ನಟ ಯಶ್ ಸದ್ಯ "ಟಾಕ್ಸಿಕ್' ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಅದರ ಭಾಗವಾಗಿ ಇತ್ತೀಚೆಗಷ್ಟೆ ಹಿಂದಿ ವಾಹಿನಿಯ ಜನಪ್ರಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಿಂದಿಯಲ್ಲೇ ಮಾತನಾಡಿದ ಅವರು, "ಎಲ್ಲಿಗೇ ಹೋದರೂ ಅಲ್ಲಿನ ಭಾಷೆ ಮತ್ತು ಸಂಸತಿಯನ್ನು ಗೌರವಿಸಬೇಕು ಅನ್ನೋದು ನನ್ನ ಭಾವನೆ. ಹೀಗಾಗಿ ನಾನು ಹಿಂದಿ ಮಾತನಾಡುವಾಗ ಏನಾದರೂ ತಪ್ಪಾದರೆ ಕ್ಷಮಿಸಿ' ಎನ್ನುವ ಮೂಲಕ ಕರ್ನಾಟಕದಲ್ಲಿರುವ ಪರಭಾಷಿಕರಿಗೆ ಪರೋಕ್ಷವಾಗಿ ಕಿವಿಮಾತು ಹೇಳಿದ್ದಾರೆ. ಈ ಸಂದರ್ಶನದಲ್ಲಿ "ಟಾಕ್ಸಿಕ್' ಚಿತ್ರದ ಬೋಲ್ಡ್ ಸನ್ನಿವೇಶಗಳು, ತಾವು ಎದುರುಸಿದ ಸವಾಲು, ಪತ್ನಿ ರಾಧಿಕಾ ಪಂಡಿತ್ ಸ್ವೀಕರಿಸಿದ ರೀತಿ, "ಧುರಂಧರ್ 2' ಮುಂದೆ "ಟಾಕ್ಸಿಕ್' ಪೋಸ್ಟ್-ಪೋನ್ ಆಗಿದ್ದು... ಹೀಗೆ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಕಳೆದುಕೊಳ್ಳುವ ಭಯವಿಲ್ಲ
"ಧುರಂಧರ್ 2'ಗೆ ಹೆದರಿ "ಟಾಕ್ಸಿಕ್' ಮುಂದೂಡಿದರು ಎಂದು ಹಲವರು ಟ್ರೋಲ್ ಮಾಡಿದ್ದರು. ಅದಕ್ಕೆ ಯಶ್, "ಹೋದರೆ ₹100ರಿಂದ ₹200 ಕೋಟಿ ಹಣ ಹೋಗಬಹುದಷ್ಟೇ. ನನಗೆ ಕಳೆದುಕೊಳ್ಳುವ ಭಯವಿಲ್ಲ. ನಾನು ಏನೂ ಇಲ್ಲದೇ ಬಂದವನು. ಈಗ ಗಳಿಸಿರುವುದೆಲ್ಲವೂ ಪ್ಲಸ್. "ಟಾಕ್ಸಿಕ್' ಮುಂದೂಡಲು ನಾನು ಒಪ್ಪಿರಲಿಲ್ಲ. ಆದರೆ, ಕೊಲ್ಲಿ ರಾಷ್ಟ್ರಗಳ ಯುದ್ಧ, ಅಂತಾರಾಷ್ಟ್ರೀಯ ಬಿಡುಗಡೆಗೆ ಮಾತುಕತೆಗಳು ನಡೆಯುತ್ತಿದ್ದ ಕಾರಣ ಸಿನಿಮಾ ಇನ್ನೂ ರೆಡಿಯಿಲ್ಲ ಅಂತನ್ನಿಸಿ ಮುಂದೂಡಿದೆವು' ಎಂದಿದ್ದಾರೆ.
ವಯಸ್ಕರಿಗೆ ಮಾತ್ರ
"ಟಾಕ್ಸಿಕ್' ಬೋಲ್ಡ್ ಕಂಟೆಂಟ್ ಬಗ್ಗೆ, "ಎಲ್ಲರೂ ಆ್ಯಕ್ಷನ್, ರೊಮ್ಯಾನ್ಸ್ ಮಾಡುತ್ತಿದ್ದಾರೆ. ಆದರೆ, ನಾನು ಮಾಡಿದರೆ ಮಾತ್ರ ಸುದ್ದಿಯಾಗುತ್ತದೆ' ಎಂದಿರುವ ಯಶ್, "ಅಪ್ಪ-ಅಮ್ಮನ ಜತೆ ಕುಳಿತು ನೋಡಲಾಗದ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದೆ ನಿಜ. ಆದರೆ, ಕಾಲ ಬದಲಾದಂತೆ ನಮ್ಮ ಆಲೋಚನೆಗಳೂ ಬದಲಾಗುತ್ತಿರುತ್ತವೆ. ಕಲೆ ಕೆಲವೊಮ್ಮೆ ನಮ್ಮನ್ನು ನಮ್ಮ ಕಂಫರ್ಟ್ನಿಂದ ಹೊರಬಂದು ಕೆಲಸ ಮಾಡುವಂತೆ ಮಾಡುತ್ತದೆ. ಮಕ್ಕಳು ಮತ್ತು ಮಕ್ಕಳಂತೆ ಯೋಚಿಸುವವರು ದೂರ ಇರಿ ಅಂತ "ಎ ಫೇರಿಟೇಲ್ ಫಾರ್ ಗ್ರೋನಪ್ಸ್' ಎಂದು ಟೈಟಲ್ನಲ್ಲೇ ತಿಳಿಸಿದ್ದೇವೆ. ಪ್ರಪಂಚ ಕೇವಲ ಗಂಡಸರಿಗಷ್ಟೇ ಮೀಸಲಾಗಿದೆಯಾ? ಹೆಣ್ಣುಮಕ್ಕಳು ತಮ್ಮ ಆಸೆ, ಕಲ್ಪನೆಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡುವುದು ತಪ್ಪಾ? ಎಂದು ಸಮಾಜದ ಕಟ್ಟಳೆಗಳನ್ನು ಪ್ರಶ್ನಿಸಿದ್ದೇವಷ್ಟೇ. ಒಬ್ಬ ವ್ಯಕ್ತಿಯಲ್ಲಿ ನೂರು ಒಳ್ಳೆ ವಿಷಯಗಳಿದ್ದು, ಎರಡು ತಪು$್ಪಗಳನ್ನು ಕಂಡರೆ ಅದನ್ನೇ ಎತ್ತಾಡುವವರು ಹೆಚ್ಚು. ನಾನು "ತಬಾಹಿ' ಹಾಡಿನಲ್ಲಿ ಕಿಸ್ ಕೂಡ ಮಾಡಿಲ್ಲ. ಅದು ಅಶ್ಲೀಲವಾಗೂ ಇಲ್ಲ' ಎಂದು ಹೇಳಿಕೊಂಡಿದ್ದಾರೆ.
ರಾಧಿಕಾ ನನ್ನ ಪಿಲ್ಲರ್
ಇನ್ನು "ಟಾಕ್ಸಿಕ್' ಬೋಲ್ಡ್ ಕಂಟೆಂಟ್ ಬಗ್ಗೆ ಪತ್ನಿ ರಾಧಿಕಾ ಪಂಡಿತ್ಗೂ ಬೇಸರವಾಗಿತ್ತಂತೆ. ಆ ಬಗ್ಗೆ ಯಶ್, "ರಾಧಿಕಾ ನನ್ನ ಬಳಿ ಎಲ್ಲ ಇದ್ದಾಗ ಬಂದವರಲ್ಲ, ನನ್ನ ಬಳಿ ಏನೂ ಇಲ್ಲದಿರುವಾಗ ಬಂದವರು. ಧಾರಾವಾಹಿ ದಿನಗಳಿಂದಲೂ ಇಬ್ಬರೂ ಒಟ್ಟಿಗೆ ಬೆಳೆದಿದ್ದೇವೆ. ನನ್ನ ಜೀವನದ ಮುಖ್ಯ ಪಿಲ್ಲರ್ ಅವರು. ಬೋಲ್ಡ್ ಸನ್ನಿವೇಶಗಳ ವಿಷಯದಲ್ಲಿ ಆಕೆಗೆ ಬೇಸರವಾಗಿರಬಹುದು. ಆದರೆ, ನನ್ನನ್ನು ಸಂಪೂರ್ಣವಾಗಿ ನಂಬುತ್ತಾರೆ. ಇದು ಒಬ್ಬ ನಟ ಮಾಡುತ್ತಿರುವುದು, ಪತಿ ಅಲ್ಲ ಅಂತ ಅವರಿಗೂ ಗೊತ್ತು. ಶೂಟಿಂಗ್ ಸಮಯದಲ್ಲಿ ನನಗೂ ಕಂಫರ್ಟ್ ಇರಲಿಲ್ಲ' ಎಂದು ಹೇಳಿಕೊಂಡಿದ್ದಾರೆ.