ರುದ್ರಾಭಿಷೇಕಂ ಚಿತ್ರದ ದೃಶ್ಯ 
ಸ್ಯಾಂಡಲ್‌ವುಡ್

RUDRABHISHEKAM REVIEW: ವೀರಭದ್ರ ಭಕ್ತನ ರುದ್ರಾವತಾರ

ನಿರ್ದೇಶಕ ವಸಂತ್ ಕುಮಾರ್ ಇಲ್ಲಿ ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗುವ ಕಥೆ ಹೇಳಿದ್ದಾರೆ. ಆದರೆ, ನಿರೂಪಣೆ ಹಳೆಯ ಶೈಲಿಯಲ್ಲಿದೆ. ವೀರಗಾಸೆ ಪರಂಪರೆ ಬಗ್ಗೆ ಮತ್ತಷ್ಟು ಆಳವಾಗಿ, ವಿಸ್ತೃತವಾಗಿ ಹೇಳಿದ್ದರೆ ಚಿತ್ರದ ರೋಚಕತೆ ಹೆಚ್ಚುತ್ತಿತ್ತು.

ವಿಜಯವಾಣಿ ಸುದ್ದಿ ಜಾಲ

ಬೆಂಗಳೂರು: ಬೆಂಕಿಪುರದ ಯುವಕ ವೀರಭದ್ರ (ವಿಜಯ್ ರಾಘವೇಂದ್ರ) ದೇವರ ಸೇವೆಯೇ ನಿತ್ಯ ಕಾಯಕ ಎಂದು ನಂಬಿದಾತ. ವೀರಗಾಸೆ ಕಲೆಯನ್ನೇ ನಂಬಿದ್ದ ಆತನ ತಂದೆ ಬಸಯ್ಯನ ಸಾವಿನ ಬಳಿಕ ಆ ಸೇವೆ ನಿಲ್ಲಿಸಿರುತ್ತಾರೆ. ಬಸಯ್ಯ ಸಾವಿಗೀಡಾದ ಬೆನ್ನಲ್ಲೇ ಲಿಂಗಯ್ಯ ಎಂಬಾತನನ್ನು ಊರಿನವರು ಕೂಡಿ ಹಾಕಿರುತ್ತಾರೆ. ಆ ಬಳಿಕ ಊರಿನಲ್ಲಿ ವಿಚಿತ್ರ, ಅಗೋಚರ ಘಟನೆಗಳು ನಡೆಯಲಾರಂಭಿಸುತ್ತವೆ. ವೀರಗಾಸೆ ಸೇವೆ ನಿಲ್ಲಿಸಿರುವುದೇ ಕಾರಣ ಎಂಬುದು ಊರಿನವರ ಮಾತು. 30 ವರ್ಷಗಳ ಕಾಲ ನಾನಾ ಬಗೆಯ ಸಮಸ್ಯೆಗಳನ್ನು ಎದುರಿಸಿ, ಸಾಕಾಗಿ ಊರಿನಲ್ಲಿ ವೀರಗಾಸೆ ಸೇವೆ ಮತ್ತೆ ಆರಂಭಿಸಬೇಕು ಎಂದು ಊರಿನವರು ಗೌಡನನ್ನು (ಬಲ ರಾಜವಾಡಿ) ಒಪ್ಪಿಸುತ್ತಾರೆ. ಜತೆಗೆ ಲಿಂಗಯ್ಯನನ್ನು ಬಿಡುಗಡೆ ಮಾಡುತ್ತಾರೆ. ಲಿಂಗಯ್ಯ ಬಳಿ ಒಂದು ಪೆಟ್ಟಿಗೆ ಇರುತ್ತದೆ. ಅದರಲ್ಲಿರುವ ವೀರಗಾಸೆಯ ರತ್ನಖಚಿತ ಕಿರೀಟ ಹಾಗೂ ಆಭರಣಗಳಿರುತ್ತವೆ. ಅವೆಲ್ಲವನ್ನು ಆತ ವೀರಭದ್ರನಿಗೆ ನೀಡಿ, ವೀರಗಾಸೆಯನ್ನು ಮುಂದುವರಿಸುವಂತೆ ಹೇಳುತ್ತಾನೆ. ಎಷ್ಟೋ ವರ್ಷಗಳಿಂದ ಆ ಕಿರೀಟ ಹಾಗೂ ಆಭರಣಗಳಿಗಾಗಿ ಹೊಂಚು ಹಾಕಿ ಕುಳಿತಿದ್ದ ಊರಿನ ಗೌಡನಿಗೆ ಅದು ನಿರಾಸೆ ಮೂಡಿಸುತ್ತದೆ. ಆಗ ಗೌಡ, ವೀರಭದ್ರನ ವಿರುದ್ಧ ಸೇಡಿಗೆ ನಿಲ್ಲುತ್ತಾನೆ. ಅಲ್ಲಿಂದ ಧರ್ಮ ಮತ್ತು ಅಧರ್ಮ ನಡುವೆ ಯುದ್ಧ ಆರಂಭವಾಗುತ್ತದೆ. ಮುಂದೆ? ‘ರುದ್ರಾಭಿಷೇಕಂ’ ನೋಡಿ. ನಿರ್ದೇಶಕ ವಸಂತ್ ಕುಮಾರ್ ಇಲ್ಲಿ ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗುವ ಕಥೆ ಹೇಳಿದ್ದಾರೆ. ಆದರೆ, ನಿರೂಪಣೆ ಹಳೆಯ ಶೈಲಿಯಲ್ಲಿದೆ. ವೀರಗಾಸೆ ಪರಂಪರೆ ಬಗ್ಗೆ ಮತ್ತಷ್ಟು ಆಳವಾಗಿ, ವಿಸ್ತೃತವಾಗಿ ಹೇಳಿದ್ದರೆ ಚಿತ್ರದ ರೋಚಕತೆ ಹೆಚ್ಚುತ್ತಿತ್ತು. ಉಳಿದಂತೆ ದೈವ ಭಕ್ತಿ, ಸಸ್ಪೆನ್ಸ್, ಆ್ಯಕ್ಷನ್, ಸೆಂಟಿಮೆಂಟ್ ವಿಚಾರಗಳು ಗಮನ ಸೆಳೆಯುತ್ತವೆ. ವಿಜಯ್ ರಾಘವೇಂದ್ರ ಅಭಿನಯದ ಸಹಜವಾಗಿ ಮೂಡಿಬಂದಿದ್ದು, ವೀರಗಾಸೆ ಕಲಾವಿದನಾಗಿ ಕಂಗೊಳಿಸಿದ್ದಾರೆ. ಪ್ರಿಯಾಂಕಾ ತಿಮ್ಮೇಶ್ ಪಾತ್ರಕ್ಕೆ ಮೊದಲರ್ಧಕ್ಕಿಂತ ದ್ವಿತೀಯಾರ್ಧದಲ್ಲಿ ಸ್ಪೇಸ್ ಹೆಚ್ಚು. ಬಲರಾಜವಾಡಿ ಅಭಿನಯ ಚಿತ್ರದ ಹೈಲೈಟ್.