Rukmini Vasanth AI Morphed Images Row
- ನಟಿ ರುಕ್ಮಿಣಿ ವಸಂತ್ ಡೀಪ್ಫೇಕ್ ವಿಡಿಯೋ ಹಂಚಿಕೊಂಡಿದ್ದ ಮೂವರು ಅರೆಸ್ಟ್
- ರವಿಕುಮಾರ್, ರಂಜಿತ್, ತೀರ್ಥಹಳ್ಳಿಯ ಚಂದ್ರಕಾಂತ್ ಮೂವರು ಬಂಧನ
- ಆರೋಪಿಗಳ ಮೂರು ಮೊಬೈಲ್ ವಶಕ್ಕೆ ಪಡೆದುಕೊಂಡ ಪೊಲೀಸರು
Rukmini Vasanth AI Morphed Images Row: ಸ್ಯಾಂಡಲ್‌ವುಡ್ ನಟಿ ರುಕ್ಮುಣಿ ವಸಂತ್ ಅವರು ಬಿಕಿನಿ ತೊಟ್ಟು ಸ್ವಿಮ್ಮಿಂಗ್ ಪೂಲ್ನಿಂದ ಎದ್ದು ಬರುವಂತಹ ಎಐ ಡೀಪ್ಫೇಕ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಈ ಬಗ್ಗೆ ಸೈಬರ್ ಪೊಲೀಸರಿಗೆ ನಟಿ ದೂರು ನೀಡಿದ್ದರು. ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಹೌದು, ನಟಿ ರುಕ್ಮಿಣಿ ವಸಂತ್ ಅವರು ಎನ್ನಲಾದ ಅಶ್ಲೀಲ ಫೋಟೋ, ವಿಡಿಯೊಗಳನ್ನು ಅಪ್ಲೋಡ್ ಮಾಡಿದ್ದ ಮೂವರು ಆರೋಪಿಗಳನ್ನು ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧನಕ್ಕೊಳಗಾಗಿದ್ದು ಯಾರು?
ಬಾಗಲಕೋಟೆ ಜಿಲ್ಲೆ ಚಿಲಕಮುಖಿ ಗ್ರಾಮದ ರವಿಕುಮಾರ್ (24), ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಚಂದ್ರಕಾಂತ್ (33) ಹಾಗೂ ಬೆಂಗಳೂರಿನ ನಾಗಸಂದ್ರದ ನಿವಾಸಿ ರಂಜಿತ್ (25) ಬಂಧಿತರು. ನಗರದ ಸೈಬರ್ ಅಪರಾಧ ವಿಭಾಗದ ಪೊಲೀಸ್ ಠಾಣೆಗೆ ರುಕ್ಷ್ಮಿಣಿ ವಸಂತ್ ನೀಡಿದ ದೂರಿನ ಮೇರೆಗೆ ಬಿಎನ್‌ಎಸ್ ಹಾಗೂ ಐಟಿ ಕಾಯ್ದೆಯಡಿಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ರುಕ್ಮಿಣಿ ವಸಂತ್ ಅವರು 29 ಖಾತೆಗಳ ವಿರುದ್ಧ ದೂರು ನೀಡಿದ್ದರು. ಅದರಲ್ಲಿ 9 ಇನ್‌ಸ್ಟಾಗ್ರಾಮ್, 14 ಎಕ್ಸ್ ಖಾತೆಗಳು ಮತ್ತು 6 ಫೇಸ್‌ಬುಕ್ ಖಾತೆಗಳ ವಿರುದ್ಧ ದೂರು ನೀಡಿದ್ದರು. ಇದರ ಮೂಲ ಬಳಕೆದಾರರು ಯಾರು ಎನ್ನುವುದು ಪತ್ತೆ ಹಚ್ಚುವುದು ಪೊಲೀಸರಿಗೆ ಕಷ್ಟವಾಗಿತ್ತು. ಕೊನೆಗೆ ಮೆಟಾ ಎಐಗೆ ಪತ್ರ ಬರೆದಿದ್ದರು. ಸದ್ಯ ನಾನಾ ರೀತಿಯಲ್ಲಿ ತನಿಖೆ ನಡೆಸಿದ ನಂತರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಏನೇನು ವಶಕ್ಕೆ?
ಆರೋಪಿಗಳು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ನಟಿಯ ಭಾವಚಿತ್ರ ಮತ್ತು ವಿಡಿಯೋಗಳನ್ನು ಜಾಲತಾಣದಲ್ಲಿ ಹರಿಯಬಿಟ್ಟು ಅವರ ಗೌರವಕ್ಕೆ ಹಾಗೂ ವೈಯಕ್ತಿಕ ಗೌಪ್ಯತೆಗೆ ಧಕ್ಕೆ ಉಂಟುಮಾಡಿದ್ದರು. ಅಲ್ಲದೇ ನಟಿಗೆ ಮಾನಸಿಕ ಕಿರುಕುಳ ನೀಡಿದ್ದವರನ್ನು ಬಂಧಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ 3 ಮೊಬೈಲ್‌ಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿ, ತನಿಖೆ ಮುಂದುವರಿಸಲಾಗಿದೆ ಎಂದು ಸೈಬರ್ ಕಮಾಂಡ್ ಡಿಜಿಪಿ ಡಾ.ಪ್ರಣವ್ ಮೊಹಾಂತಿ ತಿಳಿಸಿದ್ದಾರೆ, (ಏಜೆನ್ಸೀಸ್).