Sanvi Sudeep slams trolls
Sanvi Sudeep slams trolls: ನಟ ಸುದೀಪ್ ಅವರ ತಾಯಿ ಮೃತಪಟ್ಟಾಗ ಅನಗತ್ಯ ವಿವಾದ, ಪ್ರೈವೆಸಿ ಇಲ್ಲದ ಬಗ್ಗೆ ಮಾತನಾಡಿ, ಟ್ರೋಲರ್ಸ್ಗೆ, ಪಾಪಾರಾಜಿಗಳ ವಿರುದ್ಧ ಸಾನ್ವಿ ಕ್ಲಾಸ್ ತೆಗೆದುಕೊಂಡಿದ್ದರು. ಸದ್ಯ ಅವರ ವೈಯಕ್ತಿಕ ನಿರ್ಧಾರ ಪ್ರಶ್ನಿಸಿ, ಕೀಳಾಗಿ ಮಾತನಾಡಿದವರ ಕಿಡಿಕೇಡಿಗಳ ವಿರುದ್ಧ ಕಿಡಿಕಾರಿದ್ದಾರೆ. ಸಾನ್ವಿ ಅವರ ಬೆನ್ನಿನ ಮೇಲಿನ ಗಣೇಶನ ಟ್ಯಾಟೂ ಹಾಗೂ, ಸುದೀಪ್ ಅವರನ್ನು 'ಓಲ್ಡ್ ಮ್ಯಾನ್' ಎಂದು ಕರೆದ ರೀತಿಗೆ ಟ್ರೋಲ್ ಮಾಡುತ್ತಿದ್ದವರಿಗೆ ಸಾನ್ವಿ ಇನ್‌ಸ್ಟಾಗ್ರಾಮ್‌ನಲ್ಲಿ ತಕ್ಕ ಶಾಸ್ತಿ ಮಾಡಿದ್ದಾರೆ.
ಮಾರ್ಕ್ನಲ್ಲಿ ಮಸ್ತ್ ಮಲೈಕಾ ಹಾಡು, ಮ್ಯಾಂಗೋ ಪಚ್ಚಾ ಸಿನಿಮಾದಲ್ಲಿನ ಹಾಡಿನ ಮೂಲಕ ಸ್ಯಾಂಡಲ್ವುಡ್ಗೆ ಗಾಯಕಿಯಾಗಿ ಎಂಟ್ರಿ ಕೊಟ್ಟಿರುವ ಸಾನ್ವಿ ಸುದೀಪ, ತಂದೆಯಂತೆ ನೇರ-ದಿಟ್ಟ ಹುಡುಗಿ. ಟ್ರೋಲರ್ಸ್ಗಳಿಂದ ಇಲ್ಲಸಲ್ಲದ ಸುಳ್ಳು-ಸುದ್ದಿ ಹಬ್ಬುತ್ತಿದ್ದರೆ ಅದನ್ನು ನೋಡುತ್ತಾ ಕೂರುವಂತವರಲ್ಲ. ಅದಕ್ಕೆ ಸಾಕ್ಷಿ ಎಂದರೆ, ಸುದೀಪ್ ಅವರ ತಾಯಿ ಮೃತಪಟ್ಟಾಗ ಅವರು ಹಂಚಿಕೊಂಡಿದ್ದ ಪೋಸ್ಟ್. ಸದ್ಯ ಅವರ ವಿರುದ್ಧ ಟ್ರೋಲ್ ಮಾಡಿದವರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕೆಲಸ ಹುಡ್ಕೊಳ್ಳಿ
ಇತ್ತೀಚೆಗೆ ಸಾನ್ವಿ ಅವರು, ಯಾವಾಗಲೂ ನನ್ನ ಓಲ್ಡ್ ಮ್ಯಾನ್ ಎಂದು ಸುದೀಪ್ ಅವರೊಂದಿಗಿನ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಇದರ ವಿರುದ್ಧ ಕೆಲವರು ತಗಾದೆ ತೆಗೆದಿದ್ದರು. ಈ ವಿಚಾರ ಮಾತನಾಡಿದ ಸಾನ್ವಿ,
'ನಿಮಗೆ ನನ್ನನ್ನು ದ್ವೇಷಿಸಲು ಒಂದು ಸಣ್ಣ ಕಾರಣ ಬೇಕಾಗುತ್ತದೆ. ನೀವು ಅವರ ಅಭಿಮಾನಿಗಳು ಎನ್ನುವುದು ನನಗೆ ಅರ್ಥವಾಗುತ್ತದೆ. ಆದರೆ, ನಾನು ಅವರ ಮಗಳು ನನಗೆ ಅವರು ಎಂದಿಗೂ ನನ್ನ ಓಲ್ಡ್ ಮ್ಯಾನ್. ದಯವಿಟ್ಟು ಇಂತಹ ವಿಚಾರಕ್ಕೆ ಕಾಮೆಂಟ್ ಮಾಡುತ್ತಾ ಸಮಯ ವ್ಯರ್ಥ ಮಾಡಬೇಡಿ. ಸಾಧ್ಯವಾದ್ರೆ ಕೆಲಸ ಹುಡ್ಕೊಳ್ಳಿ' ಎಂದು ಗುಡುಗಿದ್ದಾರೆ.
ಎಲ್ಲದಕ್ಕೂ ನಿಮ್ಮ ಅನುಮತಿ ಪಡೆಯಬೇಕಾ?
ಸಾನ್ವಿ ಅವರು ಇತ್ತೀಚೆಗೆ ಅವರ ಬೆನ್ನ ಮೇಲೆ ಗಣೇಶನ ಟ್ಯಾಟೂ ಹಾಕಿಸಿದ್ದರು. ಈ ವಿರುದ್ಧ ಅನೇಕ ಮಂದಿ ಕಿಡಿಕಾರಿದ್ದರು. ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನು ಉಲ್ಲೇಖಿಸಿದ ಅವರು,
'ನನ್ನ ದೇಹದ ಮೇಲೆ ನಾನು ಟ್ಯಾಟೂ ಹಾಕಿಸಿಕೊಳ್ಳಲು ನಿಮ್ಮ ಅನುಮತಿ ಪಡೆದುಕೊಳ್ಳಬೇಕಾ?. ನಾನು ಯಾವುದೇ ಕೆಲಸ ಆರಂಭಿಸುವ ಮೊದಲು ನಿಮ್ಮನ್ನು ಕನ್ಸಲ್ಟ್ ಮಾಡ್ಬೇಕಾ. ಒಬ್ಬ ವ್ಯಕ್ತಿಯನ್ನು ಟ್ರೋಲ್ ಮಾಡಲು ಜನರು ಇಷ್ಟೊಂದು ಸಮಯ ವ್ಯರ್ಥಮಾಡುತ್ತಾರ ಎನ್ನುವ ಬಗ್ಗೆ ನನಗೆ ಅಸಮಾಧಾನವಿದೆ' ಎಂದು ಸಾನ್ವಿ ಹೇಳಿದ್ದಾರೆ.
ಹೌದು ನಾನೇನೂ ಸಾಧಿಸಿಲ್ಲ
'ಇಲ್ಲಿಯವರೆಗೂ ನಾನ್ಯಾವ ಸಾಧನೆ ಮಾಡಿಲ್ಲ ಎನ್ನುವುದನ್ನು ನೀವು ಹೇಳುತ್ತಿದ್ದೀರಿ. ಹೌದು ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ನಿಮ್ಮ ಹಾಗೇ ಯಾರ್ಯಾರದ್ದೋ ಹೆಸರು ಬಳಕೆ ಮಾಡಿ ಪ್ರೊಫೈಲ್ ಕ್ರಿಯೇಟ್ ಮಾಡಿ, ಕೆಟ್ಟ ಕಾಮೆಂಟ್ಗಳನ್ನಂತೂ ನಾನು ಮಾಡೋದಿಲ್ಲ. ನಾನು ಪ್ರಾಮಾಣಿಕಳಾಗಿದ್ದೇನೆ' ಎಂದರು
ನಮಗೆ ದುಃಖಿಸಲು ಖಾಸಗಿತನವಿಲ್ಲ
'ನೀವು ಎಲ್ಲೋ ಸ್ಕ್ರೀನ್ಗಳ ಹಿಂದೆ ಕುಳಿತು ಟ್ರೋಲ್ ಮಾಡುವ ಹೇಡಿಗಳು. ನಾವು ನಮ್ಮ ಜೀವನದ ವೈಯಕ್ತಿಕ ವಿಚಾರ ಹೇಳಿಕೊಂಡಾಗ ನಿಮಗೆ ಸಿಟ್ಟು ಬರುತ್ತದೆ. ನಮಗೆ ಅಪ್ಪ ಹುಟ್ಟುಹಬ್ಬದ ದಿನವೂ ಅವರ ಜತೆ ಕಳೆಯಲು ಸಾಧ್ಯವಾಗೋದಿಲ್ಲ. ಆಪ್ತರು ಮೃತಪಟ್ಟ ದುಃಖದ ಸಂದರ್ಭದಲ್ಲು ಖಾಸಗಿಯಾಗಿ ಕಣ್ಣೀರು ಹಾಕಲು ಬಿಡೋದಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು
'ನೀವೆಲ್ಲ ಯಾರು ಎಂದು ನನಗೆ ತಿಳಿದಿಲ್ಲ ಎಂದುಕೊಳ್ಳಬೇಡಿ. ನಾನು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ, ಖುದ್ದಾಗಿ ಭೇಟಿಯಾದಾಗ ಫೋಟೋ ಕೇಳುತ್ತೀರಿ. ಫೋನ್ ಹಿಡಿದು ಆನ್ಲೈನ್ನಲ್ಲಿ ನೋಡುತ್ತಾ ಕುಳಿತಾಗ ನನ್ನನ್ನು ಜಡ್ಜ್ ಮಾಡಲು ಶುರು ಮಾಡುತ್ತೀರಿ' ಎಂದು ಕಿಡಿಕಾರಿದರು, (ಏಜೆನ್ಸೀಸ್).