ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎ2 ಆರೋಪಿ ನಟ ದರ್ಶನ್‌ಗೆ (Actor Darshan) ಮಾಫಿ ಸಾಕ್ಷಿ ಭಯ ಕಾಡುತ್ತಿದೆ. ತಮ್ಮದೇ ಗ್ಯಾಂಗ್ನಲ್ಲಿದ್ದ ಎ14 ಆರೋಪಿಯಾಗಿದ್ದ ಪ್ರದೋಶ್ ನ್ಯಾಯಾಲಯ ಮುಂದೆ ಅಪ್ರೂವರ್ ಆಗಿದ್ದು, ಇದೀಗ ಮಾಫಿ ಸಾಕ್ಷಿಯಾಗಿ ಬದಲಾಗಿದ್ದಾನೆ. ಇಡೀ ಘಟನೆಯನ್ನು ಕಣ್ಣಾರೆ ಕಂಡಿರುವ ಪ್ರದೋಶ್ ಸಾಕ್ಷಿಯಾಗಿ ಬದಲಾಗಿರುವುದು ದರ್ಶನ್ ಮತ್ತು ಗ್ಯಾಂಗ್ಗೆ ನುಂಗಲಾಗದ ತುತ್ತಾಗಿದೆ. ನಿನ್ನೆಯಿಂದಲೇ 59ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸುತ್ತಿರುವ ಪ್ರದೋಶ್, ಎರಡನೇ ದಿನವಾದ ಇಂದು (ಸೆ.29) ಇನ್ನಷ್ಟು ಸ್ಫೋಟಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ಚಿತ್ರದುರ್ಗದಿಂದ ಕರೆತಂದು ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವಾಗ ಆತನ ಮರ್ಮಾಂಗಕ್ಕೆ ಆರೋಪಿ ದರ್ಶನ 2 ಬಾರಿ ಬಲವಾಗಿ ಒದ್ದು, ಆತನ ಎದೆ ಮೇಲೆ ಎರಡೂ ಕಾಲಿನಿಂದ ನಿಂತು ತುಳಿಯುತ್ತಿದ್ದ. ಅಲ್ಲದೆ, ರೇಣುಕಾಸ್ವಾಮಿ ಕುತ್ತಿಗೆಗೆ ಕಾಲಿನಿಂದ ಬಲವಾಗಿ ತುಳಿದ ಎಂದು ಪ್ರದೋಶ್ ಹೇಳಿಕೆ ನೀಡಿದ್ದಾರೆ.
ರೇಣುಕಾಸ್ವಾಮಿ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಚಿತ್ರ ನಟಿಯರೂ ಸೇರಿ ಬಹಳಷ್ಟು ಮಹಿಳೆಯರಿಗೆ ರೇಣುಕಾಸ್ವಾಮಿ ತನ್ನ ಮರ್ಮಾಂಗದ ಪೋಟೋ ಕಳುಹಿಸಿ, ನಿಮ್ಮ ರೇಟ್ ಎಷ್ಟು ಎಂದು ಕೇಳಿದ್ದ ಎಂದು ಪ್ರದೋಶ ತನ್ನ ಹೇಳಿಕೆಯಲ್ಲಿ ದಾಖಲಿಸಿದ್ದಾರೆ. ಸದ್ಯ ಪ್ರದೋಶ್ ವಿಚಾರಣೆ ಮುಂದುವರಿದಿದ್ದು, ತನ್ನನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಿದ ಅಂಶಗಳನ್ನೇ ಪ್ರದೋಶ್ ನ್ಯಾಯಾಲಯದಲ್ಲಿ ತನ್ನ ಹೇಳಿಕೆಯನ್ನಾಗಿ ದಾಖಲಿಸುತ್ತಿದ್ದಾರೆ.
2024ರ ಜೂನ್ 8ರಂದು ದರ್ಶನ್ ಜತೆಗೆ ನಾನು ಪಾರ್ಟಿಗೆ ಹೋಗಿದ್ದೆ. ಪಾರ್ಟಿಯಲ್ಲಿ ನಟ ಯಶಸ್ ಸೂರ್ಯ ಮತ್ತು ಚಿಕ್ಕಣ್ಣ ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ, ಪ್ರಕರಣದ ಮೂರನೇ ಆರೋಪಿ ಪವನ್ ಬಂದು ಪವಿತ್ರಾಗೆ ರೇಣುಕಸ್ವಾಮಿ ಕಿರುಕುಳ ನೀಡಿದ್ದ ವಿಚಾರವನ್ನು ತಿಳಿಸಿದ. ಆಗ ದರ್ಶನ್, ಪವಿತ್ರಾಳಿಗೆ ವಿಡಿಯೋ ಕರೆ ಮಾಡಿ, ನೀನು ಅಳಬೇಡ, ನನಗೆ ಏನು ಮಾಡಬೇಕು ಗೊತ್ತಿದೆ ಎಂದು ಹೇಳಿದ. ಪಟ್ಟಣಗೆರೆ ಶೆಡ್‌ಗೆ ಹೋದ ದರ್ಶನ್, ರೇಣುಕಸ್ವಾಮಿ ಮೇಲೆ ಹಲ್ಲೆ ಮಾಡಿದ. ಇದೇ ವೇಳೆ, ಪವಿತ್ರಾ ಚಪ್ಪಲಿಯಿಂದ ರೇಣುಕಸ್ವಾಮಿಗೆ ಹೊಡೆದಳು. ಅಶ್ಲೀಲ ಮೆಸೆಜ್ ಮಾಡಿದ್ದ ಬೆರಳಿಗೆ ರಕ್ತ ಬರುವಂತೆ ಆರೋಪಿಗಳಾದ ಪವನ್ ಮತ್ತು ನಂದೀಶ್ ಹಲ್ಲೆ ಮಾಡಿದರು ಎಂದು ಪ್ರದೋಶ್ ಕೋರ್ಟ್ ಮುಂದೆ ಹೇಳಿದರು.
ಪ್ರದೋಶ್ ಅವರ ಮಾಫಿ ಸಾಕ್ಷಿ ಅರ್ಜಿಯ ಪ್ರಕಾರ, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ, ನಟ ದರ್ಶನ್ ಅವರ ಆಪ್ತ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ಗಳನ್ನು ಕಳುಹಿಸಿದನು ಎಂಬ ಕಾರಣಕ್ಕೆ ಆತನನ್ನು ಅಪಹರಿಸಿ ಕರೆತಂದು ಪಟ್ಟಣಗೆರೆ ಶೆಡ್ನಲ್ಲಿ ಬಂಧಿಸಿ, ಹಲ್ಲೆ ನಡೆಸಲಾಯಿತು. ಈ ವೇಳೆ ರೇಣುಕಾಸ್ವಾಮಿಯ ತಲೆಯಿಂದ ರಕ್ತಸುರಿಯುತ್ತಿತ್ತು ಎಂದು ಪ್ರದೋಶ್ ತಿಳಿಸಿದ್ದಾನೆ. ಅಷ್ಟೇ ಅಲ್ಲದೆ, ಪವಿತ್ರಾ ಗೌಡ ಕೂಡ ಸ್ಥಳಕ್ಕೆ ಬಂದಿದ್ದಳು ಹಾಗೂ ತನ್ನ ಚಪ್ಪಲಿಯಿಂದ ರೇಣುಕಾಸ್ವಾಮಿಗೆ ಹೊಡೆದಿದ್ದಳು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇದಿಷ್ಟೇ ಅಲ್ಲದೆ, ಇತರೆ ಆರೋಪಿಗಳು ರೇಣುಕಾಸ್ವಾಮಿಯ ಒಳಉಡುಪನ್ನು ಕೆಳಗಿಳಿಸಿ, ಆತನ ಮೇಲೆ ಭೀಕರವಾಗಿ ಹಲ್ಲೆ ನಡೆಸಿದರು. ನಂದೀಶ್, ಪವನ್ ಮತ್ತು ನಾಗರಾಜ್ ಅವರು ಮರದ ತುಂಡುಗಳು ಹಾಗೂ ನೈಲಾನ್ ಹಗ್ಗದಿಂದ ಹಲ್ಲೆ ನಡೆಸಿದ್ದು, ನಂದೀಶ್ ಅವರು ರೇಣುಕಾಸ್ವಾಮಿಯನ್ನು ಟಾಟಾ ಏಸ್ ವಾಹನಕ್ಕೆ ನೇಣುಹಾಕಲು ಯತ್ನಿಸಿದರೆ, ನಾಗರಾಜ್ ನೈಲಾನ್ ಹಗ್ಗದಿಂದ ಹಾಗೂ ಇತರೆ ಆರೋಪಿಗಳು ಮರದ ತುಂಡುಗಳಿಂದ ನಿರಂತರವಾಗಿ ಹೊಡೆದಿದ್ದಾರೆ ಎಂದು ಪ್ರದೋಶ್ ತನ್ನ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಪ್ರದೋಶ್ ತನ್ನ ಅರ್ಜಿಯಲ್ಲಿ ಮತ್ತಷ್ಟು ಗಂಭೀರ ಆರೋಪಗಳನ್ನು ಮಾಡಿದ್ದು, ಸಂತ್ರಸ್ತನ ಮೊಬೈಲ್‌ನಲ್ಲಿದ್ದ ಸಂದೇಶಗಳನ್ನು ಜೋರಾಗಿ ಓದುತ್ತಿದ್ದ ಸಮಯದಲ್ಲಿ ದರ್ಶನ್ ಅವರೇ ನೈಲಾನ್ ಹಗ್ಗವನ್ನು ತೆಗೆದುಕೊಂಡು ರೇಣುಕಾಸ್ವಾಮಿ ಅವರ ಕೈ ಹಾಗೂ ಬೆನ್ನಿನ ಮೇಲೆ ಹಲವು ಬಾರಿ ಹೊಡೆದಿದ್ದಾರೆ. ಮತ್ತೊಂದು ಹಂತದಲ್ಲಿ ರೇಣುಕಾಸ್ವಾಮಿಯನ್ನು ಸಂಪೂರ್ಣವಾಗಿ ನಗ್ನಗೊಳಿಸಿ, ದರ್ಶನ್ ಅವರೇ ಆತನ ಗುಪ್ತಾಂಗಗಳಿಗೆ ಪದೇಪದೆ ಒದ್ದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ರೀತಿಯ ಸತತ ಹಲ್ಲೆ ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂದು ತಾನು ಒಂದಕ್ಕಿಂತ ಹೆಚ್ಚು ಬಾರಿ ಮಧ್ಯಪ್ರವೇಶಿಸಿ ಎಚ್ಚರಿಕೆ ನೀಡಿದ್ದಾಗಿ ಪ್ರದೋಶ್ ತಿಳಿಸಿದ್ದಾರೆ. ಅಲ್ಲದೆ, ಸಂತ್ರಸ್ತನಿಗೆ ತಿನ್ನಲು ಆಹಾರ ಮತ್ತು ನೀರು ನೀಡಿದ ಬಳಿಕವೂ ದರ್ಶನ್ ರೇಣುಕಾಸ್ವಾಮಿ ಅವರ ಕತ್ತು ಹಾಗೂ ಎದೆಗೆ ಒದ್ದಿದ್ದರಿಂದ ಆತ ಕುಸಿದುಬಿದ್ದಿದ್ದಾನೆ. ಅಷ್ಟೇ ಅಲ್ಲದೆ, ದರ್ಶನ್ ತಮ್ಮ ಎರಡೂ ಕಾಲುಗಳನ್ನು ಸಂತ್ರಸ್ತನ ಎದೆಯ ಮೇಲೆ ಇರಿಸಿ ತುಳಿದರು, ಬಳಿಕ ನಾನು ಮತ್ತೆ ಮಧ್ಯಪ್ರವೇಶಿಸಿ ಅವರನ್ನು ದೂರ ಕರೆದುಕೊಂಡು ಹೋದೆ ಎಂದು ಪ್ರದೋಶ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಇನ್ನೂ ರೇಣುಕಾಸ್ವಾಮಿ ಮರಣದ ಬಳಿಕ ಕೃತ್ಯವನ್ನು ಮುಚ್ಚಿಹಾಕಲು ನಡೆದ ಯತ್ನಗಳ ಬಗ್ಗೆಯೂ ಅರ್ಜಿಯಲ್ಲಿ ವಿವರಣೆ ನೀಡಲಾಗಿದೆ. ಈ ದುರ್ಘಟನೆ ನಂತರದ ಪರಿಸ್ಥಿತಿಯನ್ನು ಸಮರ್ಥಿಸಿಕೊಳ್ಳಲು ಸಹಾಯ ಮಾಡದಿದ್ದರೆ ತಾನೇ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಟ ದರ್ಶನ್ ಬೆದರಿಕೆ ಹಾಕಿದ್ದರು ಎಂದು ಪ್ರದೋಶ್ ಆರೋಪಿಸಿದ್ದಾರೆ. ನಿಜವಾದ ಸಂಗತಿಯನ್ನು ಬಚ್ಚಿಟ್ಟು, ಬೇರೆಯದೇ ಕಥೆಯನ್ನು ಸೃಷ್ಟಿಸುವ ಕುರಿತು ಆ ಸಂದರ್ಭದಲ್ಲಿ ಸಾಕಷ್ಟು ಚರ್ಚೆಗಳು ನಡೆದವು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ರೇಣುಕಾಸ್ವಾಮಿಯನ್ನು ಶೆಡ್‌ಗೆ ಕರೆತಂದವರು ಪೊಲೀಸರ ಮುಂದೆ ಶರಣಾಗಬೇಕೇ? ಅಥವಾ ಬೇಡವೇ? ಎಂಬುದರ ಕುರಿತು ಚರ್ಚಿಸಿದ ನಂತರ, ನಾನು ಮತ್ತು ಇತರರು ದರ್ಶನ್ ಅವರ ನಿವಾಸಕ್ಕೆ ಮರಳಿ ತೆರಳಿದ್ದೆವು. ತನಿಖೆಯನ್ನು ದಿಕ್ಕು ತಪ್ಪಿಸಲು ಬೇರೆದೇ ಆದ ಸುಳ್ಳು ಕಥೆಯನ್ನು ರೂಪಿಸುವ ಬಗ್ಗೆ ಗುಂಪು ಚರ್ಚೆ ನಡೆಯಿತು. ಈ ವೇಳೆ, ರಾಘವೇಂದ್ರ ಶರಣಾಗಲು ಒಪ್ಪಿಕೊಂಡ ಮತ್ತು ಇನ್ನೂ ಕೆಲವರನ್ನು ವ್ಯವಸ್ಥೆ ಮಾಡಬೇಕು ಎಂದು ವಿನಯ್, ದರ್ಶನ್‌ಗೆ ತಿಳಿಸಿದ್ದಾನೆ ಎಂದು ಪ್ರದೋಶ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಇದಾದ ನಂತರ ದರ್ಶನ್ ಹಣದ ಬ್ಯಾಗ್‌ನೊಂದಿಗೆ ಬಂದು ನಾಗರಾಜಗೆ 5 ಲಕ್ಷ ರೂಪಾಯಿ ಹಾಗೂ ವಿನಯ್‌ಗೆ 10 ಲಕ್ಷ ರೂಪಾಯಿಗಳನ್ನು ನೀಡಿದರು ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆತರಲಾಗಿದ್ದು, ಜಗಳದ ವೇಳೆ ಕೊಲೆಯಾಗಿದೆ ಎಂದು ರಾಘವೇಂದ್ರ, ಕಾರ್ತಿಕ್ ಅಲಿಯಾಸ್ ಕಪ್ಪೆ ಮತ್ತು ನಿಖಿಲ್ ಪೊಲೀಸರ ಮುಂದೆ ಶರಣಾಗುವಂತೆ ಮಾಡಲು ಗುಂಪು ಸಂಚು ರೂಪಿಸಲಾಗಿತ್ತು ಎಂದು ಪ್ರದೋಶ್ ತಿಳಿಸಿದ್ದಾರೆ.
ಪೊಲೀಸರ ಮುಂದೆ ಶರಣಾಗುವ ಆರೋಪಿಗಳಿಗೆ ಜಾಮೀನು ದೊರಕಿಸಿಕೊಡುವುದಾಗಿ ಭರವಸೆ ನೀಡಲಾಗಿತ್ತು ಮತ್ತು ಮೃತದೇಹವನ್ನು ವಿಲೇವಾರಿ ಮಾಡಲು ಪ್ರಯತ್ನಿಸಲಾಗಿತ್ತು ಎಂಬ ಗಂಭೀರ ಆರೋಪವನ್ನೂ ಮಾಡಲಾಗಿದೆ. ಚಾಲಕನೊಬ್ಬ ಸಹಾಯ ಮಾಡಲು ನಿರಾಕರಿಸಿದ ನಂತರ, ರೇಣುಕಾಸ್ವಾಮಿಯ ಮೃತದೇಹವನ್ನು ಮೂಲ ಅಪರಾಧ ಸ್ಥಳದಿಂದ ಬಿಳಿ ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ಸುಮನಹಳ್ಳಿ ಬಳಿಯ ಪ್ರದೇಶಕ್ಕೆ ಸಾಗಿಸಲಾಯಿತು ಮತ್ತು ಆ ವಾಹನದ ಮುಂಭಾಗ ಹಾಗೂ ಹಿಂಭಾಗದ ನಂಬರ್ ಪ್ಲೇಟ್‌ಗಳನ್ನು ತೆಗೆದುಹಾಕಲಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಅಪರಾಧವು ಬೇರೆಡೆಯೇ ನಡೆದಿದೆ ಎಂಬ ಭ್ರಮೆಯನ್ನು ಮೂಡಿಸಲು ಮೃತದೇಹವನ್ನು ಸುಮನಹಳ್ಳಿ ಬಳಿಯ ಚರಂಡಿಗೆ ಎಸೆಯಲಾಗಿತ್ತು ಎಂದು ಪ್ರದೋಶ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.