ayogya 2 review 
ಸ್ಯಾಂಡಲ್‌ವುಡ್

Ayogya 2 Review - ನವರಸಗಳನ್ನೂ ಬಡಿಸುವ ಮಾರಗೌಡನಹಳ್ಳಿಯ ಮಾಯಗಾರ

Ayogya 2 Review -
ಚಿತ್ರ: ಅಯೋಗ್ಯ 2
ನಿರ್ದೇಶನ: ಮಹೇಶ್​ ಕುಮಾರ್​
ನಿರ್ಮಾಣ: ಎಸ್​ವಿಸಿ ಫಿಲಂಸ್​
ತಾರಾಗಣ: ಸತೀಶ್​ ನೀನಾಸಂ, ರಚಿತಾ ರಾಮ್​, ರವಿಶಂಕರ್​, ಅರುಣ ಬಾಲರಾಜ್​, ಗಿರಿ ಶಿವಣ್ಣ, ಶಿವರಾಜ್​ ಕೆಆರ್​ ಪೇಟೆ, ತಬಲಾ ನಾಣಿ ಮತ್ತಿತರರು.
ಮಾರಗೌಡನಹಳ್ಳಿ ಪಂಚಾಯ್ತಿ ಚುನಾವಣೆಯಲ್ಲಿ ಕೇವಲ ಒಂದು ವೋಟಿನಿಂದ ಗೆದ್ದು, ಸದಸ್ಯನಾಗುವ ಸಿದ್ದೇಗೌಡ (ಸತೀಶ್​), ಮನದರಸಿ ನಂದಿನಿಳನ್ನೂ (ರಚಿತಾ) ವರಿಸುವ ಮೂಲಕ "ಅಯೋಗ್ಯ' ಕಥೆ ಅಂತ್ಯವಾಗಿತ್ತು. ಅದರ ಮಾರನೆಯ ದಿನದಿಂದಲೇ "ಅಯೋಗ್ಯ 2' ತೆರೆದುಕೊಳ್ಳುತ್ತದೆ. ಹಾಗಂತ ಮೊದಲ ಭಾಗ ನೋಡದವರಿಗೆ ಈ ಸೀಕ್ವೆಲ್​ ಅರ್ಥವಾಗುವುದಿಲ್ಲ ಅಂತಲ್ಲ. ಮೊದಲ ಕಥೆಯನ್ನು ಮತ್ತೊಮ್ಮೆ ಸಂಪ್ತವಾಗಿ ಹೇಳಿಕೊಂಡೇ ದ್ವೀತಿಯ ಭಾಗಕ್ಕೆ ಹೊರಳುವ ಕಾರಣ, ಗೊಂದಲವಿಲ್ಲ.
ಮದುವೆ ಸಂಭ್ರಮದ ನಡುವೆಯೇ ನಂದಿನಿಗೆ ಸರ್ಕಾರಿ ಕೆಲಸ ಸಿಗುತ್ತದೆ. ಆದರೆ, ಅತ್ತೆ ಭಾಗ್ಯಮ್ಮಗೆ (ಅರುಣ) ಸೊಸೆ ಮೊಮ್ಮಕ್ಕಳನ್ನು ಯಾವಾಗ ಕೊಡುತ್ತಾಳೋ ಎಂಬ ಕಾತುರ. ಅದರ ನಡುವೆಯೇ ತಾನೂ ಕೆಲಸ ಮಾಡದೇ, ಅಮ್ಮನ ದುಡಿಮೆಯನ್ನೇ ಅವಲಂಬಿಸಿರುವ ಸಿದ್ದನ ಮೇಲೆ ಬೇಸರಗೊಂಡು ನಂದಿನಿ, ಮದುವೆಯಾದ ಮೂರೇ ದಿನಕ್ಕೆ "ಸಂತಾನಕ್ಕಿಂತ ವರಮಾನ ಮುಖ್ಯ' ಅಂತ ಮನೆ ತೊರೆದು, ಕೆಲಸಕ್ಕೆ ಸೇರುತ್ತಾಳೆ. ಮತ್ತೊಂದೆಡೆ ಬಚ್ಚೇಗೌಡ (ರವಿಶಂಕರ್​) ಸಿದ್ದನ ಮೇಲೆ ಸೇಡು ತೀರಿಸಿಕೊಳ್ಳಲು, ಗ್ರಾಮ ಪಂಚಾಯ್ತಿ ಸದಸ್ಯನಾದರೇನು? ಅಧ್ಯಕ್ಷನಾಗಲು ಬಿಡಲ್ಲ ಅಂತ ಪಣ ತೊಡುತ್ತಾನೆ. ಆದರೆ, ಸಿದ್ದ ಬೆಣ್ಣೆ (ಗಿರಿ), ಮಟನ್​ (ಶಿವರಾಜ್​) ಜತೆ ಸೇರಿ ಊರಲ್ಲಿ ಜಿಮ್​ ತೆರೆದು, ಸದಸ್ಯರನ್ನು ಗೋವಾಗೆ ಕರೆದೊಯ್ದು ಅಧ್ಯಕ್ಷನಾಗಲು ಪ್ರಯತ್ನ ಮುಂದುವರಿಸುತ್ತಾನೆ. ಅದೇ ಸಮಯದಲ್ಲಿ ಊರ ಮಧ್ಯೆ ಹೈವೇ ನಿರ್ಮಿಸಲು, ಸರ್ವೇಗೆಂದು ಅಧಿಕಾರಿಗಳು ಬರುತ್ತಾರೆ. ಹೀಗೆ ಒಂದರ ಹಿಂದೊಂದರಂತೆ ಸಿದ್ದನಿಗೆ ವಯಕ್ತಿಕ ಸಮಸ್ಯೆಗಳ ಜತೆಗೆ ಊರ ಸಮಸ್ಯೆಗಳೂ ಹೆಚ್ಚಾಗುತ್ತವೆ. ಅದೆಲ್ಲವನ್ನು ಆತ ಹೇಗೆ ಬಗೆಹರಿಸುತ್ತಾನೆ? "ಅಯೋಗ್ಯ 2' ನೋಡಿ.
ಸತೀಶ್​ ನೀನಾಸಂ ಸೀಕ್ವೆಲ್​ನಲ್ಲಿ ಮತ್ತಷ್ಟು ಮಾಸ್​ ಆಗಿದ್ದಾರೆ. ೈಟ್ಸ್​ ಜತೆಗೆ ಡಾನ್ಸ್​ನಲ್ಲೂ ಮಿಂಚಿದ್ದಾರೆ. ರಚಿತಾ ಎಂದಿನಂತೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸತೀಶ್​ ಜತೆ ಗಿರಿ, ಶಿವರಾಜ್​ ಒಂದೆಡೆ, ರವಿಶಂಕರ್​ ಮತ್ತು ತಬಲಾ ನಾಣಿ ಮತ್ತೊಂದೆಡೆ ಎರಡು ಟೀಮ್​ಗಳ ನಡುವಿನ ಜುಗಲ್​ಬಂದಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಸಾಧು ಕೋಕಿಲ ಮತ್ತು ಗಿಲ್ಲಿ ನಟ ಕೂಡ ಕಾಮಿಡಿ ಕಿಕ್​ ನೀಡಿದ್ದಾರೆ. ನಿರ್ದೇಶಕ ಮಹೇಶ್​ ಎರಡೂವರೆ ತಾಸಿನ ಕಥೆಯನ್ನು ಬೋರ್​ ಆಗದಂತೆ ನೋಡಿಸಿಕೊಂಡು ಹೋಗುತ್ತಾರೆ. ಕ್ಲೆಮ್ಯಾಕ್ಸ್​ ಟ್ವಿಸ್ಟ್​ ಪ್ರೇಕ್ಷಕರಿಗೆ ಹೊಸ ಕಿಕ್​ ಕೊಡುತ್ತದೆ. ಜತೆಗೆ ಹೊಸ ಹೊಸ ಪ್ರಶ್ನೆಗಳೊಂದಿಗೆ ಸೀಕ್ವೆಲ್​ ಮುಗಿದು, ಮುಂದುವರಿಯುವ ಸೂಚನೆ ನೀಡುತ್ತದೆ!