ಬೆಂಗಳೂರು: ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಂಗ ವಿಚಾರಣೆಯಲ್ಲಿ ಯಾರೂ ನಿರೀಕ್ಷಿಸಿದ ಸ್ಫೋಟಕ ಬೆಳವಣಿಗೆಯೊಂದು ನಡೆದಿದೆ. ಎ2 ಆರೋಪಿ ನಟ ದರ್ಶನ್ ( Actor Darshan ) ಹಾಗೂ ಅವರ ಗ್ಯಾಂಗ್ ವಿರುದ್ಧ ನಡೆಯುತ್ತಿರುವ ಕಾನೂನು ವಿಚಾರಣೆ ವೇಳೆ ಪ್ರತ್ಯಕ್ಷ ಸಾಕ್ಷಿಯೊಬ್ಬ ಉಲ್ಟಾ ಹೊಡೆದಿದ್ದಾನೆ.
ನಗರದ 59ನೇ ಸಿಸಿಎಚ್ ಕೋರ್ಟ್ನಲ್ಲಿ ಸಾಕ್ಷಿ ವಿಚಾರಣೆ ವೇಳೆ, ಪ್ರಮುಖ ಪ್ರತ್ಯಕ್ಷ ಸಾಕ್ಷಿ ಪುನೀತ್ ತಾನು ಈ ಹಿಂದೆ ಪೊಲೀಸರು ಮತ್ತು ನ್ಯಾಯಾಧೀಶರ ಮುಂದೆ ನೀಡಿದ್ದ ಹೇಳಿಕೆಯನ್ನು ಸಂಪೂರ್ಣವಾಗಿ ಬದಲಾಯಿಸಿರುವುದು ತನಿಖಾ ತಂಡಕ್ಕೆ ಭಾರಿ ಹಿನ್ನಡೆಯಾಗಿ ಪರಿಣಮಿಸಿದೆ.
ವಿಚಾರಣೆ ವೇಳೆ ನ್ಯಾಯಾಲಯದ ಮುಂದೆ ನಿಂತು ಹೇಳಿಕೆ ನೀಡಿದ ಪುನೀತ್, ಕೃತ್ಯ ನಡೆದ ದಿನ ಶೆಡ್ ಬಳಿಗೆ ನಟ ದರ್ಶನ್ ಆಗಲಿ, ಪವಿತ್ರಾ ಗೌಡ ಅವರಾಗಲಿ ಅಥವಾ ಈ ಪ್ರಕರಣದ ಯಾವುದೇ ಆರೋಪಿಗಳಾಗಲಿ ಬಂದೇ ಇರಲಿಲ್ಲ ಎಂದು ಪ್ರತಿಪಾದಿಸಿದ್ದಾನೆ. ಅಷ್ಟೇ ಅಲ್ಲದೆ, ಕೋರ್ಟ್ಗೆ ಖುದ್ದಾಗಿ ಹಾಜರಿದ್ದ ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ತಂದಿದ್ದ ಯಾವುದೇ ಆರೋಪಿಗಳನ್ನು ತಾವು ಘಟನಾ ಸ್ಥಳದಲ್ಲಿ ನೋಡಿಯೇ ಇಲ್ಲವೆಂದು ತಿಳಿಸಿ ಕೋರ್ಟ್ನಲ್ಲಿದ್ದ ಎಲ್ಲರನ್ನೂ ಅಚ್ಚರಿಗೆ ತಳ್ಳಿದ್ದಾನೆ. ಈ ಮೂಲಕ ಈ ಹಿಂದೆ ನಿಯಮಾವಳಿ ಪ್ರಕಾರ ನ್ಯಾಯಾಧೀಶರ ಮುಂದೆ ಸಿಆರ್ಪಿಸಿ 164 (CRPC 164) ರ ಅಡಿಯಲ್ಲಿ ನೀಡಿದ್ದ ಅತ್ಯಂತ ಮಹತ್ವದ ಹೇಳಿಕೆಯಿಂದ ಆತ ಸಂಪೂರ್ಣವಾಗಿ ಹಿಂದೆ ಸರಿದಿದ್ದಾನೆ.
ಹಿಂದೆ ನೀಡಿದ್ದ ಅಧಿಕೃತ ಹೇಳಿಕೆಗೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ, ನ್ಯಾಯಾಲಯವು ಪುನೀತ್ನನ್ನು ತಕ್ಷಣವೇ 'ಪ್ರತಿಕೂಲ ಸಾಕ್ಷಿ' ಎಂದು ಪರಿಗಣಿಸಿದೆ. ಸಾಕ್ಷಿಯ ಭಾಗಶಃ ಹೇಳಿಕೆಯನ್ನು ಮಾತ್ರ ದಾಖಲಿಸಿಕೊಂಡಿರುವ ಪೀಠವು, ಪ್ರಕರಣದ ಮುಂದಿನ ಸುದೀರ್ಘ ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಿ ಆದೇಶಿಸಿದೆ.
ಪ್ರಕರಣಕ್ಕೆ ತೀವ್ರ ತಿರುವು ನೀಡಬಲ್ಲ ಪ್ರತ್ಯಕ್ಷ ಸಾಕ್ಷಿಯೇ ಹೀಗೆ ದಿಢೀರನೆ ಮಾತು ಬದಲಿಸಿ ಪ್ರತಿಕೂಲ ಸಾಕ್ಷಿಯಾಗಿ ಬದಲಾಗಿರುವುದು, ಕೊಲೆ ಪ್ರಕರಣದ ಈ ನಿರ್ಣಾಯಕ ತನಿಖಾ ಹಂತದಲ್ಲಿ ತನಿಖಾಧಿಕಾರಿಗಳು ಹಾಗೂ ಪ್ರಾಸಿಕ್ಯೂಷನ್ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಅಂದಹಾಗೆ, ಈ ಪುನೀತ್ ನಟ ದರ್ಶನ್ ಅವರ ಅಭಿಮಾನಿಯಾಗಿದ್ದು, 'ಡಿ ಕಂಪೆನಿ' ಎಂಬ ಫ್ಯಾನ್ ಪೇಜಿನ ಅಡ್ಮಿನ್ ಕೂಡ ಆಗಿದ್ದಾನೆ ಎನ್ನಲಾಗಿದೆ. ನಟ ದರ್ಶನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಈತ ಈ ಪ್ರಕರಣದ ಪ್ರಮುಖ ಪ್ರತ್ಯಕ್ಷ ಸಾಕ್ಷಿಯಾಗಿದ್ದ. ವಿಚಾರಣೆಗೆ ನಿರಂತರವಾಗಿ ಗೈರುಹಾಜರಾಗುತ್ತಿದ್ದ ಕಾರಣ ನ್ಯಾಯಾಲಯವು ಈತನ ವಿರುದ್ಧ ಸಮನ್ಸ್ ಹಾಗೂ ಬಂಧನದ ವಾರಂಟ್ ಕೂಡ ಹೊರಡಿಸಿತ್ತು.
ಕೊನೆಗೂ ವಾರಂಟ್ ಭೀತಿಯಿಂದ ವಿಚಾರಣೆಗೆ ಹಾಜರಾದ ಪುನೀತ್, ಸಂಪೂರ್ಣವಾಗಿ ದರ್ಶನ್ ತಂಡಕ್ಕೆ ಲಾಭವಾಗುವಂತಹ ಭಿನ್ನ ಹೇಳಿಕೆ ನೀಡಿರುವುದು ಪ್ರಕರಣದಲ್ಲಿ ದೊಡ್ಡ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.