ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ... ರುಕ್ಮಿಣಿ ವಸಂತ್​ ವಿರುದ್ಧ ಅಸಮಾಧಾನ ಹೊರಹಾಕಿದ ಅಭಿಮಾನಿಗಳು! Rukmini Vasanth  
ಸ್ಯಾಂಡಲ್‌ವುಡ್

ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ... ರುಕ್ಮಿಣಿ ವಸಂತ್​ ವಿರುದ್ಧ ಅಸಮಾಧಾನ ಹೊರಹಾಕಿದ ಅಭಿಮಾನಿಗಳು! Rukmini Vasanth

ಪ್ರಮುಖ ಮುಖ್ಯಾಂಶಗಳು

  • ಟಾಕ್ಸಿಕ್ ಸಿನಿಮಾದಲ್ಲಿ ಮೆಲಿಸಾ ಪಾತ್ರದಲ್ಲಿ ನಟಿಸಿದ ನಟಿ ರುಕ್ಮಿಣಿ ವಸಂತ್
  • ಸಿನಿಮಾದ ಒಂದು ನಿರ್ದಿಷ್ಟ ಬೆಡ್ ಸೀನ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ
  • ದೃಶ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನಟಿಯನ್ನು ಪ್ರಶ್ನಿಸುತ್ತಿರುವ ಅಭಿಮಾನಿಗಳು
  • ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ
Rukmini Vasanth : ಕನ್ನಡದ ಖ್ಯಾತ ನಟಿ ರುಕ್ಮಿಣಿ ವಸಂತ್ ಅವರು ರಿಷಭ್​ ಶೆಟ್ಟಿ ನಿರ್ದೇಶನದ 'ಕಾಂತಾರ: ಚಾಪ್ಟರ್ 1' ಚಿತ್ರದಲ್ಲಿ ಕನಕವತಿ ಪಾತ್ರದ ಮೂಲಕ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಅದೇ ರುಕ್ಮಿಣಿ, ಇಂದು ಬಿಡುಗಡೆಯಾದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಾಕಿಂಗ್​ ಸ್ಟಾರ್​ ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅವರಂತಹ ದಿಗ್ಗಜ ನಟ-ನಟಿಯರ ತಾರಾಗಣದೊಂದಿಗೆ ರುಕ್ಮಿಣಿ ವಸಂತ್ ಕೂಡ ಪ್ರಮುಖ ಪಾತ್ರದಲ್ಲಿ ಸ್ಕ್ರೀನ್ ಹಂಚಿಕೊಂಡಿದ್ದಾರೆ.
'ಟಾಕ್ಸಿಕ್' ಸಿನಿಮಾದಲ್ಲಿ ರುಕ್ಮಿಣಿ ಅವರು ಮೆಲಿಸಾ ಪಾತ್ರದಲ್ಲಿ ಮಿಂಚಿದ್ದು, ಅವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಒಂದು ನಿರ್ದಿಷ್ಟ ದೃಶ್ಯವು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ಹಾಗೂ ಚರ್ಚೆಗೆ ಗ್ರಾಸವಾಗಿದೆ. ವೈರಲ್ ಆಗಿರುವ ವಿಡಿಯೋ ತುಣುಕಲ್ಲಿ, ರುಕ್ಮಿಣಿ ವಸಂತ್ ಅವರು ಕೇವಲ ಒಂದು ಬ್ಲಾಂಕೆಟ್ ಸುತ್ತಿಕೊಂಡು ನಿದ್ರೆಯಿಂದ ಎದ್ದೇಳುವಂತಹ ದೃಶ್ಯವಿದೆ. ಸುತ್ತಮುತ್ತ ಏನಾಗುತ್ತಿದೆ ಎಂದು ತಿಳಿಯದೆ ಗೊಂದಲ ಹಾಗೂ ಅರಿವಿಲ್ಲದ ಸ್ಥಿತಿಯಲ್ಲಿರುವಂತೆ ಅವರು ಆ ಹೊದಿಕೆಯನ್ನು ಮೈಗೆ ಬಿಗಿಯಾಗಿ ಹಿಡಿದುಕೊಂಡು ನೋಡುವ ಈ ದೃಶ್ಯವು ಪ್ರಸ್ತುತ ನೆಟ್ಟಿಗರ ಗಮನ ಸೆಳೆದಿದೆ.

ಈ ದೃಶ್ಯದ ಬಗ್ಗೆ ಅಭಿಮಾನಿಗಳು ಜಾಲತಾಣಗಳಲ್ಲಿ ತಮ್ಮ ನಿರಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ. "ರುಕ್ಮಿಣಿ, ಇದು ಏನ್ರೀ?" ಎಂದು ಒಬ್ಬ ಬಳಕೆದಾರರು ಬರೆದರೆ, "ಇಂತಹ ದೃಶ್ಯಗಳನ್ನು ನಾನು ಹೇಗೆ ಸ್ವೀಕರಿಸಲಿ? ರುಕ್ಮಿಣಿ, ನಿಮ್ಮಿಂದ ನಾನಿದನ್ನು ಖಂಡಿತ ನಿರೀಕ್ಷಿಸಿರಲಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. "ಇದೆಲ್ಲಾ ಏನು? ಇಂತಹ ಕಳಪೆ ಸ್ಕ್ರಿಪ್ಟ್ ಯಾಕೆ?" ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ.

ಈ ಸೀಕ್ವೆನ್ಸ್‌ನ ಹಿಂದಿನ ಕ್ರಿಯೇಟಿವ್​ ಆಯ್ಕೆಯನ್ನು ಕೆಲವು ವೀಕ್ಷಕರು ಪ್ರಶ್ನಿಸಿದರೆ, ಇನ್ನು ಕೆಲವರು ಇದು ನಟಿಗೆ ಅಥವಾ ಅವರು ನಿರ್ವಹಿಸಿದ ಪಾತ್ರಕ್ಕೆ ಸರಿಹೋಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆಯಾಗಿ ರುಕ್ಕು ಅಭಿಮಾನಿಗಳಿಗೆ ಆ ಬೆಡ್​ ಸೀನ್​ ಇಷ್ಟವಾಗಿಲ್ಲ. ಹೀಗಾಗಿ, ರುಕ್ಕು ಅವರನ್ನು ಜಾಲತಾಣ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ. ಅಂದಹಾಗೆ, ಈ ಚರ್ಚೆಯು ಆನ್‌ಲೈನ್‌ನಲ್ಲಿ ಎಲ್ಲ ಗಮನ ಸೆಳೆದಿದ್ದು, ರುಕ್ಕು ಅವರು ತಮ್ಮ ನಟನೆಯ ಹೊರತಾಗಿ ಇತರ ಕಾರಣಗಳಿಂದಲೂ ಸುದ್ದಿಯಾಗುತ್ತಿದ್ದಾರೆ.

ಹೇಗಿದೆ ಟಾಕ್ಸಿಕ್?

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್​ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾವು ಭರ್ಜರಿ ನಿರೀಕ್ಷೆಯೊಂದಿಗೆ ತೆರೆಕಂಡಿದ್ದು, ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ವಿಭಿನ್ನ ಹಾಗೂ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಗೋವಾ ಹಿನ್ನೆಲೆಯ ಗ್ಯಾಂಗ್‌ಸ್ಟರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರವು ಅತ್ಯಂತ ಅದ್ಧೂರಿ ಮೇಕಿಂಗ್, ಹೈ-ವೋಲ್ಟೇಜ್ ಆಕ್ಷನ್ ದೃಶ್ಯಗಳು ಹಾಗೂ ಯಶ್ ಅವರ ಅಲ್ಟ್ರಾ-ಸ್ಟೈಲಿಶ್ ಲುಕ್ ಮತ್ತು ಅಭಿನಯದಿಂದ ಗಮನ ಸೆಳೆದಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಗಟ್ಟಿಯಾದ ಕಥೆ ಮತ್ತು ಭಾವನಾತ್ಮಕ ಬಂಧನದ ಕೊರತೆಯಿದೆ ಎಂಬ ಚರ್ಚೆಗೂ ಗ್ರಾಸವಾಗಿದೆ. ನಯನತಾರಾ, ಕಿಯಾರಾ ಅಡ್ವಾಣಿ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದ್ದರೂ, ಚಿತ್ರದ ದೀರ್ಘಾವಧಿ ಮತ್ತು ಕೆಲವೆಡೆ ಕಳಪೆಯೆನಿಸುವ ಚಿತ್ರಕಥೆಯು ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷಿಸುವಂತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಒಟ್ಟಾರೆಯಾಗಿ, ದೃಶ್ಯ ವೈಭವ ಹಾಗೂ ಸ್ಟೈಲಿಶ್ ಆಕ್ಷನ್ ಪ್ರಿಯರಿಗೆ ಈ ಸಿನಿಮಾ ಇಷ್ಟವಾದರೂ, ಬಲವಾದ ಕಥೆಯನ್ನು ನಿರೀಕ್ಷಿಸುವವರಿಗೆ ಇದು ತುಸು ನಿರಾಶೆ ಮೂಡಿಸಿದೆ ಎಂದು ವಿಮರ್ಶಕರು ವಿಶ್ಲೇಷಿಸಿದ್ದಾರೆ, (ಏಜೆನ್ಸೀಸ್​).