- ವರಮಹಾಲಕ್ಷ್ಮೀ ಹಬ್ಬದ ಸಡಗರದಲ್ಲಿ ಸ್ಯಾಂಡಲ್ ವುಡ್ ತಾರೆಯರು
- ಸ್ಯಾಂಡಲ್‌ವುಡ್‌ನಲ್ಲೂ ಹಬ್ಬದ ವಾತಾವರಣ
- ಸಿನಿಮಾ ಶೂಟಿಂಗ್, ಪ್ರಚಾರ ನಡುವೆಯೂ ಹಬ್ಬದ ಸಂಭ್ರಮ
ನಾಡಿನಾದ್ಯಂತ ಶ್ರಾವಣ ಸಂಭ್ರಮ ಕಳೆಗಟ್ಟಿದ್ದು, ಹಬ್ಬಗಳ ಸೀಸನ್ ಆರಂಭವಾಗಿದೆ. ನಾಗರ ಪಂಚಮಿ ಬೆನ್ನಲ್ಲೇ ಇದೀಗ ವರಮಹಾಲಕ್ಷ್ಮೀ ಹಬ್ಬದ ಆಚರಣೆಯ ಸಡಗರ ಹೆಚ್ಚಿದೆ. ಹಬ್ಬದ ಹಿನ್ನೆಲೆಯಲ್ಲಿ ಇಂದು ಮನೆಯಲ್ಲಿ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿ ಮುತ್ತೈದೆಯರಿಗೆ ಬಾಗಿನ ಅರ್ಪಿಸುವುದು ಸಂಪ್ರದಾಯ. ಇನ್ನು ಸ್ಯಾಂಡಲ್‌ವುಡ್‌ನಲ್ಲೂ ಹಬ್ಬದ ವಾತಾವರಣ ಮನೆ ಮಾಡಿದೆ. ನಟಿಯರಾದ ಸುಶ್ಮಿತಾ ಭಟ್, ಸಂಹಿತಾ ವಿನ್ಯಾ ಹಾಗೂ ಅದ್ವಿತಿ ಶೆಟ್ಟಿ ಹಬ್ಬದ ಸಂಭ್ರಮದಲ್ಲಿದ್ದು, ಆಚರಣೆ ಕುರಿತು ‘ವಿಜಯವಾಣಿ’ ಜತೆ ಹಂಚಿಕೊಂಡಿದ್ದಾರೆ.
ಧನ, ಜ್ಞಾನದ ಪ್ರತೀಕ
ಸಂಬಂಧಿಕರ ಮನೆಯಲ್ಲಿ ಈ ಬಾರಿ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಿದ್ದೇನೆ. ಲಕ್ಷ್ಮೀ ಕೂರಿಸಿ, ಹೊಸ ಸೀರೆ ತೊಡಿಸಿ, ಆಭರಣಗಳಿಂದ ಅಲಂಕಾರ ಮಾಡುತ್ತೇವೆ. ಹಾಗೆಯೇ, ಅಕ್ಕ-ಪಕ್ಕದ ಮನೆಯವರನ್ನು ಮನೆಗೆ ಕರೆದು ಅರಿಶಿಣ-ಕುಂಕುಮ ನೀಡುವುದು ವಾಡಿಕೆ. ಇನ್ನು ಲಕ್ಷ್ಮೀ ಎಂದರೆ ಕೇವಲ ಧನದ ಪ್ರತೀಕವಷ್ಟೇ ಅಲ್ಲ, ಜ್ಞಾನದ ಪ್ರತೀಕವೂ ಹೌದು. ಉತ್ತಮ ಜ್ಞಾನದ ಜತೆಗೆ ಜೀವನವೂ ಮಂಗಳಕರವಾಗಿರಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತೇವೆ. ಶ್ರಾವಣ ಆರಂಭವಾಗಿದ್ದು, ಸಾಲು ಸಾಲು ಹಬ್ಬಗಳು ಬರಲಿವೆ. ಪ್ರತಿ ಹಬ್ಬವನ್ನು ನಾನು ಸಂಭ್ರಮಿಸುತ್ತೇನೆ. ನಮ್ಮಲ್ಲಿ ದೈವಿಕ ಮನೋಭಾವದ ಜತೆಗೆ ಉತ್ಸಾಹಿಯಾಗಿಸಲು ಈ ಹಬ್ಬಗಳು ಪೂರಕ. ಯಾವುದೇ ಅಡೆತಡೆಗಳಿಲ್ಲದೆ ನಾನು ಕೈಗೊಂಡಿರುವ ಕೆಲಸಗಳು ಸಾಂಗವಾಗಿ ನಡೆಯಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಈ ಬಾರಿಯ ಹಬ್ಬ ನನಗೆ ವಿಶೇಷ. ತೆಲುಗು ನಟ ಅಕ್ಕಿನೇನಿ ನಾಗಾರ್ಜುನ್ ಅವರ 100ನೇ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅದಕ್ಕಿಂತ ದೊಡ್ಡ ಖುಷಿಯ ಕ್ಷಣ ಮತ್ತೊಂದಿಲ್ಲ. ಹಾಗೆಯೇ, ಕೆಲ ಕಥೆಗಳನ್ನು ಕೇಳಿದ್ದೇನೆ. ಹಬ್ಬದ ಬಳಿಕ ಒಂದೊಂದೇ ಚಿತ್ರ ಸೆಟ್ಟೇರಲಿದೆ.
ಪ್ರಚಾರದ ನಡುವೆ ಹಬ್ಬದ ಖುಷಿ
ಸಿನಿಮಾ ಶೂಟಿಂಗ್, ಪ್ರಚಾರದ ನಡುವೆಯೂ ಈ ಬಾರಿ ಊರಿನಲ್ಲಿ ವರಮಹಾಲಕ್ಷ್ಮೀ ಹಬ್ಬ ಆಚರಿಸುತ್ತಿದ್ದೇನೆ. ಪ್ರತಿ ಹಬ್ಬವೂ ನಮಗೆ ವಿಶೇಷವೇ. ಇಡೀ ಕುಟುಂಬ ಕೂಡುವುದು ಹಬ್ಬಗಳಲ್ಲಿ ಮಾತ್ರ. ಹಾಗಾಗಿ, ನಾನು ಸಕಲೇಶಪುರದ ಮನೆಗೆ ಬಂದಿದ್ದೇನೆ. ಮನೆಯಲ್ಲಿ ಲಕ್ಷ್ಮೀ ಕೂರಿಸಿ ಅಲಂಕಾರ ಮಾಡಿ, ಪೂಜೆ ಮಾಡುತ್ತೇವೆ. ಮನೆಯಲ್ಲಿ ವಿಶೇಷ ತಿಂಡಿ-ತಿನಿಸುಗಳನ್ನು ಮಾಡಿರುತ್ತಾರೆ. ಹಾಗಾಗಿ, ಯಾವುದೇ ಡಯಟ್ ಆಲೋಚನೆ ಇಲ್ಲದೆ ತೃಪ್ತಿಯಿಂದ ಹಬ್ಬದ ತಿನಿಸುಗಳನ್ನು ಆಸ್ವಾದಿಸುತ್ತೇನೆ. ನಮ್ಮ ಒಳಿತಿಗೋಸ್ಕರ ಅಮ್ಮ ಲಕ್ಷ್ಮೀ ವ್ರತ ಮಾಡುತ್ತಾರೆ. ಅಮ್ಮ ಚೆನ್ನಾಗಿರಲಿ ಎಂಬುದೇ ದೇವರಲ್ಲಿ ನನ್ನ ಬೇಡಿಕೆ. ಸದ್ಯ ನಾನು ಅಜಯ್ ಕುಮಾರ್ ದೈವಜ್ಞ ನಿರ್ದೇಶನದ ‘ದೈವಜ್ಞರು’ ಚಿತ್ರದಲ್ಲಿ ಚೆನ್ನಾಬೈರಾದೇವಿ ಪಾತ್ರದಲ್ಲಿ ನಟಿಸಿದ್ದೇನೆ. ಆ ಸಿನಿಮಾ ರಿಲೀಸ್‌ಗೆ ಸಿದ್ಧವಿದ್ದು, ಪ್ರಚಾರ ಆರಂಭಗೊಂಡಿದೆ. ಕನ್ನಡದ ‘ಸ್ವಾಭಿಮಾನಿ’ ಸೇರಿ ಪರಭಾಷೆ ಸಿನಿಮಾಗಳಲ್ಲಿ ನಟಿಸಿದ್ದೇನೆ. ಹೀಗಾಗಿ, ಹಬ್ಬದ ಖುಷಿ ಹೆಚ್ಚಿದೆ. ಆರೋಗ್ಯವೇ ದೊಡ್ಡ ಸಂಪತ್ತು. ಅದಕ್ಕಾಗಿ ಆರೋಗ್ಯ ಚೆನ್ನಾಗಿರಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.
ಡಬಲ್ ಧಮಾಕಾ
ಈ ಬಾರಿಯ ವರಮಹಾಲಕ್ಷ್ಮೀ ಹಬ್ಬ ನನಗೆ ಡಬಲ್ ಧಮಾಕಾ. ಒಂದೆಡೆ ಹಬ್ಬದ ಖುಷಿಯಾದರೆ ಇನ್ನೊಂದೆಡೆ ನಾನು ನಟಿಸಿರುವ ‘ಬ್ರಹ್ಮಕಮಲ’ ಸಿನಿಮಾ ಇಂದು ರಿಲೀಸ್ ಆಗುತ್ತಿದೆ. ಇದಕ್ಕಿಂತ ದೊಡ್ಡ ಖುಷಿಯ ಕ್ಷಣ ಸಿಗದು. ನಾನು ಕರಾವಳಿ ಮೂಲದವಳಾಗಿದ್ದು, ಬೆಂಗಳೂರಿಗೆ ಬಂದ ಬಳಿಕ ನನಗೆ ವರಮಹಾಲಕ್ಷ್ಮೀ ಹಬ್ಬದ ಬಗ್ಗೆ ಪರಿಚಯವಾಗಿದ್ದು. ಇನ್ನು ಪ್ರತಿ ವರ್ಷ ಬೆಂಗಳೂರಿನ ಸ್ನೇಹಿತರ ಮನೆಗೆ ಹೋಗಿ, ಹಬ್ಬ ಆಚರಿಸುತ್ತೇನೆ. ಇಂದು ಕೂಡ ನನ್ನ ಸ್ನೇಹಿತೆ ಆಹ್ವಾನಿಸಿದ್ದಾಳೆ. ಅವಳ ಮನೆಗೆ ಹೋಗಿ, ಆಚರಿಸುವೆ. ಹಬ್ಬದ ಸಮಯದಲ್ಲಿ ಪೂಜಾಲಂಕಾರಗಳಿಂದ ಕಂಗೊಳಿಸುತ್ತಿರುವ ದೇವಿಯನ್ನು ನೋಡುವುದೇ ಒಂದು ರೋಮಾಂಚನ. ವಿಶೇಷ ಏನೆಂದರೆ, ಪ್ರತಿ ವರಮಹಾಲಕ್ಷ್ಮೀ ಹಬ್ಬದ ಸಮಯದಲ್ಲಿಯೇ ನನ್ನ ಸಿನಿ ಚಟುವಟಿಕೆಗಳು ಚುರುಕುಗೊಂಡಿರುತ್ತವೆ. ಹಾಗಾಗಿ, ಈ ಹಬ್ಬ ಬಂತೆಂದರೆ ನನಗೆ ಖುಷಿ ಹೆಚ್ಚು. ಪ್ರತಿ ಹಬ್ಬವನ್ನು ನಾನು ಅದ್ದೂರಿಯಾಗಿ ಆಚರಿಸುತ್ತೇನೆ. ಸದ್ಯ ಕನ್ನಡದಲ್ಲಿ ಎರಡು ಕಥೆ ಕೇಳಿದ್ದೇನೆ. ಇನ್ನೊಂದು ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ. ತಮಿಳು ಚಿತ್ರವೊಂದು ರಿಲೀಸ್‌ಗೆ ರೆಡಿಯಿದ್ದು, ಮಲಯಾಳಂ ಸಿನಿಮಾದ ಮಾತುಕತೆ ನಡೆಯುತ್ತಿದೆ. ಹೀಗಾಗಿ, ಹಬ್ಬದ ಖುಷಿ ಹೆಚ್ಚಿದೆ.