗೆ ಭಾಷೆ, ರಾಜ್ಯಗಳ ಗಡಿ ಇಲ್ಲ. ಹಾಗೇ ಸಿನಿಮಾ ಇವತ್ತು ಭಾಷೆ, ಗಡಿ, ಸಂಸತಿ ಎಲ್ಲವನ್ನು ದಾಟಿ ಜನರನ್ನು ಬೆಸೆಯುತ್ತಿದೆ' ಎನ್ನುತ್ತಾರೆ.
ಐದು ಕನ್ನಡ ಚಿತ್ರಗಳು
ಭಿನ್ನ, ವಿಭಿನ್ನ ಪಾತ್ರಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಸಿದ್ದು, ಸದ್ಯ ಕನ್ನಡದ ಐದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. "ಮಲೆನಾಡಿನಲ್ಲಿ ನಡೆದ ನೈಜ ಟನೆಯಾಧಾರಿತ "ಗೊಂಬೆ ರಾಮ' ಚಿತ್ರದ ಶೂಟಿಂಗ್ ಮುಗಿದಿದೆ. ಇನ್ನೊಂದು ಎಮೋಷನಲ್ ಕೆಮ್ ಥ್ರಿಲ್ಲರ್ನಲ್ಲಿ ಗಂಭೀರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಮತ್ತೊಂದು ಉತ್ತರ ಕರ್ನಾಟಕದ ಹಳ್ಳಿಯ ಸೊಗಡಿನ ಕಥೆಯ ಡಬ್ಬಿಂಗ್ ನಡೆಯುತ್ತಿದೆ. ನಾನು ಬೆಳಗಾವಿಯವನು. ಆದರೆ, ಅಲ್ಲಿನ ಸೊಗಡಿನ ಚಿತ್ರದಲ್ಲಿ ನಟಿಸಿರಲಿಲ್ಲ. ಆ ಆಸೆ ಇನ್ನೂ ಹೆಸರಿಡದ ಈ ಚಿತ್ರದ ಮೂಲಕ ನೆರವೇರಿದೆ. ಹಾಗೇ "ಉಗ್ರಾಣ' ಎಂಬ ದ್ವಿಭಾಷಾ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದೇನೆ. ಜತೆಗೆ ಸೈಕಲಾಜಿಕಲ್ ಡ್ರಾಮ ಹಾಗೂ ಸೈಬರ್ ಕೆಮ್ ಜಾನರ್ ಕಥೆಗಳಲ್ಲೂ ನಟಿಸುತ್ತಿದ್ದೇನೆ. ಚಿತ್ರದಿಂದ ಚಿತ್ರಕ್ಕೆ, ಪಾತ್ರದಿಂದ ಪಾತ್ರಕ್ಕೆ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ನಿರ್ದೇಶಕರಲ್ಲಿ ಸಿದ್ದು ಈ ಪಾತ್ರ ಮಾಡಬಲ್ಲ ಎಂಬ ಆತ್ಮವಿಶ್ವಾಸ ಮೂಡಿದೆ. ಹೀಗಾಗಿ ಅಂಥದ್ದೇ ಕಥೆಗಳು ಬರುತ್ತಿವೆ. ಆದರೆ, ಒಳ್ಳೆ ಕಥೆ ಇರುವವರ ಬಳಿ ನಿರ್ಮಾಪಕರಿಲ್ಲ, ನಿರ್ಮಾಪಕರು ಇರುವ ನಿರ್ದೇಶಕರ ಬಳಿ ಸರಿಯಾದ ಕಥೆ ಇರಲ್ಲ. ಹೀಗಾಗಿ ನಾನು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ' ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.