ಮಾರ್ಕ್​ 
ಸ್ಯಾಂಡಲ್‌ವುಡ್

Sanvi Sudeep - ಮುಂದಿನ ವರ್ಷ ತೆರೆ ಮುಂದೆ ಬರಲಿದ್ದಾರೆ ಕಿಚ್ಚನ ಪುತ್ರಿ ಸಾನ್ವಿ

ಪ್ರಮುಖ ಮುಖ್ಯಾಂಶಗಳು

  • "ಜಿಮ್ಮಿ' ಚಿತ್ರದ ಟೀಸರ್​ ಮತ್ತು ತೆಲುಗಿನ "ಹಿಟ್​ 3' ಟ್ರೇಲರ್​ನಲ್ಲಿ ಬಿಟ್​ಗಳನ್ನು ಹಾಡಿದ್ದರು ಸಾನ್ವಿ ಸುದೀಪ್​
  • ಮಾರ್ಕ್​ ಚಿತ್ರದ ಮಸ್ತ್ ಮಲೈಕಾ ಮೂಲಕ ಗಾಯಕಿಯಾಗಿ ಪದಾರ್ಪಣೆ
  • ಮುಂದಿನ ವರ್ಷ ಕ್ಯಾಮರಾ ಮುಂದೆ ಬರಲಿದ್ದಾರೆ ಕಿಚ್ಚ ಸುದೀಪ್​ ಪುತ್ರಿ
  • ಏಕಲವ್ಯಳಂತೆ ತಾವೇ ಖುದ್ದು ಗಾಯನ ಕಲಿತಿರುವ ಸಾನ್ವಿ ಸುದೀಪ್​
Sanvi Sudeep - ಕಿಚ್ಚ ಸುದೀಪ್​ ನಾಯಕನಾಗಿರುವ "ಮಾರ್ಕ್​' ಹಲವು ವಿಶೇಷತೆಗಳಿಂದ ಕೂಡಿದೆ. "ಮ್ಯಾಕ್ಸ್​' ಯಶಸ್ಸಿನ ಬಳಿಕ ಸುದೀಪ್​ ಮತ್ತು ನಿರ್ದೇಶಕ ವಿಜಯ್​ ಕಾರ್ತಿಕೇಯ ಕಾಂಬಿನೇಷನ್​ನಲ್ಲಿ ಬರುತ್ತಿರುವುದು ಒಂದು ಕಾರಣವಾದರೆ ಮಲಯಾಳಂ ನಟ ಟಾಮ್​ ಶೈನ್​ ಚಾಕೊ, ತೆಲುಗಿನ ನವೀನ್​ ಚಂದ್ರ, ತಮಿಳಿನ ಯೋಗಿ ಬಾಬು, ಗುರು ಸೋಮಸುಂದರಂ ಮತ್ತು ದೀಪ್ಶಿಕಾ ಸೇರಿ ಕನ್ನಡದ ಪ್ರತಾಪ್​ ನಾರಾಯಣ್​, ರೋಷಿನಿ ಪ್ರಕಾಶ್​, ಅರ್ಚನಾ ಕೊಟ್ಟಿಗೆ ಸೇರಿ ಬೇರೆ ಬೇರೆ ಚಿತ್ರರಂಗಗಳ ಹಲವು ಕಲಾವಿದರು ತೆರೆ ಹಂಚಿಕೊಂಡಿರುವುದು ಮತ್ತೊಂದು ಕಾರಣ. ಈಗಾಗಲೇ ಚಿತ್ರದ "ಸೈಕೋ ಸೈತಾನ್​' ವೈರಲ್​ ಆಗಿದ್ದು, ಇತ್ತೀಚೆಗಷ್ಟೆ "ಮಸ್ತ್​ ಮಲೈಕಾ' ರಿಲೀಸ್​ ಆಗಿದೆ.
ಅಜನೀಷ್​ ಲೋಕನಾಥ್​ ಸಂಗೀತ, ಅನೂಪ್​ ಭಂಡಾರಿ ಸಾಹಿತ್ಯವಿರುವ ಈ ಹಾಡಿಗೆ ನಕಾಶ್​ ಅಜೀಜ್​ ಜತೆ ಕಿಚ್ಚ ಸುದೀಪ್​ ಪುತ್ರಿ ಸಾನ್ವಿ ಧ್ವನಿಯಾಗಿರುವುದು ವಿಶೇಷ. "ಜಿಮ್ಮಿ' ಚಿತ್ರದ ಟೀಸರ್​ ಮತ್ತು ತೆಲುಗಿನ "ಹಿಟ್​ 3' ಟ್ರೇಲರ್​ನಲ್ಲಿ ಬಿಟ್​ಗಳನ್ನು ಹಾಡಿದ್ದ ಸಾನ್ವಿ, ವಿಜಯವಾಣಿ ಜತೆ ಚೊಚ್ಚಲ ಹಾಡಿನ ಅನುಭವ ಬಿಚ್ಚಿಟ್ಟಿದ್ದಾರೆ. "ಅಜನೀಷ್​ ಸರ್​ ಸಂಗೀತ, ಅಪ್ಪನ ಸಿನಿಮಾದಲ್ಲಿ ಒಂದು ಇಡೀ ಹಾಡನ್ನು ನಾನು ಹಾಡಿದ್ದೇನೆ ಅನ್ನೋದನ್ನ ನನಗೇ ನಂಬಲಾಗುತ್ತಿಲ್ಲ. ತುಂಬ ಎಕ್ಸೈಟ್​ ಆಗಿದ್ದೇನೆ. ಅಜನೀಷ್​ ಸರ್​ ನನ್ನಿಂದ ಹಾಡಿಸಬೇಕು ಅಂತ ತುಂಬ ದಿನಗಳಿಂದ ಅಂದುಕೊಂಡಿದ್ದರು. "ಮಸ್ತ್​ ಮಲೈಕಾ' ಟ್ಯೂನ್​ ಕೇಳಿ ಅಪ್ಪ ನನ್ನಿಂದ ಹಾಡಿಸಬಹುದಾ ಎಂದು ಕೇಳಿದರಂತೆ. ಕನ್ನಡದಲ್ಲಿ ಮಾತ್ರ ನಾನು ಹಾಡಿದ್ದೇನೆ. ಇದುವರೆಗೆ ಇಂಗ್ಲೀಷ್​ ಹಾಡುಗಳನ್ನಷ್ಟೇ ಹೆಚ್ಚು ಹಾಡುತ್ತಿದ್ದೆ. ಮೊದಲ ಬಾರಿ ರೆಕಾರ್ಡಿಂಗ್​ ಸ್ಟುಡಿಯೋಗೆ ಹೋದಾಗ ಮೊದಲ ಬಾರಿ ಕನ್ನಡದಲ್ಲಿ ಹಾಡುತ್ತಿದ್ದೇನೆ ಅಂತ ಸ್ವಲ್ಪ ನರ್ವಸ್​ ಆಗಿದ್ದೆ. ಇನ್ನು ಮುಂದೆ ಹೆಚ್ಚಿನ ಹಾಡುಗಳನ್ನು ಕನ್ನಡದಲ್ಲಿ ಹಾಡಬೇಕು ಅಂತಂದುಕೊಂಡಿದ್ದೇನೆ. ಹಾಡಿನ ಜತೆಗೆ ನನ್ನ ಗಾಯನಕ್ಕೂ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ. ಹಾಡು ಭಾರತದಲ್ಲೇ ಏಳನೇ ಸ್ಥಾನದಲ್ಲಿ ಟ್ರೆಂಡಿಂಗ್​ನಲ್ಲಿದೆ. ಅಪ್ಪ ಕೂಡ ತುಂಬ ಖುಷಿಯಾಗಿದ್ದಾರೆ. ಹಾಡು ಬಿಡುಗಡೆಯಾದಾಗ ಲೂಪ್​ನಲ್ಲಿಟ್ಟು ಹಲವಾರು ಬಾರಿ ಹಾಡನ್ನು ಕೇಳಿ ಎಂಜಾಯ್​ ಮಾಡಿದರು' ಎಂದು ಸಂತಸ ಹಂಚಿಕೊಳ್ಳುತ್ತಾರೆ ಸಾನ್ವಿ.

ತಾನೇ ಟೀಚರ್​, ತಾನೇ ಸ್ಟೂಡೆಂಟ್​!

ಅಂದಹಾಗೆ ಸಾನ್ವಿ ಯಾವುದೇ ಶಿಕ್ಷಕರ ಬಳಿ ಸಂಗೀತ ಕಲಿತಿಲ್ಲ. ಬದಲಾಗಿ ಏಕಲವ್ಯನ ರೀತಿ ತಾವೇ ಕಲಿತಿದ್ದಾರೆ. ವಿಶೇಷ ಅಂದರೆ ಈಗಾಗಲೇ ಹೈದರಾಬಾದ್​ನಲ್ಲಿ ಮೂರು ಹಾಗೂ ಬೆಂಗಳೂರಿನಲ್ಲಿ ಒಂದು ಲೈವ್​ ಸಂಗೀತ ಕಾರ್ಯಕ್ರಮ ಕೊಟ್ಟು ಸೈ ಎನಿಸಿಕೊಂಡಿದ್ದಾರೆ. "ನನಗೆ ಬಾಲ್ಯದಿಂದಲೂ ಸಂಗೀತದ ಬಗ್ಗೆ ತುಂಬ ಒಲವು. ನಾನೇ ಸ್ವಯಂ ಕಲಿಯತೊಡಗಿದೆ. ಮೊದಲೆಲ್ಲಾ ಹಾಡುವಾಗ ಆಡಿಕೊಳ್ಳುತ್ತಿದ್ದರು. ಆ ಬಳಿಕ ಸಂಗೀತವನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡು ಕಲಿಯತೊಡಗಿದೆ. ಈಗಲೂ ಪ್ರ್ಯಾಕ್ಟೀಸ್​ ಮಾಡುತ್ತೇನೆ. ನನ್ನ ಅಭಿಪ್ರಾಯ ಸರಿ ಇರಬಹುದು ಅಥವಾ ತಪ್ಪೂ ಇರಬಹುದು. ಆದರೆ, ಟೀಚರ್​ ಬಳಿ ಸಂಗೀತ ಕಲಿಯಲು ನನಗೆ ಇಷ್ಟವಿರಲಿಲ್ಲ. ಏನೇ ಕಲಿತರೂ ನಾನೇ ಕಲಿಯಬೇಕು ಅಂತನೇ ಅಂದುಕೊಂಡಿದ್ದೆ. ಗಾಯನದ ಜತೆಗೆ ಪಿಯಾನೋ ಮತ್ತು ಗಿಟಾರ್​ ಕೂಡ ನಾನೇ ಕಲಿಯುತ್ತಿದ್ದೇನೆ.

ತೆರೆ ಮುಂದೆ ಬರಲು ಸಿದ್ಧತೆ!

"ಮಸ್ತ್​ ಮಲೈಕಾ' ಬಿಡುಗಡೆ ಬೆನ್ನಲ್ಲೇ ಸಾನ್ವಿ ಹಾಡಿರುವ ಎರಡನೇ ಸಾಂಗ್​ ಬಿಡುಗಡೆಗೆ ಸಿದ್ಧತೆ ನಡೆದಿದೆ. ಅಣ್ಣ ಸಂಚಿತ್​ ಸಂಜೀವ್​ ನಾಯಕನಾಗಿರುವ "ಮ್ಯಾಂಗೋ ಪಚ್ಚ' ಚಿತ್ರದ ರೊಮ್ಯಾಂಟಿಕ್​ ಟ್ರಾ$್ಯಕ್​ಗೆ ಸಾನ್ವಿ ಧ್ವನಿಯಾಗಿದ್ದಾರೆ. "ಚರಣ್​ ರಾಜ್​ ಸರ್​ ಸಂಗೀತದಲ್ಲಿ ಹಾಡು ತುಂಬ ಚೆನ್ನಾಗಿ ಮೂಡಿಬಂದಿದೆ. ಶ್ರೀದಲ್ಲಿಯೇ ಆ ಸಾಂಗ್​ ರಿಲೀಸ್​ ಆಗಲಿದೆ. ಅದಲ್ಲದೇ ಸಂಗೀತ ನಿರ್ದೇಶಕ ಥಮನ್​ ಸರ್​ ಜತೆ ಹಲವು ತೆಲುಗು ಚಿತ್ರಗಳ ಹಿನ್ನೆಲೆ ಸಂಗೀತದಲ್ಲಿ ಕೆಲಸ ಮಾಡಿದ್ದೇನೆ. ಈಗ ತೆರೆಯ ಮುಂದೆ ಬರುವ ಪ್ಲಾ$್ಯನ್​ ಕೂಡ ಇದೆ ಜತೆಗೆ ಇನ್ನಷ್ಟು ಹೆಚ್ಚು ಕೆಲಸ ಮಾಡುವ ಇಂಗಿತವಿದೆ' ಎನ್ನುವ ಸಾನ್ವಿ, ಸದ್ಯ ಮ್ಯೂಸಿಕ್​ ವಿಡಿಯೋ ಆಲ್ಬಂನಲ್ಲಿ ಮಿಂಚಲು ರೆಡಿಯಾಗುತ್ತಿದ್ದಾರೆ.