ಕಪ್ ಖುಷಿಯಲ್ಲಿ ವಿರಾಟ್ ಕೊಹ್ಲಿ 
ಸ್ಯಾಂಡಲ್‌ವುಡ್

ಆರ್‌ಸಿಬಿ ಅದ್ವಿತೀಯ ಸಾಧನೆ : ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದಿದ್ದಕ್ಕೆ ಸ್ಯಾಂಡಲ್‌ವುಡ್ ತಾರೆಯರ ಸಂಭ್ರಮ

ಪ್ರಮುಖ ಮುಖ್ಯಾಂಶಗಳು

  • ಅಹಮದಾಬಾದ್ ನಲ್ಲಿ ಆರ್​ ಸಿಬಿ ಗೆಲುವು
  • ಆರ್ ಸಿಬಿ ಅದ್ವಿತೀಯ ಸಾಧನೆಗೆ ಕಲಾವಿದರು ಮೆಚ್ಚುಗೆ
  • ಮ್ಯಾಚ್ ನೋಡಿ ಖುಷಿಪಟ್ಟ ಸ್ಯಾಂಡಲ್ವುಡ್​ ಸ್ಟಾರ್ಸ
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಕರ್ನಾಟಕವನ್ನು ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 19ನೇ ಆವೃತ್ತಿಯಲ್ಲಿ ಗೆದ್ದು ಬೀಗಿದೆ. ಸತತ ಎರಡು ವರ್ಷ ಕಪ್ ಗೆಲ್ಲುವ ಮೂಲಕ ಕನ್ನಡಿಗರ ನೆಚ್ಚಿನ ಆರ್‌ಸಿಬಿ ತಂಡ ಅದ್ವಿತೀಯ ಸಾಧನೆ ಮಾಡಿದೆ. ಇನ್ನು ಆರ್‌ಸಿಬಿ ಗೆಲುವಿಗೆ ಸ್ಯಾಂಡಲ್‌ವುಡ್ ಸಿನಿಮಾ ತಾರೆಯರು ಕೂಡ ಸಂಭ್ರಮಿಸಿದ್ದಾರೆ. ನಟಿಯರಾದ ನಿಮಿಕಾ ರತ್ನಾಕರ, ಅಯಾನಾ, ನಾಗಶ್ರೀ ಹೆಬ್ಬಾರ್ ‘ವಿಜಯವಾಣಿ’ ಜತೆ ಖುಷಿ ಹಂಚಿಕೊಂಡಿದ್ದಾರೆ.

ಸಂಘಟಿತ ಆಟ

ಬೆಂಗಳೂರಿನಿಂದ ಅಹಮದಬಾದ್‌ಗೆ ತೆರಳಿ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಿದೆ. ದೊಡ್ಡ ಕ್ರೌಡ್ ಮಧ್ಯೆ ಮ್ಯಾಚ್ ನೋಡುವುದು ನಿಜಕ್ಕೂ ರೋಮಾಂಚಕ. ನಮ್ಮ ಆರ್‌ಸಿಬಿ ತಂಡ ಬ್ಯಾಕ್ ಟು ಬ್ಯಾಕ್ ಫೈನಲ್‌ಗೆ ಬಂದಿದ್ದು ಖುಷಿ ನೀಡಿತ್ತು. ಅದಕ್ಕಾಗಿಯೇ ಅಹಮದಾಬಾದ್‌ಗೆ ತೆರಳಿ ಫೈನಲ್ ಪಂದ್ಯ ವೀಕ್ಷಿಸಿದೆ. ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಆರ್‌ಸಿಬಿ ಆಟಗಾರ. ಇಡೀ ಸರಣಿಯುದ್ದಕ್ಕೂ ಅವರು ಚೆನ್ನಾಗಿ ಆಟ ಆಡಿದ್ದಾರೆ. ಫೈನಲ್‌ನಲ್ಲಿ ಕೂಡ ಮಿಂಚಿದರು. ಭುವನೇಶ್ವರ್ ಕುಮಾರ್ ಕೂಡ ಬೌಲಿಂಗ್ ಚೆನ್ನಾಗಿ ಮಾಡಿದರು. ಒಂದು ಮ್ಯಾಚ್‌ನಲ್ಲಿ ಸಿಕ್ಸ್ ಬಾರಿಸಿ, ಪಂದ್ಯ ಗೆಲ್ಲಿಸಿದ್ದರು. ಇಡೀ ತಂಡದ ಸಂಘಟಿತ ಆಟದಿಂದಾಗಿಯೇ ಕಪ್ ನಮ್ಮಲ್ಲೇ ಉಳಿಯುವಂತಾಯಿತು.

| ನಿಮಿಕಾ ರತ್ನಾಕರ್, ನಟಿ

ಈಗೇನಿದ್ದರೂ ಹ್ಯಾಟ್ರಿಕ್ ಕನಸು

ಆರ್‌ಸಿಬಿ ಅಭಿಮಾನಿಗಳ ಸುದೀರ್ಘ ಕನಸು ಕಳೆದ ವರ್ಷ ನನಸಾಗಿತ್ತು. 18 ವರ್ಷಗಳ ಬಳಿಕ ಮೊದಲ ಬಾರಿಗೆ ಆರ್‌ಸಿಬಿ ತಂಡ ಕಪ್ ಗೆದ್ದಿತ್ತು. ಇನ್ನು ಈ ಬಾರಿಯೂ ಕಪ್ ನಮ್ಮದಾಗುತ್ತದೆ ಎಂಬ ವಿಶ್ವಾಸವಿತ್ತು. ಅದು ಈಗ ಸಾಧ್ಯವಾಗಿದೆ. ಬ್ಯಾಕ್ ಟು ಬ್ಯಾಕ್ ಗೆದ್ದಿರುವುದು ಅಭಿಮಾನಿಗಳಿಗೆ ದೊಡ್ಡ ಖುಷಿ ತಂದಿದೆ. ಇನ್ನು ನನಗೂ ವಿರಾಟ್ ಕೊಹ್ಲಿ ಆಟ ಇಷ್ಟ. ಒತ್ತಡದಲ್ಲಿರುವಾಗಲೂ ಅವರು ತಾಳ್ಮೆಯಿಂದ ಆಟ ಆಡಿ ಪಂದ್ಯ ಗೆಲ್ಲಿಸಿದ್ದಾರೆ. ಈಗ ನಮ್ಮ ಮುಂದಿನ ನಡೆ ಹ್ಯಾಟ್ರಿಕ್ ಕನಸಿನತ್ತ ಅಷ್ಟೇ.

| ಅಯಾನಾ, ನಟಿ

ವಿರಾಟ್ ಆಕರ್ಷಕ ಆಟ

ಭಾನುವಾರ ಇಡೀ ಕುಟುಂಬದ ಜತೆ ಕುಳಿತು ೈನಲ್ ಮ್ಯಾಚ್ ವೀಕ್ಷಿಸಿದೆ. ನಮ್ಮ ಆರ್‌ಸಿಬಿ ಟೀಮ್ ತುಂ ಚೆನ್ನಾಗಿ ಚೇಸ್ ಮಾಡಿದರು. ಇನ್ನು 19ನೇ ಐಪಿಎಲ್ ಆರಂಭದಿಂದಲೂ ನಮ್ಮ ತಂಡ ಚೆನ್ನಾಗಿಯೇ ಆಡಿಕೊಂಡು ಬಂದಿತ್ತು. ಇಡೀ ಸರಣಿಯುದ್ದಕ್ಕೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಇಂಪ್ರೆಸ್ಸಿವ್ ಆಗಿತ್ತು. ಇನ್ನು ಅವರು ತಂಡದ ಆಟಗಾರರಿಗೆ ಹುರಿದುಂಬಿಸುವುದನ್ನು ನೋಡುವುದೇ ಖುಷಿಯಾಗುತ್ತದೆ.

| ನಾಗಶ್ರೀ ಹೆಬ್ಬಾರ್, ನಟಿ

ಸ್ಯಾಂಡಲ್‌ವುಡ್ ಹರ್ಷ

19ನೇ ಆವೃತ್ತಿಯಲ್ಲಿ ಆರ್‌ಸಿಬಿ ವಿಜಯ ಸಾಧಿಸಿರುವುದಕ್ಕೆ ಇಡೀ ಸ್ಯಾಂಡಲ್‌ವುಡ್ ಹರ್ಷ ವ್ಯಕ್ತಪಡಿಸಿದೆ. ನಿರ್ದೇಶಕ ಸಿಂಪಲ್ ಸುನಿ ಅಹಮದಾಬಾದ್‌ಗೆ ತೆರಳಿ ಮೈದಾನದಲ್ಲಿ ಮ್ಯಾಚ್ ನೋಡಿ ಸಂಭ್ರಮಿಸಿದ್ದಾರೆ. ಹಾಗೇ ನಟರಾದ ಶಿವರಾಜಕುಮಾರ್, ರಿಷಬ್ ಶೆಟ್ಟಿ, ನಟಿಯರಾದ ಸಪ್ತಮಿಗೌಡ, ನಮ್ರತಾ ಗೌಡ, ಶ್ರುತಿ, ಅಮೃತಾ ಪ್ರೇಮ್, ಹರ್ಷಿಕಾ ಪೂಣಚ್ಚ, ಆಶಿಕಾ ರಂಗನಾಥ್ ಸೇರಿ ಹಲವು ತಾರೆಯರು ಜಾಲತಾಣದ ಮೂಲಕ ಗೆಲುವನ್ನು ಸಂಭ್ರಮಿಸಿದ್ದಾರೆ.