sandalwood actor yash instagram bio goes viral
- ಟಾಕ್ಸಿಕ್ ಸಿನಿಮಾ ಬಗ್ಗೆ ಟ್ರೋಲ್, ಮೆಚ್ಚುಗೆ ಬೆನ್ನಲ್ಲೇ ಇನ್ಸ್ಟಾ ಬಯೋ ಬದಲಿಸಿದ ಯಶ್
- ನಕಲಿಯಾಗಬೇಡಿ ಒರಿಜಿನಲ್ ಆಗಿರಿ ಎಂದು ಬಯೋ ಬದಲಿಸಿದ ಯಶ್ .
- ಸೋಶಿಯಲ್ ಮೀಡಿಯಾದಲ್ಲಿ ಟಾಕ್ಸಿಕ್ ವಿರುದ್ಧ ಭಾರೀ ಟೀಕೆ ವ್ಯಕ್ತ.
sandalwood actor yash instagram bio goes viral: ಟಾಕ್ಸಿಕ್ ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್ ಸಿನಿಮಾ ಮೇಲೆ ಸಿನಿ ಪ್ರೇಮಿಗಳು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆಗಸ್ಟ್ 26ರಂದು ರಿಲೀಸ್ ಆದ ಚಿತ್ರಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ಸ್, ಹೇಳಿಕೆ ಕೇಳಿಬರುತ್ತಿದೆ. ಕೆಲವರು ಯಶ್ ನಟನೆ ಬಗ್ಗೆ ಮೆಚ್ಚಿಕೊಂಡರೆ ಇನ್ನೂ ಕೆಲವರು ಸ್ಯಾಂಡಲ್ವುಡ್ಗೆ ಹಳೆಯ ರಾಕಿಂಗ್ಸ್ಟಾರ್ ಬೇಕು ಎಂದು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಯಶ್ ಅವರ ಇನ್ಸ್ಟಾಗ್ರಾಮ್ ಬಯೋ ಬದಲಾಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸ್ಯಾಂಡಲ್ವುಡ್ನಿಂದ ಬೆಂಬಲ
ಚಂದನವನದಲ್ಲಿ ಯಶ್ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಿಚ್ಚ ಸುದೀಪ, ರಕ್ಷಿತಾ ಪ್ರೇಮ್, ಶಿವರಾಜ್ ಕುಮಾರ್, ಮಾಸ್ಟರ್ ಆನಂದ್, ಪವನ್ ಒಡೆಯರ್ ಸೇರಿದಂತೆ ಹಲವರು ಹಾರೈಸಿದ್ದಾರೆ. ಯಶ್ ಸಿನಿಮಾ ಚೆನ್ನಾಗಿದೆ..ಆನ್ಲೈನ್ ಕಾಮೆಂಟ್ ಪಕ್ಕಕ್ಕಿಟ್ಟು ಸಿನಿಮಾ ನೋಡಿ ಎಂದು ಸ್ಯಾಂಡಲ್‌ವುಡ್ ಕ್ವೀನ್ ರಕ್ಷಿತಾ ಪ್ರೇಮ್ ಇನ್ಸ್ಟಾಗ್ರಾಮ್ನಲ್ಲಿ ಮಾತನಾಡಿದ್ದರು.
ಟೀಕೆ, ಮೆಚ್ಚುಗೆ ವ್ಯಕ್ತ
ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಮೇಕಿಂಗ್, ರಾಯ ಹಾಗೂ ಟಿಕೆಟ್ ಪಾತ್ರದಲ್ಲಿ ಯಶ್ ಅಭಿನಯಿಸಿರುವ ರೀತಿಯನ್ನು ಒಂದು ವರ್ಗ ಕೊಂಡಾಡುತ್ತಿದೆ. ಇನ್ನೂ ಕೆಲವರು ಕಳಪೆ ಸಿನಿಮಾ, ಗೀತು ಮೋಹನ್ ದಾಸ್ ಅವರು ಕೆಟ್ಟ ಸಿನಿಮಾವನ್ನು ಕೊಟ್ಟಿದ್ದಾರೆ. ಧೂಮಪಾನ, ಲೈಂಗಿಕ ವಿಚಾರಗಳಿಗೆ ಹೆಚ್ಚು ಹೊತ್ತು ಕೊಡಲಾಗಿದೆ ಎಂದು ಕಿಡಿಕಾರುತ್ತಿದ್ದಾರೆ. ಈ ವಿದ್ಯಾಮಾನಗಳ ಮಧ್ಯೆ ಯಶ್ ಬದಲಿಸಿರುವ ಬಯೋವನ್ನು ಅಭಿಮಾನಿಗಳು ಬಳಸಿಕೊಳ್ಳುತ್ತಿದ್ದಾರೆ. ಸಿನಿಮಾವನ್ನು ನಿಂದಿಸುವವರಿಗೆ ಈ ವಾಕ್ಯ ಹೇಳಿ ಟಾಂಗ್ ಕೊಡುತ್ತಿದ್ದಾರೆ.
ಯಶ್ ಬಯೋದಲ್ಲಿ ಏನಿದೆ?
ನಟ ಮತ್ತು ಹೆಮ್ಮೆಯ ಕನ್ನಡಿಗ - ನೀನು ನೀನಾಗಿಯೇ ಇರು, ಏಕೆಂದರೆ ನಕಲಿಗಿಂತ ಅಸಲಿಯೇ ಹೆಚ್ಚು ಬೆಲೆಬಾಳುವಂಥದ್ದು. (Actor & Proud Kannadiga - Be Yourself because An Original is Worth more than a Copy) ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಸಿನಿಮಾಗಳಿಗೆ ಕೇಳಿಬರುವ ನಕರಾತ್ಮಕ ಕಾಮೆಂಟ್ಗಳ ಬಗ್ಗೆ ಹೆಚ್ಚು ಚಿಂತಿಸದೇ, ನೀವು ನೀವಾಗಿಯೇ ಇರಿ...ಬೇರೆಯವರ ಹೇಳಿಕೆಗಳಂತೆ ನಕಲಿಯಾಗಿ ವರ್ತಿಸಲು..ಇನ್ನೊಬ್ಬರ ಇಷ್ಟಕ್ಕೆ ಪಾತ್ರರಾಗಲು ಬದಲಾಗಲು ಹೋಗಬೇಡಿ. ನಿಮ್ಮ ಒರಿಜಿನಲ್ ವ್ಯಕ್ತಿತ್ವಕ್ಕೆ ತೂಕ ಹೆಚ್ಚು ಎನ್ನುವ ಅರ್ಥದಲ್ಲಿ ಬರೆದುಕೊಂಡಿದ್ದಾರೆ.
ಯಶ್ ಸಿನಿಮಾಗಳಿಸಿದ್ದೆಷ್ಟು?
ಟಾಕ್ಸಿಕ್ ಸಿನಿಮಾವು ಇಲ್ಲಿಯವರೆಗೂ 300 ಕೋಟಿ ಗಳಿಕೆಯತ್ತ ಸಾಗುತ್ತಿದೆ. ಭಾರತದಾದ್ಯಂತ ಐದನೇ ದಿನದವರೆಗೂ ಯಶ್ ಸಿನಿಮಾ 255.95 ಕೋಟಿ ಗಳಿಸಿದೆ. ವಿಶ್ವದಾದ್ಯಂತ 285.20 ಕೋಟಿ ಗಳಿಸಿದೆ. ದೇಶದಾದ್ಯಂತ ಒಟ್ಟು 16,241 ಪ್ರದರ್ಶನಗಳನ್ನು ಕಂಡಿದೆ ಎಂದು ವರದಿಯೊಂದರಿಂದ ತಿಳಿದುಬಂದಿದೆ, (ಏಜೆನ್ಸೀಸ್).