"ರಂಗಿತರಂಗ' ಮೂಲಕ ನಾಯಕನಾಗಿ ಪದಾರ್ಪಣೆ ಮಾಡಿರುವ ನಿರೂಪ್ ಭಂಡಾರಿ "ರಾಜರಥ', "ಆದಿ ಲಕ್ಷ್ಮೀ ಪುರಾಣ', "ವಿಂಡೋ ಸೀಟ್' ಚಿತ್ರಗಳಲ್ಲಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. 11 ವರ್ಷಗಳ ಕರಿಯರ್ನಲ್ಲಿ ಕೇವಲ ನಾಲ್ಕು ಸಿನಿಮಾಗಳಲ್ಲಷ್ಟೇ ನಾಯಕನಾಗಿ ನಟಿಸಿದ್ದರೂ, ಕುಟುಂಬ ಪ್ರಧಾನ ಕಂಟೆಂಟ್ ಮೂಲಕ ಕೌಟುಂಬಿಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. "ವಿಂಡೋ ಸೀಟ್' (2022) ಬಳಿಕ ನಿರೂಪ್ ನಾಯಕನಾಗಿರುವ ಸಿನಿಮಾ ತೆರೆಗೆ ಬಂದಿಲ್ಲ. ಬದಲಾಗಿ "ವಿಕ್ರಾಂತ್ ರೋಣ'ದಲ್ಲಿ ವಿಲನ್, "ಎಡಗೈಯೇ ಅಪಘಾತಕ್ಕೆ ಕಾರಣ'ದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಾಗಂತ ಅವರು ಹೀರೋ ಆಗಿ ನಟಿಸುತ್ತಿಲ್ಲ ಅಂತಲ್ಲ. ಬದಲಾಗಿ ನಿರೂಪ್ ಸದ್ಯ ಐದು ಚಿತ್ರಗಳಲ್ಲಿ ನಾಯಕನಾಗಿ ನಟಿಸುತ್ತಿದ್ದು, ಈ ವರ್ಷ ಎರಡು ಸಿನಿಮಾಗಳು ತೆರೆಗೆ ಬರಲಿವೆ. ಅದರಲ್ಲೊಂದು ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಆ್ಯಕ್ಷನ್-ಕಟ್ ಹೇಳಿರುವ ನಿರೂಪ್ ಜತೆ ಪೃಥ್ವಿ ಅಂಬಾರ್, ಶಾನ್ವಿ ಶ್ರೀವಾಸ್ತವ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ "ಅಮೆರಿಕ ಅಮೆರಿಕ 2'. ಇದೇ ಸೆ.11ರಂದು ತೆರೆಗೆ ಬರಲಿವ ಈ ಹಿಟ್ ಚಿತ್ರದ ಸೀಕ್ವೆಲ್ ಬಗ್ಗೆ, "ನಾನು ಬೇಕೆಂದೇ ಯಾವ ಚಿತ್ರಕ್ಕೂ ಸಮಯ ತೆಗೆದುಕೊಳ್ಳುತ್ತಿಲ್ಲ. ಕಾರಣಾಂತರಗಳಿಂದ ಹಾಗಾಗುತ್ತಿದೆಯಷ್ಟೇ. ಈಗಿನ ಈಗಿನ ಪರಿಸ್ಥಿತಿಯಲ್ಲಿ ಸಿನಿಮಾ ಮಾಡುವುದು ಸರಳ, ರಿಲೀಸ್ ಮಾಡುವುದೇ ಸವಾಲು. "ರಂಗಿತರಂಗ' ಎರಡು ವರ್ಷ ಬೇಕಾಗಿತ್ತು. "ರಾಜರಥ' ಸಮಯದಲ್ಲಿ ನೋಟ್ ಬ್ಯಾನ್ ಆಗಿತ್ತು. ಇನ್ನು ನಾಗತಿಹಳ್ಳಿ ಸರ್ 2022ರಲ್ಲಿ "ಅಮೆರಿಕ ಅಮೆರಿಕ 2' ಕಥೆ ಹೇಳಿದರು. ಹಾಗಂತ ಇದುವರೆಗೆ ಕನ್ನಡ ಮಾತ್ರವಲ್ಲ ಬೇರೆ ಭಾಷೆಗಳಲ್ಲೂ ಈ ವಿಷಯವನ್ನು ಯಾರೂ ಟಚ್ ಮಾಡಿಲ್ಲ' ಎಂದು ಹೇಳಿಕೊಳ್ಳುತ್ತಾರೆ ನಿರೂಪ್.
ಫಾಸ್ಟ್ ಫುಡ್ ಅಲ್ಲ ಆರೋಗ್ಯಕರ ಬಾಳೆಎಲೆ ಊಟ!
"ಫಾಸ್ಟ್ ಫುಡ್ ರೀತಿ ಯಾವ ರೀತಿಯ ಸಿನಿಮಾಗಳು ವರ್ಕ್ ಆಗುತ್ತಿವೆ ಅಂತ ನೋಡಿಕೊಂಡು ಅದೇ ರೀತಿಯ ಸಿನಿಮಾ ಮಾಡುವುದು ಇತ್ತೀಚೆಗೆ ಕಾಮನ್ ಆಗಿದೆ. ಹೀಗಾಗಿ ಫ್ಯಾಮಿಲಿ ಆಡಿಯನ್ಸ್ಗೆ ಕನೆಕ್ಟ್ ಆಗುವ ಚಿತ್ರಗಳು ಇತ್ತೀಚೆಗೆ ಕಡಿಮೆಯಾಗಿವೆ' ಎನ್ನುವ ನಿರೂಪ್, ""ರಂಗಿತರಂಗ' ರಿಲೀಸ್ ಸಮಯದಲ್ಲಿ "ನಾವು ರಾಜಕುಮಾರ್ ಸಿನಿಮಾನೇ ಕೊನೆಯದಾಗಿ ನೋಡಿದ್ದು', "25 ವರ್ಷಗಳ ಬಳಿಕ ಮತ್ತೆ ಥಿಯೇಟರ್ಗೆ ಬಂದಿದ್ದೇವೆ' ಅಂತೆಲ್ಲ ಪ್ರೇಕ್ಷಕರು ಹೇಳುತ್ತಿದ್ದರು. ಅಂತಹ ಫ್ಯಾಮಿಲಿ ಆಡಿಯನ್ಸ್ಗೆ ಹೆಚ್ಚು ಕನೆಕ್ಟ್ ಆಗುವ ಚಿತ್ರವಿದು. ಪ್ರತಿ ಕುಟುಂಬಗಳೂ ನೋಡಲೇಬೇಕಾದ ಸಿನಿಮಾ' ಎನ್ನುತ್ತಾರೆ.
"ಬಿಆರ್ಬಿ'ಯಲ್ಲಿ ನಾನಿಲ್ಲ
ಸಾಮಾನ್ಯವಾಗಿ ಅಣ್ಣ ಅನೂಪ್ ಭಂಡಾರಿ ನಿರ್ದೇಶನದ ಚಿತ್ರಗಳಲ್ಲಿ ನಿರೂಪ್ ಕೂಡ ನಟಿಸಿದ್ದಾರೆ. ಆದರೆ, "ಬಿಲ್ಲ ರಂಗ ಬಾಷಾ'ದಲ್ಲಿ ಇದೇ ಮೊದಲ ಬಾರಿಗೆ ನಿರೂಪ್ ಅಣ್ಣನ ಚಿತ್ರದಲ್ಲಿ ನಟಿಸುತ್ತಿಲ್ಲವಂತೆ. "2018ರಿಂದಲೂ ಕಥೆ ಡಿಸ್ಕಷನ್ನಲ್ಲಿ ನಾನು ಕೂರುತ್ತಿದ್ದೆ. ಆದರೆ, ನಾನು ನನ್ನ ಸಿನಿಮಾಗಳಲ್ಲಿ ಬಿಜಿಯಿರುವ ಕಾರಣ "ಬಿಲ್ಲ ರಂಗ ಬಾಷಾ'ದಲ್ಲಿ ನಟಿಸುವುದಿರಲಿ, ಸೆಟ್ಗೂ ಹೋಗಲಾಗುತ್ತಿಲ್ಲ. ಇದುವರೆಗೆ ಕೇವಲ ಒಂದು ದಿನ ಮಾತ್ರ ಹೋಗಿದ್ದೇನೆ' ಎನ್ನುತ್ತಾರೆ. "ಅಮೆರಿಕ ಅಮೆರಿಕ 2' ಬೆನ್ನಲ್ಲೇ "ಸತ್ಯ ಸನ್ ಆ್ ಹರಿಶ್ಚಂದ್ರ' ಇದೇ ವರ್ಷ ರಿಲೀಸ್ ಆಗಲಿದೆ. ಜತೆಗೆ "ಅತಿಕಾಯ' ಸೇರಿ ಇನ್ನೂ ಎರಡು ಚಿತ್ರಗಳಲ್ಲಿ ನಿರೂಪ್ ನಟಿಸುತ್ತಿದ್ದಾರೆ.