ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಬಿಗ್ ಶಾಕ್: ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್! ​Actor Darshan  
ಸ್ಯಾಂಡಲ್‌ವುಡ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಬಿಗ್ ಶಾಕ್: ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್! ​Actor Darshan

ಪ್ರಮುಖ ಮುಖ್ಯಾಂಶಗಳು

  • ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಹಿನ್ನಡೆ
  • ಪ್ರದೋಶ್ ಸಲ್ಲಿಸಿದ್ದ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್
  • ವಿಚಾರಣೆ ಮುಗಿಯುವವರೆಗೆ ಪ್ರದೋಶ್ ಕಡ್ಡಾಯ ಜೈಲುವಾಸ
  • ಸುಳ್ಳು ಹೇಳಿದರೆ ಮತ್ತೆ ಆರೋಪಿಯಾಗಿ ಪರಿಗಣಿಸಲು ಎಚ್ಚರಿಕೆ
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್​ಗೆ ( ​Actor Darshan ) ಭಾರಿ ಸಂಕಷ್ಟ ಎದುರಾಗಿದೆ. ತಮ್ಮದೇ ಗ್ಯಾಂಗ್​ನಲ್ಲಿದ್ದ ಎ14 ಆರೋಪಿ ಪ್ರದೋಶ್ ತನ್ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 59ನೇ ಸಿಸಿಎಚ್ ನ್ಯಾಯಾಲಯ ಇಂದು (ಆಗಸ್ಟ್​ 25) ಅಂಗೀಕರಿಸಿದೆ. ಕೋರ್ಟ್​ನ ಈ ಆದೇಶದಿಂದಾಗಿ ದರ್ಶನ್​ ಪಾಲಿಗೆ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿಯಾಗಿದೆ.
ಪ್ರದೋಷ್‌ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲು ಸಿಸಿಎಚ್‌ 59ನೇ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಕೆಲವು ಕಟ್ಟುನಿಟ್ಟಿನ ಶರತ್ತುಗಳನ್ನು ವಿಧಿಸಿ ಅನುಮೋದನೆ ನೀಡಿದ್ದಾರೆ. ಅದೇನೆಂದರೆ, ಪ್ರದೋಶ್​ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ತಿಳಿದಿರುವ ಪ್ರತಿಯೊಂದು ಸತ್ಯಾಂಶವನ್ನು ಯಾವುದೇ ಮುಚ್ಚುಮರೆಯಿಲ್ಲದೆ ನ್ಯಾಯಾಲಯದ ಮುಂದೆ ಬಾಯಿಬಿಡಬೇಕು. ಅಲ್ಲದೆ, ವಿಚಾರಣೆಯ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುವವರೆಗೆ ಪ್ರದೋಷ್ ಕಡ್ಡಾಯವಾಗಿ ಜೈಲುವಾಸ ಅನುಭವಿಸಬೇಕಾಗುತ್ತದೆ. ಒಂದು ವೇಳೆ ನ್ಯಾಯಾಲಯದ ಮುಂದೆ ಸುಳ್ಳು ಹೇಳಿಕೆಗಳನ್ನು ನೀಡಿದರೆ ಅಥವಾ ತಪ್ಪು ಮಾಹಿತಿ ಒದಗಿಸಿದರೆ, ಆತನನ್ನು ಮತ್ತೆ ನೇರವಾಗಿ ಆರೋಪಿಯನ್ನಾಗಿಯೇ ಪರಿಗಣಿಸಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಹಾಗೂ ಪ್ರಾಸಿಕ್ಯೂಷನ್ ಅಗತ್ಯ ತೀರ್ಮಾನ ಕೈಗೊಳ್ಳಲಿದೆ ಎಂದು ಕೋರ್ಟ್​ ಹೇಳಿದೆ.
ಈ ಹಿಂದಿನ ವಿಚಾರಣೆಯಲ್ಲಿ ಕೋರ್ಟ್​ ಮುಂದೆ ಹೇಳಿಕೆ ನೀಡಿದ್ದ ಪ್ರದೋಶ್​, ತಾನು ಎಂಬಿಎ ಫೈನಾನ್ಸ್‌ ಓದಿದ್ದು, ಇಂಗ್ಲಿಷ್‌ ಓದಲು ಮತ್ತು ಬರೆಯಲು ಬರುತ್ತದೆ ಎಂದು ಉತ್ತರಿಸಿದ್ದ. ಘಟನೆಗೆ ಮುಂಚೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ ಎಂದು ತಿಳಿಸಿದ್ದ. ತಾನು ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗದೆ, ಸ್ವಯಂಪ್ರೇರಿತರಾಗಿ ರೇಣುಕಾಸ್ವಾಮಿ ಕೊಲೆಯಲ್ಲಿ ತನ್ನ ಮತ್ತು ಇತರರ ಪಾತ್ರವೇನು ಎಂಬ ಸತ್ಯಾಂಶವನ್ನು ಬಹಿರಂಗಪಡಿಸಲು ಈ ಅರ್ಜಿ ಹಾಕಿದ್ದೇನೆ ಎಂದು ಸ್ಪಷ್ಟಪಡಿಸಿದ್ದ. ಇದಕ್ಕೂ ಮುಂಚೆ ಪ್ರದೋಶ್​ ಮಾಫಿ ಸಾಕ್ಷಿ ಅರ್ಜಿಯನ್ನು ಪರಿಗಣಿಸದಂತೆ ದರ್ಶನ್​ ಪರ ವಕೀಲರು ಕೂಡ ವಾದ ಮಂಡನೆ ಮಾಡಿದ್ದರು. ಆದರೆ, ಅಂತಿಮವಾಗಿ ನ್ಯಾಯಾಲಯ ಪ್ರದೋಶ್​ ಅರ್ಜಿಯನ್ನು ಪರಿಗಣಿಸಿದೆ. ಇದರಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ತಿರುವ ಸಿಕ್ಕಂತಾಗಿದ್ದು, ದರ್ಶನ್​ ಮತ್ತು ಇತರ ಆರೋಪಿಗಳ ಎದೆಯಲ್ಲಿ ನಡುಕ ಶುರುವಾಗಿದೆ.

ಪ್ರದೋಶ್ ಮಾಫಿ ಸಾಕ್ಷಿ​ ಅರ್ಜಿಯಲ್ಲಿ ಏನಿದೆ?

ಪ್ರದೋಶ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿಯ ಪ್ರಕಾರ, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ, ನಟ ದರ್ಶನ್ ಅವರ ಆಪ್ತ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್​ಗಳನ್ನು ಕಳುಹಿಸಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಅಪಹರಿಸಿ ಕರೆತಂದು ಪಟ್ಟಣಗೆರೆ ಶೆಡ್​ನಲ್ಲಿ ಬಂಧಿಸಿ, ಹಲ್ಲೆ ನಡೆಸಲಾಯಿತು. ಈ ವೇಳೆ ರೇಣುಕಾಸ್ವಾಮಿಯ ತಲೆಯಿಂದ ರಕ್ತಸುರಿಯುತ್ತಿತ್ತು ಎಂದು ಪ್ರದೋಶ್ ತಿಳಿಸಿದ್ದಾನೆ. ಅಷ್ಟೇ ಅಲ್ಲದೆ, ಪವಿತ್ರಾ ಗೌಡ ಕೂಡ ಸ್ಥಳಕ್ಕೆ ಬಂದಿದ್ದಳು ಹಾಗೂ ತನ್ನ ಚಪ್ಪಲಿಯಿಂದ ರೇಣುಕಾಸ್ವಾಮಿಗೆ ಹೊಡೆದಿದ್ದಳು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇದಿಷ್ಟೇ ಅಲ್ಲದೆ, ಇತರೆ ಆರೋಪಿಗಳು ರೇಣುಕಾಸ್ವಾಮಿಯ ಒಳಉಡುಪನ್ನು ಕೆಳಗಿಳಿಸಿ, ಆತನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದರು. ನಂದೀಶ್, ಪವನ್ ಮತ್ತು ನಾಗರಾಜ್ ಅವರು ಮರದ ತುಂಡುಗಳು ಹಾಗೂ ನೈಲಾನ್ ಹಗ್ಗದಿಂದ ಹಲ್ಲೆ ನಡೆಸಿದ್ದು, ನಂದೀಶ್ ಅವರು ರೇಣುಕಾಸ್ವಾಮಿಯನ್ನು ಟಾಟಾ ಏಸ್ ವಾಹನಕ್ಕೆ ನೇಣುಹಾಕಲು ಯತ್ನಿಸಿದರೆ, ನಾಗರಾಜ್ ನೈಲಾನ್ ಹಗ್ಗದಿಂದ ಹಾಗೂ ಇತರೆ ಆರೋಪಿಗಳು ಮರದ ತುಂಡುಗಳಿಂದ ನಿರಂತರವಾಗಿ ಹೊಡೆದಿದ್ದಾರೆ ಎಂದು ಪ್ರದೋಶ್ ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಗುಪ್ತಾಂಗಗಳಿಗೆ ಪದೇಪದೆ ಒದ್ದ ದರ್ಶನ್

ಪ್ರದೋಶ್​ ತನ್ನ ಅರ್ಜಿಯಲ್ಲಿ ಮತ್ತಷ್ಟು ಗಂಭೀರ ಆರೋಪಗಳನ್ನು ಮಾಡಿದ್ದು, ಸಂತ್ರಸ್ತನ ಮೊಬೈಲ್‌ನಲ್ಲಿದ್ದ ಸಂದೇಶಗಳನ್ನು ಜೋರಾಗಿ ಓದುತ್ತಿದ್ದ ಸಮಯದಲ್ಲಿ ದರ್ಶನ್ ಅವರೇ ನೈಲಾನ್ ಹಗ್ಗವನ್ನು ತೆಗೆದುಕೊಂಡು ರೇಣುಕಾಸ್ವಾಮಿ ಅವರ ಕೈ ಹಾಗೂ ಬೆನ್ನಿನ ಮೇಲೆ ಹಲವು ಬಾರಿ ಹೊಡೆದಿದ್ದಾರೆ. ಮತ್ತೊಂದು ಹಂತದಲ್ಲಿ ರೇಣುಕಾಸ್ವಾಮಿಯನ್ನು ಸಂಪೂರ್ಣವಾಗಿ ನಗ್ನಗೊಳಿಸಿ, ದರ್ಶನ್ ಅವರೇ ಆತನ ಗುಪ್ತಾಂಗಗಳಿಗೆ ಪದೇಪದೆ ಒದ್ದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ರೀತಿಯ ಸತತ ಹಲ್ಲೆ ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂದು ತಾನು ಒಂದಕ್ಕಿಂತ ಹೆಚ್ಚು ಬಾರಿ ಮಧ್ಯಪ್ರವೇಶಿಸಿ ಎಚ್ಚರಿಕೆ ನೀಡಿರುವುದಾಗಿ ಪ್ರದೋಶ್ ತಿಳಿಸಿದ್ದಾರೆ. ಅಲ್ಲದೆ, ಸಂತ್ರಸ್ತನಿಗೆ ತಿನ್ನಲು ಆಹಾರ ಮತ್ತು ನೀರು ನೀಡಿದ ಬಳಿಕವೂ ದರ್ಶನ್ ರೇಣುಕಾಸ್ವಾಮಿ ಅವರ ಕತ್ತು ಹಾಗೂ ಎದೆಗೆ ಒದ್ದಿದ್ದರಿಂದ ಆತ ಕುಸಿದುಬಿದ್ದಿದ್ದಾನೆ. ಅಷ್ಟೇ ಅಲ್ಲದೆ, ದರ್ಶನ್ ತಮ್ಮ ಎರಡೂ ಕಾಲುಗಳನ್ನು ಸಂತ್ರಸ್ತನ ಎದೆಯ ಮೇಲೆ ಇರಿಸಿ ತುಳಿದರು, ಬಳಿಕ ನಾನು ಮತ್ತೆ ಮಧ್ಯಪ್ರವೇಶಿಸಿ ಅವರನ್ನು ದೂರ ಕರೆದುಕೊಂಡು ಹೋದೆ ಎಂದು ಪ್ರದೋಶ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಪ್ರಕರಣ ಮುಚ್ಚಿಹಾಕಲು ಕಟ್ಟುಕತೆ

ಇನ್ನೂ ರೇಣುಕಾಸ್ವಾಮಿ ಮರಣದ ಬಳಿಕ ಕೃತ್ಯವನ್ನು ಮುಚ್ಚಿಹಾಕಲು ನಡೆದ ಯತ್ನಗಳ ಬಗ್ಗೆಯೂ ಅರ್ಜಿಯಲ್ಲಿ ವಿವರಣೆ ನೀಡಲಾಗಿದೆ. ಈ ದುರ್ಘಟನೆ ನಂತರದ ಪರಿಸ್ಥಿತಿಯನ್ನು ಸಮರ್ಥಿಸಿಕೊಳ್ಳಲು ಸಹಾಯ ಮಾಡದಿದ್ದರೆ ತಾನೇ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಟ ದರ್ಶನ್ ಬೆದರಿಕೆ ಹಾಕಿದ್ದರು ಎಂದು ಪ್ರದೋಶ್ ಆರೋಪಿಸಿದ್ದಾರೆ. ನಿಜವಾದ ಸಂಗತಿಯನ್ನು ಬಚ್ಚಿಟ್ಟು, ಬೇರೆಯದೇ ಕಥೆಯನ್ನು ಸೃಷ್ಟಿಸುವ ಕುರಿತು ಆ ಸಂದರ್ಭದಲ್ಲಿ ಸಾಕಷ್ಟು ಚರ್ಚೆಗಳು ನಡೆದವು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ರೇಣುಕಾಸ್ವಾಮಿಯನ್ನು ಶೆಡ್‌ಗೆ ಕರೆತಂದವರು ಪೊಲೀಸರ ಮುಂದೆ ಶರಣಾಗಬೇಕೇ? ಅಥವಾ ಬೇಡವೇ? ಎಂಬುದರ ಕುರಿತು ಚರ್ಚಿಸಿದ ನಂತರ, ನಾನು ಮತ್ತು ಇತರರು ದರ್ಶನ್ ಅವರ ನಿವಾಸಕ್ಕೆ ಮರಳಿ ತೆರಳಿದ್ದೆವು. ತನಿಖೆಯನ್ನು ದಿಕ್ಕು ತಪ್ಪಿಸಲು ಬೇರೆದೇ ಆದ ಸುಳ್ಳು ಕಥೆಯನ್ನು ರೂಪಿಸುವ ಬಗ್ಗೆ ಗುಂಪು ಚರ್ಚೆ ನಡೆಯಿತು. ಈ ವೇಳೆ, ರಾಘವೇಂದ್ರ ಶರಣಾಗಲು ಒಪ್ಪಿಕೊಂಡ ಮತ್ತು ಇನ್ನೂ ಕೆಲವರನ್ನು ವ್ಯವಸ್ಥೆ ಮಾಡಬೇಕು ಎಂದು ವಿನಯ್, ದರ್ಶನ್‌ಗೆ ತಿಳಿಸಿದ್ದಾನೆ ಎಂದು ಪ್ರದೋಶ್​ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇದಾದ ನಂತರ ದರ್ಶನ್ ಹಣದ ಬ್ಯಾಗ್‌ನೊಂದಿಗೆ ಬಂದು ನಾಗರಾಜಗೆ 5 ಲಕ್ಷ ರೂಪಾಯಿ ಹಾಗೂ ವಿನಯ್‌ಗೆ 10 ಲಕ್ಷ ರೂಪಾಯಿಗಳನ್ನು ನೀಡಿದರು ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತರಲಾಗಿದ್ದು, ಜಗಳದ ವೇಳೆ ಕೊಲೆಯಾಗಿದೆ ಎಂದು ರಾಘವೇಂದ್ರ, ಕಾರ್ತಿಕ್ ಅಲಿಯಾಸ್ ಕಪ್ಪೆ ಮತ್ತು ನಿಖಿಲ್ ಪೊಲೀಸರ ಮುಂದೆ ಶರಣಾಗುವಂತೆ ಮಾಡಲು ಗುಂಪು ಸಂಚು ರೂಪಿಸಲಾಗಿತ್ತು ಎಂದು ಪ್ರದೋಶ್ ತಿಳಿಸಿದ್ದಾರೆ.

ಜಾಮೀನಿನ ಭರವಸೆ

ಪೊಲೀಸರ ಮುಂದೆ ಶರಣಾಗುವ ಆರೋಪಿಗಳಿಗೆ ಜಾಮೀನು ದೊರಕಿಸಿಕೊಡುವುದಾಗಿ ಭರವಸೆ ನೀಡಲಾಗಿತ್ತು ಮತ್ತು ಮೃತದೇಹವನ್ನು ವಿಲೇವಾರಿ ಮಾಡಲು ಪ್ರಯತ್ನಿಸಲಾಗಿತ್ತು ಎಂಬ ಗಂಭೀರ ಆರೋಪವನ್ನೂ ಮಾಡಲಾಗಿದೆ. ಚಾಲಕನೊಬ್ಬ ಸಹಾಯ ಮಾಡಲು ನಿರಾಕರಿಸಿದ ನಂತರ, ರೇಣುಕಾಸ್ವಾಮಿಯ ಮೃತದೇಹವನ್ನು ಮೂಲ ಅಪರಾಧ ಸ್ಥಳದಿಂದ ಬಿಳಿ ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ಸುಮನಹಳ್ಳಿ ಬಳಿಯ ಪ್ರದೇಶಕ್ಕೆ ಸಾಗಿಸಲಾಯಿತು ಮತ್ತು ಆ ವಾಹನದ ಮುಂಭಾಗ ಹಾಗೂ ಹಿಂಭಾಗದ ನಂಬರ್ ಪ್ಲೇಟ್‌ಗಳನ್ನು ತೆಗೆದುಹಾಕಲಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಅಪರಾಧವು ಬೇರೆಡೆಯೇ ನಡೆದಿದೆ ಎಂಬ ಭ್ರಮೆಯನ್ನು ಮೂಡಿಸಲು ಮೃತದೇಹವನ್ನು ಸುಮನಹಳ್ಳಿ ಬಳಿಯ ಚರಂಡಿಗೆ ಎಸೆಯಲಾಗಿತ್ತು ಎಂದು ಪ್ರದೋಶ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಕ್ಷಮಿಸಿ ಎಂದು ಪ್ರದೋಶ್​ ಮನವಿ

ಕೊಲೆಯ ಬಗ್ಗೆ ತನಗೆ ತಿಳಿದಿರುವ ಎಲ್ಲಾ ಸತ್ಯಾಂಶಗಳನ್ನು ಹಾಗೂ ಇತರ ಆರೋಪಿಗಳ ಪಾತ್ರದ ಕುರಿತು 'ಪೂರ್ಣ ಮತ್ತು ನಿಜವಾದ ವಿವರಣೆ' ನೀಡಲು ಸಿದ್ಧವಿರುವುದಾಗಿ ಪ್ರದೋಶ್ ನ್ಯಾಯಾಲಯಕ್ಕೆ ತಿಳಿಸಿದ್ದು, ಈ ಪ್ರಕರಣದ ಸಾಕ್ಷಿಯಾಗಿ ತನ್ನ ಈ ಸಾಕ್ಷ್ಯವು ಪ್ರಾಸಿಕ್ಯೂಷನ್‌ನ ವಾದಕ್ಕೆ ಅತ್ಯಂತ ನಿರ್ಣಾಯಕ ಕೊಂಡಿಯಾಗಲಿದೆ ಎಂದು ಪ್ರದೋಶ್​ ತನ್ನ ಅರ್ಜಿಯಲ್ಲಿ ವಾದಿಸಿದ್ದರು. ಈ ಹೈಪ್ರೊಫೈಲ್ ಕೊಲೆ ಪ್ರಕರಣದ ಸುತ್ತಮುತ್ತಲಿನ ಪರಿಸ್ಥಿತಿಗಳ ಬಗ್ಗೆ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸುವ ಮೂಲಕ ಕಾನೂನು ಕ್ಷಮೆ (ಅಪ್ರೂವರ್) ಕೋರಿ ನ್ಯಾಯಾಲಯದ ಮೊರೆ ಹೋದ ಮೊಟ್ಟಮೊದಲ ಆರೋಪಿ ಪ್ರದೋಶ್ ಆಗಿದ್ದು, ಅವರ​ ಅರ್ಜಿಯನ್ನು ಕೋರ್ಟ್​

ಪುರಸ್ಕರಿಸಿದೆ.

ರಕ್ಷಣೆ ಕೋರಿದ ಪ್ರದೋಶ

ನ್ಯಾಯಾಂಗ ಬಂಧನದಲ್ಲಿರುವಾಗ ನಟ ದರ್ಶನ್ ಹಾಗೂ ಇತರ ಆರೋಪಿಗಳಿಂದ ತನಗೆ ಅಪಾಯವಿದ್ದು, ರಕ್ಷಣೆ ನೀಡುವಂತೆ ಪ್ರದೋಶ್ ಪ್ರತ್ಯೇಕ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. ಸಹ-ಆರೋಪಿಗಳೊಂದಿಗೆ ಒಂದೇ ಬ್ಯಾರಕ್‌ನಲ್ಲಿ ಇರುವುದು ತನ್ನ ಮೇಲೆ ಒತ್ತಡ ಅಥವಾ ಬೆದರಿಕೆಗೆ ಕಾರಣವಾಗಬಹುದು ಎಂದು ತಿಳಿಸಿರುವ ಪ್ರದೋಶ್​​, ಕಾರಾಗೃಹ ಪ್ರಾಧಿಕಾರಗಳು ತಮ್ಮನ್ನು ಪ್ರತ್ಯೇಕ ಕೋಣೆಯಲ್ಲಿರಿಸಬೇಕು ಹಾಗೂ ಮುಂದಿನ ವಿಚಾರಣೆಗಳ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸುವಾಗಲೂ ಪ್ರತ್ಯೇಕವಾಗಿ ಕರೆತರಬೇಕು ಎಂದು ಕೋರಿದ್ದಾರೆ.

ಚಾರ್ಜ್​ಶೀಟ್​ನಲ್ಲಿ ಏನಿದೆ?

ದರ್ಶನ್ ಅವರಿಂದ 30 ಲಕ್ಷ ರೂಪಾಯಿಗಳನ್ನು ಪಡೆದಿರುವ ಪ್ರದೋಶ್, ಇತರ ಆರೋಪಿಗಳ ಶರಣಾಗತಿಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ. ರೇಣುಕಾಸ್ವಾಮಿಯನ್ನು ಬಂಧನದಲ್ಲಿಡಲಾಗಿದ್ದ ಪಟ್ಟಣಗೆರೆ ಶೆಡ್‌ನಲ್ಲಿ ಪ್ರದೋಶ್ ಉಪಸ್ಥಿತರಿದ್ದರು ಮತ್ತು ಸಂತ್ರಸ್ತನ ಸಾವಿನ ಬಗ್ಗೆ ದರ್ಶನ್‌ಗೆ ಮಾಹಿತಿ ನೀಡಿದ್ದರು, ಸಹ-ಆರೋಪಿ ಪವಿತ್ರಾ ಗೌಡ ಅವರನ್ನು ಶೆಡ್‌ಗೆ ಕರೆತಂದಿದ್ದರು ಮತ್ತು ಸಂಪೂರ್ಣ ಸಂಚಿನಲ್ಲಿ ಭಾಗಿಯಾಗಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದು, ಅವರ ಮೇಲೆ ಕೊಲೆ, ಸಾಕ್ಷ್ಯ ನಾಶ ಹಾಗೂ ಸಾಮಾನ್ಯ ಅಪರಾಧ ಹೊಣೆಗಾರಿಕೆಯ ಅಪರಾಧಗಳ ಆರೋಪವನ್ನು ಹೊರಿಸಲಾಗಿದೆ.
ಹಲ್ಲೆ ನಡೆಯುವಾಗಲೂ ಪ್ರದೋಶ್ ಅಲ್ಲಿಯೇ ಉಪಸ್ಥಿತರಿದ್ದರು ಮತ್ತು ರೇಣುಕಾಸ್ವಾಮಿ ಮೇಲಿನ ಹಲ್ಲೆಯನ್ನು ನಿಲ್ಲಿಸುವಂತೆ ದರ್ಶನ್‌ಗೆ ಮನವಿ ಮಾಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ರೇಣುಕಾಸ್ವಾಮಿ ಸಾವಿಗೆ ಕಾರಣವಾದ ಘಟನೆಗಳಲ್ಲಿ ಪ್ರತ್ಯಕ್ಷದರ್ಶಿಯಾಗಿಯೂ ಹಾಗೂ ಭಾಗಿದಾರರಾಗಿಯೂ ಗುರುತಿಸಿಕೊಂಡಿರುವ ಪ್ರದೋಶ್‌ಗೆ ಇದೀಗ ಅಪ್ರೂವರ್ (ಸಾಕ್ಷಿದಾರ) ಸ್ಥಾನಮಾನ ಸಿಕ್ಕಿದೆ. ಹೀಗಾಗಿ, ಅವರ ಈ ಸಾಕ್ಷ್ಯವು ಪ್ರಾಸಿಕ್ಯೂಷನ್ ಪ್ರಕರಣಕ್ಕೆ ಅತ್ಯಂತ ಬಲವಾದ ಮತ್ತು ನಿರ್ಣಾಯಕ ಆಧಾರವಾಗಲಿದ್ದು, ದರ್ಶನ್​ ಮತ್ತು ಇತರ ಆರೋಪಿಗಳಿಗೆ ಭಾರಿ ಸಂಕಷ್ಟ ಎದುರಾಗಲಿದೆ.