ಅಕ್ಷತಾ, ಚೈತ್ರಾ, ಸಂಯುಕ್ತಾ ಹೊರನಾಡು 
ಸ್ಯಾಂಡಲ್‌ವುಡ್

ತಾರೆಯರ ನಿಸರ್ಗ ಪ್ರೇಮ: ಹಸಿರೇ ಉಸಿರು ಎಂದ ಸ್ಯಾಂಡಲ್ ವುಡ್​ ತಾರೆಯರು

ಪ್ರಮುಖ ಮುಖ್ಯಾಂಶಗಳು

  • ಪರಿಸರದ ದಿನದ ಖುಷಿಯಲ್ಲಿ ಸ್ಯಾಂಡಲ್ ವುಡ್ ನಟಿಯರು
  • ನಿಸರ್ಗದ ಉಳಿವಿಗೆ ಶ್ರಮಿಸಲು ಮನವಿ
  • ಪ್ಲಾಸ್ಟಿಕ್​ಮುಕ್ತ ಪರಿಸರಕ್ಕೆ ನಟಿಯರ ಕರೆ

ಇಂದು ಪರಿಸರ ದಿನಾಚರಣೆ. ಎಲ್ಲೆಡೆ ಹಸಿರು ಪ್ರೇಮ ರಾರಾಜಿಸಲಿದೆ. ಹಾಗೆಯೇ, ಪರಿಸರ ಸಂರಕ್ಷಣೆ, ಕಾಳಜಿ ಕುರಿತು ಅರಿವು ಮೂಡಿಸಲಾಗುತ್ತದೆ. ಈ ವಿಚಾರದಲ್ಲಿ ಸ್ಯಾಂಡಲ್‌ವುಡ್ ತಾರೆಯರು ಹೊರತಾಗಿಲ್ಲ. ನಟಿಯರಾದ ಅಕ್ಷತಾ ಪಾಂಡವಪುರ, ಸಂಯುಕ್ತಾ ಹೊರನಾಡು, ಚೈತ್ರಾ ಹಳ್ಳಿಕೇರಿ ಮೊದಲಿನಿಂದಲೂ ಪರಿಸರದ ಬಗ್ಗೆ ಕಾಳಜಿ ವಹಿಸುವ ಜತೆಗೆ ಅದರಂತೆ ನಡೆದುಕೊಂಡವರು. ಈ ಹಿನ್ನೆಲೆಯಲ್ಲಿ ನಿಸರ್ಗದ ಕುರಿತು ಪ್ರಜ್ಞಾಪೂರ್ವಕ ಮಾತುಗಳನ್ನು ವಿಜಯವಾಣಿ ಜತೆ ಹಂಚಿಕೊಂಡಿದ್ದಾರೆ.

ರೈತಪರ ಕಾಳಜಿಯೇ ನಿಜವಾದ ಪರಿಸರ ಪ್ರೇಮ

ಪರಿಸರ ದಿನ ಒಂದು ದಿನವಲ್ಲ, ಪ್ರತಿ ದಿನದ ಆಚರಣೆಯಾಗಲಿ. ಮೊದಲಿನಿಂದಲೂ ಪರಿಸರ ಪರ ಕಾಳಜಿ ವಹಿಸುತ್ತ ಬಂದಿದ್ದೇನೆ. ನನ್ನ ಬರಹ, ನಾಟಕ, ಸಿನಿಮಾ ಯಾವುದೇ ಮಾಧ್ಯಮವಾಗಲಿ ಪರಿಸರ ಜಾಗೃತಿ ಮೂಡಿಸುತ್ತ ಬಂದಿದ್ದೇನೆ. ನಮ್ಮಿಂದಲೇ ಆರಂಭವಾದಾಗ ಅದು ಆಂದೋಲನವಾಗಲು ಸಾಧ್ಯ. ಎರಡು ವರ್ಷದ ಹಿಂದೆ ‘ಹೌ ಡೇರ್ ಯು?’ ನಾಟಕದಲ್ಲಿಯೂ ಪರಿಸರ ಸಂರಕ್ಷಣೆಯ ಮೇಲೆ ಬೆಳಕು ಚೆಲ್ಲಿದ್ದೆ. ಮೊದಲು ವೈಯಕ್ತಿಕವಾಗಿ ನಾವು ಆಹಾರ ಪೋಲು ಮಾಡುವುದು, ಮರ-ಗಿಡಗಳನ್ನು ಕಡಿಯುವುದನ್ನು ನಿಲ್ಲಿಸಬೇಕು. ಹಳ್ಳಿಯಲ್ಲಿ ದಿನಕ್ಕೆ ಹತ್ತು ಕುಟುಂಬಗಳು ಬಳಸುವ ನೀರನ್ನು ನಗರಗಳಲ್ಲಿ ಒಂದೇ ಕುಟುಂಬ ಬಳಸುತ್ತದೆ. ನೀರಿದೆ ಎಂದು ಖರ್ಚು ಮಾಡುವುದಲ್ಲ. ಸಾಧ್ಯವಾದಷ್ಟು ನಾವು ಜಲಸಂರಕ್ಷಣೆಯತ್ತ ಗಮನ ಹರಿಸಬೇಕು. ರೈತಪರ ಕಾಳಜಿ ಹೊಂದುವುದೇ ನಿಜವಾದ ಪರಿಸರ ಪ್ರೇಮ. ನಮ್ಮ ಕೃಷಿ ಮೂಲಗಳನ್ನು ನಾವು ಉಳಿಸಬೇಕು. ಪ್ರವಾಸದ ನೆಪದಲ್ಲಿ ಪಾರಂಪರಿಕ ಹಸಿರು ತಾಣಗಳನ್ನು ಹಾಳು ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಬಾಟಲ್‌ಗಳನ್ನು ಬೀಸಾಡಲಾಗುತ್ತದೆ. ಅದರಿಂದ ಅಲ್ಲಿನ ಸೌಂದರ್ಯ ಹಾಳುಗೆಡುವುತ್ತಿದ್ದಾರೆ. ಇಂತಹ ವಿಕೃತಿಯನ್ನು ಮೊದಲು ನಿಲ್ಲಿಸಬೇಕು. ನಮ್ಮ ಮನೆಯಲ್ಲಿ ಶೇ.90ರಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದಿಲ್ಲ. ಅನಿವಾರ್ಯವಾಗಿ ಕೆಲವೊಂದನ್ನು ಬಳಸುತ್ತೇವೆ ಬಿಟ್ಟರೆ, ಮನೆಯಲ್ಲಿ ಕಂಚು, ಸ್ಟೀಲ್ ಸೇರಿ ಮಣ್ಣಿನಿಂದ ಮಾಡಿದ ವಸ್ತುಗಳೇ ಹೆಚ್ಚು.

| ಅಕ್ಷತಾ ಪಾಂಡವಪುರ, ರಾಜ್ಯ ಪ್ರಶಸ್ತಿ ವಿಜೇತ ನಟಿ

ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಹಾಳುಗೆಡವದಿರಿ
ಪರಿಸರವನ್ನು ನಾವು ಚೆನ್ನಾಗಿ ನೋಡಿಕೊಂಡರೆ, ಅದು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ ಎಂಬುದನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಪರಿಸರವಿಲ್ಲದೆ ನಾವಿಲ್ಲ. ಆ ಪ್ರಜ್ಞಾವಂತಿಕೆ ಮೊದಲಿನಿಂದಲೂ ನನ್ನಲ್ಲಿದೆ. ಅದಕ್ಕಾಗಿಯೇ ನಾನು ಮನೆಯಲ್ಲಿ ಎಸಿ (ಹವಾ ನಿಯಂತ್ರಕ) ಬಳಸುವುದಿಲ್ಲ. ಎಸಿ ಬಳಸದಿರುವುದು ಸುಸ್ಥಿರ ಪರಿಸರಕ್ಕೆ ಒಳ್ಳೆಯದು. ಇನ್ನು ಮೊದಲಿನಿಂದಲೂ ತರಕಾರಿ, ಗಿಡ-ಮರಗಳನ್ನು ಪೋಷಣೆ ಮಾಡಿಕೊಂಡು ಬಂದಿದ್ದೇನೆ. ಇದು ನಾನು ಅಮ್ಮನಿಂದ ಕಲಿತ ಗುಣ. ಅಮ್ಮ ಮನೆಯ ಟೆರೇಸ್ ಮೇಲೆ ತೋಟ ಮಾಡಿ, ಅಲ್ಲಿ ತರಕಾರಿ, ಹೂವುಗಳನ್ನು ಬೆಳೆಯುತ್ತಿದ್ದರು. ಅಲ್ಲಿ ಬೆಳೆದ ಹೂವುಗಳೇ ನಮ್ಮ ಮನೆಯ ದೇವರಿಗೆ ಮೀಸಲು. ಮುಂದಿನ ಪೀಳಿಗೆ ಪರಿಸರದ ಬಗ್ಗೆ ಜಾಗೃತಿ ವಹಿಸಬೇಕು. ಅದಕ್ಕಾಗಿ ಹುಟ್ಟುಹಬ್ಬದ ನೆನಪಿಗಾದರೂ ಗಿಡಗಳನ್ನು ನೆಡಬೇಕು. ಇಂದು ಅಭಿವೃದ್ಧಿ ಹೆಸರಿನಲ್ಲಿ ಪರಿಸರದ ಮೇಲೆ ದೌರ್ಜನ್ಯವಾಗುತ್ತಿದೆ. ಎಲ್ಲೆಡೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಿದರೆ, ಭೂಮಿಗೆ ನೀರು ಇಂಗುವುದಾದರೆ ಹೇಗೆ? ಅದಕ್ಕಾಗಿಯೇ ಬೆಂಗಳೂರಿನಂತಹ ನಗರಗಳಲ್ಲಿ ಸಣ್ಣ ಮಳೆಯಾದರೂ ಪ್ರವಾಹದ ವಾತಾವರಣ ಸೃಷ್ಟಿಯಾಗುತ್ತದೆ. ಸಾಧ್ಯವಾದಷ್ಟು ಭೂಮಿಗೆ ನೀರು ಇಂಗುವಂತೆ ನೋಡಿಕೊಳ್ಳಬೇಕು.

| ಚೈತ್ರಾ ಹಳ್ಳಿಕೇರಿ, ನಟಿ

ನೀರಿಗಾಗಿ ಯುದ್ಧವೇ ನಡೆಯಬಹುದು ಎಚ್ಚರ!

ಇಂದು ಜಾಲತಾಣದಲ್ಲಿ ಯಾವ್ಯಾವುದೋ ವಿಚಾರಗಳು ಸದ್ದು ಮಾಡುತ್ತವೆ. ಹಾಗೆಯೇ ಅದಕ್ಕೆ ಕ್ರಾಂತಿ ಎಂದು ಹೇಳಲಾಗುತ್ತದೆ. ಆದರೆ, ಪರಿಸರ ಉಳಿಸುವ ವಿಚಾರವಾಗಿ ಇತ್ತೀಚಿನ ದಿನಗಳಲ್ಲಿ ಇಂತಹ ಆಂದೋಲನ ನಡೆದಿಲ್ಲ. ಹಾಗಾಗಿ, ಇಂದಿನ ಜೆನ್ ಜೀಗಳಿಗೆ ಪರಿಸರ ಕುರಿತ ಕಾಳಜಿ ಕಡಿಮೆಯಾಗಿದೆ. ‘ಐ ಡೋಂಟ್ ಕೇರ್’ ಎಂಬ ಮನಸ್ಥಿತಿಯಲ್ಲಿದ್ದಾರೆ. ಎಲ್ಲರೂ ‘ಫಾಸ್ಟ್ ಲೈಫ್​’ಗೆ ಸೀಮಿತರಾಗುತ್ತಿದ್ದಾರೆ. ಆರ್ಡರ್ ಮಾಡಿದರೆ ಎಲ್ಲವೂ ಕ್ಷಣಾರ್ಧದಲ್ಲಿಯೇ ಸಿಗುತ್ತದೆ ಎಂದು ಮನೋಭಾವ ಬದಲಾಗಬೇಕು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿಯೇ ಯುದ್ಧ ನಡೆದರೂ ಆಶ್ಚರ್ಯವಿಲ್ಲ, ಎನ್ನುವಂತಹ ಕಾಲದಲ್ಲಿ ನಾವಿದ್ದೇವೆ. ಮೊದಲು ಪರಿಸರ ಜಾಗೃತಿ, ಹಸಿರು ಪ್ರೇಮ ನಮ್ಮಿಂದಲೇ ಆರಂಭವಾಗಬೇಕು. ನಾವು ಆ ಕಾಳಜಿ ವಹಿಸಿದರೆ, ನಮ್ಮನ್ನು ಇನ್ನೊಬ್ಬರು ನೋಡಿ ಕಲಿಯುತ್ತಾರೆ.

| ಸಂಯುಕ್ತಾ ಹೊರನಾಡು, ನಟಿ